ಬುಧವಾರ, ಜುಲೈ 28, 2021
24 °C
ಕೆ.ಆರ್.ಪುರ– ಕೆಐಎ 2ಬಿ ರೀಚ್‌ ನಿರ್ಮಾಣ ಕಾರ್ಯ ಚುರುಕು

ನಮ್ಮ ಮೆಟ್ರೊ: ಹೆಚ್ಚುವರಿ ಭೂಸ್ವಾಧೀನಕ್ಕೆ ಹಸಿರು ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕೆ.ಆರ್.ಪುರ ಮೆಟ್ರೊ ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮೆಟ್ರೊ ಮಾರ್ಗ (2ಬಿ ರೀಚ್) ನಿರ್ಮಾಣಕ್ಕೆ ಅಗತ್ಯವಿದ್ದ ಹೆಚ್ಚುವರಿ ಭೂಮಿ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. 3,723 ಚ.ಮೀ. ವಿಸ್ತೀರ್ಣದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಲಿದೆ. 

ಕೆ.ಆರ್.ಪುರ ಮೆಟ್ರೊ ನಿಲ್ದಾಣದಿಂದ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣಗೊಳ್ಳಲಿದೆ. ಒಟ್ಟು ₹10,584 ಕೋಟಿ ವೆಚ್ಚದ ಈ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ. ಅಗತ್ಯವಿದ್ದ ಹೆಚ್ಚುವರಿ ಭೂಮಿಯ ಸ್ವಾಧೀನಕ್ಕೂ ಈಗ ಅನುಮತಿ ದೊರೆತಿರುವುದು ಮಾರ್ಗದ ನಿರ್ಮಾಣ ಕಾರ್ಯ ಚುರುಕು ಪಡೆಯಲಿದೆ. 

ಬೈಯಪ್ಪನಹಳ್ಳಿಯಿಂದ ವೀರಣ್ಣನಪಾಳ್ಯದವರೆಗೆ ಮೆಟ್ರೊ ರೈಲು ಮಾರ್ಗದ ನಿರ್ಮಾಣದ ಉದ್ದೇಶಕ್ಕಾಗಿ ಹೆಚ್ಚುವರಿ ಭೂಮಿ ಬೇಕಾಗಿದ್ದು, ಬೆಂಗಳೂರು ಪೂರ್ವ ತಾಲ್ಲೂಕಿನ ಬೆನ್ನಿಗಾನಹಳ್ಳಿ, ಕೆ.ಜಿ. ಬಾಣಸವಾಡಿ, ಹೊರಮಾವು, ಬೆಂಗಳೂರು ಉತ್ತರ ತಾಲ್ಲೂಕಿನ ಹೆಣ್ಣೂರು, ನಾಗವಾರದಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. 

‘ಈ ಮಾರ್ಗಕ್ಕಾಗಿ ಸರ್ಕಾರದ 58 ಹಾಗೂ 203 ಖಾಸಗಿ ಆಸ್ತಿ ಸೇರಿ ಒಟ್ಟು 261 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿತ್ತು. ಕಳೆದ ಮಾರ್ಚ್‌ವರೆಗೆ ಒಟ್ಟು 190 ಆಸ್ತಿಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಪ್ರಕ್ರಿಯೆ ಮುಗಿದ ನಂತರ ಹೆಚ್ಚುವರಿ ಭೂಮಿಯ ಸ್ವಾಧೀನ ಕಾರ್ಯ ಪ್ರಾರಂಭಿಸಲಾಗುವುದು’ ಎಂದು  ಬಿಎಂಆರ್‌ಸಿಎಲ್‌ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಚನ್ನಪ್ಪಗೌಡರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚುವರಿ ಭೂಮಿಯ ಸ್ವಾಧೀನ ಕಾರ್ಯ ಪೂರ್ಣಗೊಂಡರೆ, ಈ ಮಾರ್ಗದ ಭೂಸ್ವಾಧೀನ ಕಾರ್ಯ ಸಂಪೂರ್ಣವಾಗಿ ಮುಗಿದಂತಾಗುತ್ತದೆ’ ಎಂದು ಅವರು ಹೇಳಿದರು. 

ಬಹುನಿರೀಕ್ಷಿತ ಮಾರ್ಗ: ಬೆಂಗಳೂರು ಹೊರವರ್ತುಲದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಇದು ಬಹುನಿರೀಕ್ಷಿತ ಮಾರ್ಗ. ಈ ಭಾಗದಲ್ಲಿನ ಸಂಚಾರ ದಟ್ಟಣೆಯ ಸಮಸ್ಯೆಗೂ ‘ಮೆಟ್ರೊ ರೈಲು’ ದೊಡ್ಡ ಪರಿಹಾರ ನೀಡಲಿದೆ ಎಂಬ ನಿರೀಕ್ಷೆ ಇಲ್ಲಿನ ಜನರದ್ದು. 2024ರ ವೇಳೆಗೆ ಈ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು