ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬಗೆಯ ಕಸ ವಿಲೇವಾರಿ ಒಂದೇ ಏಜೆನ್ಸಿಗೆ

ನಗರದ ಸ್ವಚ್ಛತೆ: ಆಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ ಬಿಬಿಎಂಪಿ
Last Updated 18 ಏಪ್ರಿಲ್ 2022, 21:04 IST
ಅಕ್ಷರ ಗಾತ್ರ

ಬೆಂಗಳೂರು: ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಮತ್ತೆ ಆಮೂಲಾಗ್ರ ಬದಲಾವಣೆ ತರಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಮನೆ ಮನೆಯಿಂದ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಹೊಣೆಯನ್ನು ಬೇರೆ ಬೇರೆ ಗುತ್ತಿಗೆದಾರರಿಗೆ ವಹಿಸಿದ್ದ ಬಿಬಿಎಂಪಿ, ಇನ್ನು ಮುಂದೆ ವಾರ್ಡ್‌ನ ಹಸಿ ಕಸ, ಒಣ ಕಸ, ನೈರ್ಮಲ್ಯ ಕಸಗಳ ವಿಲೇವಾರಿಯ ಹೊಣೆಯನ್ನು ಒಂದೇ ಏಜೆನ್ಸಿಗೆ ವಹಿಸಲು ಮುಂದಾಗಿದೆ.

ಮೂರು ವರ್ಷಗಳ ಹಿಂದೆ ಬಿಬಿಎಂಪಿ 100 ವಾರ್ಡ್‌ಗಳಲ್ಲಿ ಕಸ ವಿಲೇವಾರಿಗೆ ಟೆಂಡರ್‌ ಕರೆದು ಗುತ್ತಿಗೆದಾರರನ್ನು ನೇಮಿಸಿತ್ತು. ಈ ಗುತ್ತಿಗೆಗಳ ಅವಧಿಯೂ ಮುಗಿದಿದೆ.

‘ಎಲ್ಲ 198 ವಾರ್ಡ್‌ಗಳಲ್ಲೂ ಕಸ ವಿಲೇವಾರಿಗೆ ಪ್ರತ್ಯೇಕವಾಗಿ ಟೆಂಡರ್‌ ಆಹ್ವಾನಿಸಿ ಗುತ್ತಿಗೆ ನೀಡಲು ಸಿದ್ಧತೆ ನಡೆಸಿದ್ದೇವೆ. ಯಾವುದೇ ಸ್ಥಾಪಿತ ಹಿತಾಸಕ್ತಿಗಳಿಗೆ ಅವಕಾಶ ಸಿಗಬಾರದು ಎಂಬ ಉದ್ದೇಶದಿಂದ ಟೆಂಡರ್‌ ದಾಖಲೆಗಳನ್ನು ಸಿದ್ಧಪಡಿಸುವುದಕ್ಕೆ ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಬಿಬಿಎಂಪಿ ಅಧಿಕಾರಿಗಳಿಲ್ಲ. ಕಸ ವಿಲೇವಾರಿ ವ್ಯವಸ್ಥೆಯ ಪಾಲುದಾರರು, ತಜ್ಞರು ಈ ಸಮಿತಿಯಲ್ಲಿದ್ದಾರೆ. ಟೆಂಡರ್‌ ದಾಖಲೆಗಳನ್ನು ಸಿದ್ಧಪಡಿಸುವ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ. ಈ ಪ್ರಸ್ತಾವಕ್ಕೆ ಬೆಂಗಳೂರು ನಗರ ಅಭಿವೃದ್ಧಿ ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೇ ಅನುಮೋದನೆ ಪಡೆದು ಶೀಘ್ರವೇ ಟೆಂಡರ್‌ ಆಹ್ವಾನಿಸಲಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬದಲಾವಣೆ ಏಕೆ?: ‘ಹಸಿ ಕಸ ಮತ್ತು ಒಣ ಕಸ ವಿಲೇವಾರಿಯ ಹೊಣೆಗಳನ್ನು ಬೇರೆ ಬೇರೆ ಏಜೆನ್ಸಿಗಳಿಗೆ ವಹಿಸಿದರೆ ‘ಮಿಶ್ರ ಕಸ’ ಉತ್ಪತ್ತಿಯಾಗುವ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಆದರೆ, ಈ ವ್ಯವಸ್ಥೆ ಜಾರಿಗೊಳಿಸಿದ ವಾರ್ಡ್‌ಗಳಲ್ಲೂ ಮಿಶ್ರ ಕಸ ಉತ್ಪಾದನೆ ಪ್ರಮಾಣ ಕಡಿಮೆ ಆಗಿಲ್ಲ. ಈಗಲೂ ಅನೇಕ ವಾರ್ಡ್‌ಗಳಲ್ಲಿ ಕಸ ರಾಶಿ ಹಾಕುವ (ಬ್ಲ್ಯಾಕ್‌ ಸ್ಪಾಟ್‌) ಪರಿಪಾಠ ಮುಂದುವರಿದಿದೆ’ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಉತ್ತರದಾಯಿತ್ವ ಇಲ್ಲ: ‘ಯಾವುದೇ ವಾರ್ಡ್‌ನಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗದಿದ್ದರೂ ಅದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಏಜೆನ್ಸಿಯನ್ನು ಹೊಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕಸ ವಿಲೇವಾರಿ ಸಮರ್ಪಕವಾಗಿ ಆಗದ ಬಗ್ಗೆ ಪ್ರಶ್ನಿಸಿದರೆ ಹಸಿ ಕಸ ಹಾಗೂ ಒಣ ಕಸ ಸಂಗ್ರಹಿಸುವವರು ಪರಸ್ಪರರನ್ನು ದೂಷಿಸುತ್ತಿದ್ದಾರೆಯೇ ಹೊರತು ಇದಕ್ಕೆ ಸಂಬಂಧಿಸಿದ ಉತ್ತರದಾಯಿತ್ವ ತೋರಿಸುತ್ತಿಲ್ಲ. ಕಸ ವಿಂಗಡಣೆ ಮಾಡಿ ಬೇರೆ ಬೇರೆ ಏಜೆನ್ಸಿಗಳಿಗೆ ಕೊಡುವ ವ್ಯವಸ್ಥೆಯಿಂದ ಜನರಿಗೂ ಸಮಸ್ಯೆ ಆಗುತ್ತಿದೆ’ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ವಿವರಿಸಿದರು.

‘ಈ ಹಿಂದೆ ಕಸ ವಿಲೇವಾರಿ ವ್ಯವಸ್ಥೆಯನ್ನು ಸರಿದಾರಿಗೆ ತರಲು ಟೆಂಡರ್‌ ಕರೆದಾಗಲೆಲ್ಲ ಗುತ್ತಿಗೆದಾರರು ಏನಾದರೂ ತಕರಾರು ತೆಗೆದು ಹೈಕೋರ್ಟ್‌ ಮೊರೆ ಹೋಗುತ್ತಿದ್ದರು. ಇದರಿಂದ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಈ ಬಾರಿ ಗುತ್ತಿಗೆದಾರರನ್ನೂ ವಿಶ್ವಾಸಕ್ಕೆ ಪಡೆದು ಟೆಂಡರ್‌ ಪ್ರಕ್ರಿಯೆ ನಡೆಸುವ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಎಲ್ಲ ವಾರ್ಡ್‌ಗಳಲ್ಲೂ ಟೆಂಡರ್‌ ಕರೆದು ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದರೆ ನಗರದ ಸ್ವಚ್ಛತೆ ಕಾಪಾಡುವ ಸವಾಲುಗಳನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಲು ಸಾಧ್ಯ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಾ.ಕೆ.ಹರೀಶ್‌ ಕುಮಾರ್‌, ‘ಬಹುತೇಕ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಟೆಂಡರ್‌ ಅವಧಿ ಮುಕ್ತಾಯವಾಗಿದೆ. ಹಾಗಾಗಿ ಎಲ್ಲ ವಾರ್ಡ್‌ಗಳಿಗೂ ಒಟ್ಟಿಗೆ
ಟೆಂಡರ್‌ ಆಹ್ವಾನಿಸಲು ಚಿಂತನೆ ನಡೆಸಿದ್ದೇವೆ. ಎಲ್ಲ ಪಾಲುದಾರರನ್ನು ವಿಶ್ವಾಸಕ್ಕೆ ಪಡೆದು ಟೆಂಡರ್‌ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ’ ಎಂದರು.

––

‘ಕಸ ಪಡೆಯಲು ಬರುತ್ತಿಲ್ಲ–ಬಿಸಾಡಿದರೆ ತೆರಬೇಕು ದಂಡ’

‘ಕಸ ಸಂಗ್ರಹ ಮಾಡುವವರು ಇತ್ತೀಚಿನ ದಿನಗಳಲ್ಲಿ ನಮ್ಮ ಮನೆ ಬಾಗಿಲಿಗೇ ಬರುತ್ತಿಲ್ಲ. ಕಸವನ್ನು ಎಷ್ಟು ದಿನ ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯ? ಸಮೀಪದಲ್ಲಿ ಎಲ್ಲಾದರೂ ಬಿಸಾಡಿದರೆ, ಮಾರ್ಷಲ್‌ಗಳು ದಂಡ ಹಾಕುತ್ತಾರೆ’ ಎಂದು ಉಲ್ಲಾಳು ವಾರ್ಡ್‌ನ ನಿವಾಸಿಯೊಬ್ಬರು ಅಹವಾಲು ತೋಡಿಕೊಂಡರು.

‘ಕಸ ವಿಲೇವಾರಿ ಗುತ್ತಿಗೆ ಅವಧಿ ಮುಗಿದಿರುವುದರಿಂದ ಕೆಲವು ಕಡೆ ಕಸ ವಿಲೇವಾರಿ ಸಮಸ್ಯೆ ಆಗುತ್ತಿರುವುದು ನಿಜ. ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ಈ ಸಮಸ್ಯೆಗಳು ನೀಗಲಿವೆ’ ಎಂದು ಕಸ ವಿಲೇವಾರಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.


ಎಂಟು ವಿಧದ ಕಸ ವಿಲೇವಾರಿಗೆ ಕ್ರಮ

ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿಕಸ, ಒಣ ಕಸ, ಪ್ರಾಣಿಗಳ ತ್ಯಾಜ್ಯ, ನೈರ್ಮಲ್ಯ ಕಸ, ಕಟ್ಟಡ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ, ಇ–ತ್ಯಾಜ್ಯ ಎಂದು ವಿಂಗಡಿಸಲಾಗುತ್ತದೆ. ಅದರಲ್ಲಿ ಹಸಿ ಕಸ, ಒಣ ಕಸ ಹಾಗೂ ನೈರ್ಮಲ್ಯ ತ್ಯಾಜ್ಯಗಳನ್ನು ಮನೆ ಮನೆಗೆ ಬಂದು ಸಂಗ್ರಹ ಮಾಡುವ ವ್ಯವಸ್ಥೆಯನ್ನು ಬಿಬಿಎಂಪಿ ಹೊಂದಿದೆ. ಪ್ರಾಣಿಗಳಿಂದ ಉತ್ಪತ್ತಿಯಾಗುವ ಕಸ ಮತ್ತು ಕಟ್ಟಡ ತ್ಯಾಜ್ಯಗಳ ವಿಲೇವಾರಿಗೆ ಪ್ರತ್ಯೇಕ ಏಜೆನ್ಸಿ ಗುರುತಿಸಿ ವ್ಯವಸ್ಥೆ ಕಲ್ಪಿಸಲಾಗಿದೆ.

ಕೈಗಾರಿಕಾ ತ್ಯಾಜ್ಯ, ಇ–ತ್ಯಾಜ್ಯ ಹಾಗೂ ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಹೊಣೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅವರದು. ಮಂಡಳಿಯೇ ಈ ಮೂರು ವಿಧದ ಕಸಗಳ ವಿಲೇವಾರಿಗೆ ಏಜೆನ್ಸಿಯನ್ನು ಗೊತ್ತುಪಡಿಸುತ್ತದೆ.

ಸಗಟು ಕಸ (ನಿತ್ಯ 100 ಕೆ.ಜಿ.ಗಿಂತ ಹೆಚ್ಚು ಕಸವನ್ನು ಉತ್ಪಾದಿಸುವ ) ಉತ್ಪಾದಕರು, ಅದರ ವಿಲೇವಾರಿಗೆ ಸ್ವತಃ ವ್ಯವಸ್ಥೆ ಮಾಡಿಕೊಳ್ಳಬೇಕು. ಸಗಟು ಕಸವಿಲೇವಾರಿ ಮೇಲೆ ಬಿಬಿಎಂಪಿಯು ನಿಗಾ ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT