ಬುಧವಾರ, ನವೆಂಬರ್ 13, 2019
22 °C
ಸರ್ಕಾರದ ಪಾವತಿ ವಿಳಂಬದಿಂದ ಸುಸ್ತಿದಾರರಾಗುತ್ತಿರುವ ಕಂಪನಿಗಳು

ಆರ್ಥಿಕ ಬಿಕ್ಕಟ್ಟು ಒಪ್ಪಿಕೊಳ್ಳದ ಸರ್ಕಾರ | ವಿಶ್ವಾಸಾರ್ಹತೆಗೆ ಧಕ್ಕೆ ಎಂದ ತಜ್ಞರು

Published:
Updated:
Prajavani

ಬೆಂಗಳೂರು: ‘ಉದ್ಯಮಸ್ನೇಹಿ ವಾತಾವರಣ ಕಲ್ಪಿಸುವಲ್ಲಿ ಭಾರತ 77ನೇ ಸ್ಥಾನದಿಂದ 66ಕ್ಕೆ ಏರಿಕೆ ಆಗಿರುವುದು ಒಳ್ಳೆಯದೇ. ಆದರೆ, ಒಪ್ಪಂದ ಅನುಷ್ಠಾನದಲ್ಲಿ ಭಾರತ 163ನೇ ಸ್ಥಾನಕ್ಕೆ ಕುಸಿದಿದೆ. ಇದು ದೇಶದ ವಿಶ್ವಾಸಾರ್ಹತೆಗೆ ಧಕ್ಕೆ ತರುವ ವಿಚಾರ’ ಎಂದು ಆರ್ಥಿಕ ತಜ್ಞೆ ಇಂದಿರಾ ರಾಜಾರಾಮನ್‌ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಕಾಯಿಲೆ ಪೀಡಿತ ಆರ್ಥಿಕತೆ’ ಕುರಿತ ಸಂವಾದದಲ್ಲಿ ಅವರು ಶನಿವಾರ ಅಭಿಪ್ರಾಯ ಹಂಚಿಕೊಂಡರು.

‘ವಹಿವಾಟುಗಳ ಕುರಿತ ಎಲ್ಲ ಒಪ್ಪಂದವೂ ಮುಖ್ಯ. ಆದರೆ, ನಮ್ಮಲ್ಲಿ ಸರ್ಕಾರವೇ ಒಪ್ಪಂದಗಳಿಗೆ ಬದ್ಧತೆ ಪ್ರದರ್ಶಿಸುತ್ತಿಲ್ಲ. ಸರ್ಕಾರದ ಸಂಸ್ಥೆಗಳೇ ನಿರ್ಮಾಣ ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಭವಿಷ್ಯನಿಧಿ ಸಂಸ್ಥೆಗೆ ಪಾವತಿಸಬೇಕಾದ ₹ 9 ಸಾವಿರ ಕೋಟಿ ಮೊತ್ತವನ್ನೂ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ನಿಲುವು ಆರ್ಥಿಕತೆ ಮೇಲೂ ದುಷ್ಪರಿಣಾಮ ಬೀರುತ್ತಿದೆ’ ಎಂದು ಅವರು ವಿಶ್ಲೇಷಿಸಿದರು.

‘ನಿರ್ಮಾಣ ಚಟುವಟಿಕೆಗೆ ಹಿಂದೆ ತೆರಿಗೆ ಇರಲಿಲ್ಲ. ಈಗ ನಿರ್ಮಾಣ ಕಾರ್ಯ ಆರಂಭವಾದಾಗಲೇ ಕಂಪನಿ ಜಿಎಸ್‌ಟಿ ಕಟ್ಟಬೇಕು. ಅವರಿಗೆ ಹಣ ಕೈಸೇರುವುದು ಫ್ಲ್ಯಾಟ್‌ ಮಾರಾಟ ಆದ ಬಳಿಕ. ಹಾಗಾಗಿ, ಅವರು ಅಪಾಯ ತೆಗೆದುಕೊಳ್ಳುವುದಿಲ್ಲ. ಇದರ ನೇರ ಪರಿಣಾಮ ತಟ್ಟುವುದು ನಿರ್ಮಾಣ ಕಾರ್ಮಿಕರಿಗೆ’ ಎಂದು ಜಿಎಸ್‌ಟಿ ಅವಾಂತರ ತೆರೆದಿಟ್ಟರು.

ಪತ್ರಕರ್ತ ಆರ್‌.ಜಗನ್ನಾಥನ್‌, ‘1990ರ ದಶಕದ ಬಳಿಕ ದೇಶದಲ್ಲಿ ಆರ್ಥಿಕ ಸುಧಾರಣೆಗಳೇ ಆಗಿಲ್ಲ. ಹಾಗಾಗಿ, ಈಗ ಬಿಕ್ಕಟ್ಟು ಎದುರಿಸಬೇಕಾಗಿದೆ. ಬೆಳವಣಿಗೆ ದರ ಶೇ 10ರಷ್ಟಿದ್ದಾಗ ಉದ್ಯೋಗ ಸೃಷ್ಟಿ ದರ ಶೇ 1.5ರಷ್ಟು ಹೆಚ್ಚುತ್ತದೆ. ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಯಾಂತ್ರೀಕರಣ ಪ್ರಕ್ರಿಯೆಯಿಂದಾಗಿ ಬ್ಯಾಂಕಿಂಗ್, ದೂರಸಂ‍ಪರ್ಕ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಉದ್ಯೊಗಗಳೂ ನಷ್ಟವಾಗುತ್ತಿವೆ. ಮಧ್ಯಮ ಆದಾಯದ ಕುಟುಂಬಗಳು ಕೆಲಸ ಕಳೆದುಕೊಳ್ಳುತ್ತಿವೆ’ ಎಂದು ವಸ್ತುಸ್ಥಿತಿ ಬಿಚ್ಚಿಟ್ಟರು.

‘ಭೂಮಿ, ಕಾರ್ಮಿಕರು ಹಾಗೂ ಕೃಷಿ ಆರ್ಥಿಕತೆ ಪ್ರಮುಖ ಅಂಗಗಳು. ಯುಪಿಎ ಅವಧಿಯಲ್ಲಿ ಜಾರಿಗೆ ಬಂದ ಕಠಿಣ ಭೂಸ್ವಾಧೀನ ಕಾಯ್ದೆ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ’ ಎಂದರು.

ಲೇಖಕ ವಿವೇಕ್‌ ಕೌಲ್‌, ‘ಮೋದಿ ಸರ್ಕಾರ ಆರ್ಥಿಕ ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳುತಿಲ್ಲ. ಕಳೆದೆರಡು ವರ್ಷಗಳಿಂದ ವೇತನದ ಆದಾಯ ಪ್ರಮಾಣ ಹೆಚ್ಚಳ ಸ್ಥಗಿತವಾಗಿದೆ. ಹೂಡಿಕೆ ಆಗುತ್ತಿಲ್ಲ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಜನರ ಕೈಗೆ ಹಣ ಸೇರಿದರೆ ಮಾತ್ರ ಆರ್ಥಿಕ ಸುಧಾರಣೆ ಸಾಧ್ಯ’ ಎಂದರು.

ಲೇಖಕ ನಾರಾಯಣ ರಾಮಚಂದ್ರನ್‌, ‘ಭಾರತದ ಆರ್ಥಿಕ ಸ್ಥಿತಿ ಈಗ ಬಿಂಬಿತವಾಗಿರುವಷ್ಟು ಹದಗೆಟ್ಟಿಲ್ಲ. ಈಗಲೂ ಅಭಿವೃದ್ಧಿ ದರ ಶೇ 6ರಷ್ಟಿದೆ. ಅಭಿವೃದ್ಧಿ ಸಾಮರ್ಥ್ಯದಲ್ಲಿ ಇತರರಿಗಿಂತ ಮುಂದಿದ್ದೇವೆ’ ಎಂದು ಹೇಳಿದರು.

‘ಆರ್‌ಸಿಇಪಿಯಿಂದ ಹೊರಗುಳಿದದ್ದು ಸರಿಯಲ್ಲ’
‘ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುಗಾರಿಕೆಯಿಂದ ಆರ್‌ಸಿಇಪಿ ಹೊರಗುಳಿಯುವ ಮೂಲಕ ನಾವು ಉತ್ತಮ ಅವಕಾಶ ಕಳೆದುಕೊಂಡಿದ್ದೇವೆ’ ಎಂದು ಇಂದಿರಾ ರಾಜಾರಾಮನ್‌ ಅಭಿಪ್ರಾಯಪಟ್ಟರು.

‘ಇದೊಂದು ಧೈರ್ಯದ ನಿರ್ಧಾರ ಅಲ್ಲ. ಇದು ನಮ್ಮ ದೌರ್ಬಲ್ಯಗಳನ್ನು ಜಗಜ್ಜಾಹೀರು ಮಾಡಿತು’ ಎಂದು ವಿವೇಕ ಕೌಲ್‌ ಹೇಳಿದರು.

 ಸರ್ಕಾರವೇಕೆ ಕಾಂಡೋಮ್‌ ಉತ್ಪಾದಿಸಬೇಕು?
‘ಕೇಂದ್ರ ಸರ್ಕಾರವು ಕಾಂಡೋಮ್‌ ಕೂಡಾ ಉತ್ಪಾದಿಸುತ್ತಿದೆ. ಇದು ಸರ್ಕಾರ ಮಾಡಬೇಕಾದ ಕೆಲಸವೇ’ ಎಂದು ವಿವೇಕ್‌ ಕೌಲ್‌ ಪ್ರಶ್ನಿಸಿದರು.

‘ಬಂಡವಾಳ ಹಿಂತೆಗೆಯುವ ಸರ್ಕಾರದ ನಿರ್ಧಾರ ಸರಿಯಾದುದು. ಊಟಿಯಲ್ಲಿ ಫೋಟೊ ಫಿಲ್ಮ್‌ ಉತ್ಪಾದಿಸುವ ಕಾರ್ಖಾನೆ ಇದೆ. ಇದು 15 ವರ್ಷಗಳ ಹಿಂದೆಯೇ ಕಾರ್ಯಾಚರಣೆ ನಿಲ್ಲಿಸಿದೆ. ಈಗ ಸಾಲ ಪಾವತಿಸಲು ಮತ್ತೆ ಸಾಲ ಮಾಡಬೇಕಾದ ಸ್ಥಿತಿ ತಲುಪಿದೆ. ಇದನ್ನು ಮುಚ್ಚುವುದು ಸೂಕ್ತವಲ್ಲವೇ’ ಎಂದರು.

‘ಆಪತ್ತಿಗೆ ಆಗದ ಒಡವೆ ಇದ್ದು ಪ್ರಯೋಜನವೇನು’ ಎಂದು ವಿವೇಕ್‌ ಪ್ರಶ್ನಿಸಿದರು. ‘ಭಾರತ್‌ ಪೆಟ್ರೋಲಿಯಂನಂತಹ ಕಂಪನಿ ಲಾಭದಲ್ಲಿದೆ. ಅವುಗಳು ಒಡವೆಗಳಿದ್ದಂತೆ. ಅವುಗಳನ್ನು ಮಾರುವುದು ಸರಿಯೇ’ ಎಂದು ನಾರಾಯಣ ರಾಮಚಂದ್ರನ್‌ ಪ್ರಶ್ನಿಸಿದರು.

**

ಆದಾಯ ತೆರಿಗೆ ಕಡಿಮೆ ಮಾಡುವುದು ಒಳ್ಳೆಯ ನಿರ್ಧಾರ ಅಲ್ಲ. ಇದರಿಂದ ದೇಶದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಅನಿಸುವುದಿಲ್ಲ.
ಇಂದಿರಾ ರಾಜಾರಾಮನ್‌, ಆರ್ಥಿಕ ತಜ್ಞೆ

**

ಜಿಲೆಟ್‌ ಕಂಪನಿ ಬ್ಲೇಡ್‌ ಮಾರಾಟವೂ ಕುಸಿದಿದೆ. ನಾನೇನಾದರೂ ನಿರ್ಮಲಾ ಆಗಿದ್ದರೆ, 21ನೇ ಶತಮಾನದ ಯುವಕರು ಗಡ್ಡ ಬಿಟ್ಟಿದ್ದರಿಂದ ಹೀಗಾಗಿದೆ ಎನ್ನುತ್ತಿದ್ದೆ.
–ವಿವೇಕ್‌ ಕೌಲ್‌, ಲೇಖಕ

ಪ್ರತಿಕ್ರಿಯಿಸಿ (+)