ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದ ಕ್ಯಾನ್ಸರ್‌: ಮನ್‌ದೀಪ್‌ಗೆ ಮರುಜನ್ಮ ನೀಡಿದ ಮನ್‌ದೀಪ್‌

Last Updated 9 ಫೆಬ್ರುವರಿ 2023, 21:24 IST
ಅಕ್ಷರ ಗಾತ್ರ

ಬೆಂಗಳೂರು: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪಂಜಾಬ್‌ನ ರೈತ ಮನ್‌ದೀಪ್‌ಗೆ ಕಸಿ ಮಾಡಲು ಕುಟುಂಬ ವರ್ಗದವರ ಆಕರ ಕೋಶಗಳು ಹೊಂದಾಣಿಕೆಯಾಗದೇ ಇದ್ದಾಗ, ಆಪದ್ಬಾಂಧವರಾಗಿ ಬಂದವರು ಸಾಫ್ಟ್‌ವೇರ್ ಎಂಜಿನಿಯರ್ ಮನ್‌ದೀಪ್‌.

ಇಬ್ಬರ ಆಕರ ಕೋಶಗಳು ಹೊಂದಾಣಿಕೆಯಾಗುವುದಷ್ಟೇ ಅಲ್ಲ, ಹೆಸರು, ರಾಜ್ಯ ಒಂದೇ ಆಗಿದ್ದು ವಿಶೇಷ. ರೈತ ಮನ್‌ದೀಪ್‌ಗೆ 2009ರಲ್ಲೇ ಕ್ಯಾನ್ಸರ್‌ ಪತ್ತೆಯಾಗಿತ್ತು. ಹ್ಯೂಮನ್‌ ಲ್ಯುಕೊಸೈಟ್‌ ಆಂಟಿಜೆನ್‌ (ಎಚ್‌ಎಲ್‌ಎ) ಹೊಂದಿಕೆಯಾಗುವ ಆಕರ ಕೋಶ ಕುಟುಂಬದವರಲ್ಲಿ ಲಭ್ಯವಾಗಿರಲಿಲ್ಲ. ಇಂತಹ ಸಮಯದಲ್ಲಿ ಅವರಿಗೆ ದಾನಿಗಳನ್ನು ಹುಡುಕಲು ನೆರವಾಗಿದ್ದು ಡಿಕೆಎಂಎಸ್‌ ಬಿಎಂಎಸ್‌ಟಿ ಫೌಂಡೇಷನ್‌.

ದಾನಿ ಮನ್‌ದೀಪ್‌ ಪತ್ನಿಯೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕುಟುಂಬದ ಸದಸ್ಯರ ನೋವು ಅರಿತಿದ್ದ ಅವರು, ಡಿಕೆಎಂಎಸ್‌ ಬಿಎಂಎಸ್‌ಟಿ ಫೌಂಡೇಷನ್‌ ಆಯೋಜಿಸಿದ್ದ ನೋಂದಣಿ ಅಭಿಯಾನದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ರಾಜೀವ್‌ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ದಿನೇಶ್‌ ಭುರಾನಿ ಅವರು 2020ರಲ್ಲಿ ಆಕರ ಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದರು.

ಮೂರು ವರ್ಷಗಳ ನಂತರ ಭೇಟಿ: ದಾನಿ ಹಾಗೂ ರೋಗಿ ಇಬ್ಬರೂ ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಗುರುವಾರ ಮೊದಲ ಭೇಟಿ ಮಾಡಿದರು. ಜೀವ ಉಳಿಸಿದ ಮನ್‌ದೀಪ್‌ಗೆ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾದ ಮನ್‌ದೀಪ್‌ ಕೃತಜ್ಞತೆ ಸಲ್ಲಿಸಿದರು.

‘ಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದರಿಂದ ಕ್ಯಾನ್ಸರ್‌ ರೋಗಿಗಳ ನೋವು ಬೇಗ ಅರ್ಥವಾಯಿತು. ರೋಗಿಗಳಿಗೆ ಸಹಾಯ ಮಾಡಲು ಅಂದೇ ನಿರ್ಧರಿಸಿದ್ದೆ. ಯಾವುದೇ ಸಮಸ್ಯೆ ಇಲ್ಲದೆ ಎಲ್ಲವೂ ಸುಸೂತ್ರವಾಗಿ ನೆರವೇರಿದೆ. ದಾನವೂ ಸಾರ್ಥಕವಾಗಿದೆ’ ಎಂದು ದಾನಿ ಮನ್‌ದೀಪ್‌ ಪ್ರತಿಕ್ರಿಯಿಸಿದರು.

‘ಕ್ಯಾನ್ಸರ್‌ ವಿರುದ್ಧ ಒಂದು ದಶಕ ಹೋರಾಟ ನಡೆಸಿದ್ದೆ. ಬದುಕುಳಿಯುವ ಆಸೆಯೂ ಕಮರಿತ್ತು. ನನ್ನದೇ ಹೆಸರಿನ ವ್ಯಕ್ತಿ ಮರುಜನ್ಮ ನೀಡಿದ್ದಾರೆ. ಅವರಿಗೆ ಋಣಿಯಾಗಿರುವೆ’ ಎಂದು ರೈತ ಮನ್‌ದೀಪ್‌ ಕಂಬನಿ ತುಂಬಿಕೊಂಡರು.

ಡಿಕೆಎಂಎಸ್‌ ಬಿಎಂಎಸ್‌ಟಿ ಫೌಂಡೇಷನ್‌ನ ಪ್ಯಾಟ್ರಿಕ್‌ ಪಾಲ್‌, ಗ್ಲೋಬಲ್‌ ಬಿಜಿಎಸ್‌ ಆಸ್ಪತ್ರೆಯ ಡಾ.ಗೋವಿಂದ್ ಎರಿಯಾಟ್‌ ನಾಯರ್
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT