ಮಂಗಳವಾರ, ಆಗಸ್ಟ್ 3, 2021
28 °C
ಸೇವೆ ಆರಂಭದ ನಂತರ ಹೆಚ್ಚು ನಷ್ಟ ಸಂಭವ

ಲಾಕ್‌ಡೌನ್‌: ಬಿಎಂಆರ್‌ಸಿಎಲ್‌ಗೆ ತಿಂಗಳಿಗೆ ₹25 ಕೋಟಿ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ ಘೋಷಣೆಯ ದಿನದಿಂದ ಮೆಟ್ರೊ ರೈಲು ಸೇವೆ ಸ್ಥಗಿತಗೊಳಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಪ್ರತಿ ತಿಂಗಳಿಗೆ ₹25 ಕೋಟಿ ನಷ್ಟ ಅನುಭವಿಸುತ್ತಿದೆ.

‘ಸೇವೆ ಸ್ಥಗಿತಗೊಳಿಸಿದ್ದರೂ, ಸಿಬ್ಬಂದಿಯ ವೇತನ, ಭದ್ರತಾ ವೆಚ್ಚ, ನಿಶ್ಚಿತ ವಿದ್ಯುತ್‌ ಶುಲ್ಕ, ಬಡ್ಡಿ ಇತ್ಯಾದಿ ಖರ್ಚು ಸೇರಿ ನಿಗಮಕ್ಕೆ ತಿಂಗಳಿಗೆ ₹25 ಕೋಟಿ ನಷ್ಟವಾಗುತ್ತಿದೆ. ಈವರೆಗೆ ಒಟ್ಟು ₹75 ಕೋಟಿ ನಷ್ಟವಾಗಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್ಥಿಕ ಹೊರೆ ಇರುವುದರಿಂದ ಹೆಚ್ಚುವರಿ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ಮನವಿ ಮಾಡಿದ್ದೇವೆ. ಅನುದಾನ ಕೊರತೆ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಳ್ಳಬಾರದು ಎಂಬ ಉದ್ದೇಶದಿಂದ ಬ್ಯಾಂಕ್‌ಗಳಿಗೆ ₹500 ಕೋಟಿ ಸಾಲ ಸೌಲಭ್ಯ ಒದಗಿಸಲು ಮನವಿ ಸಲ್ಲಿಸಲಾಗಿದೆ’ ಎಂದು ಅವರು ಹೇಳಿದರು.

ಕಳೆದ ಮಾರ್ಚ್‌ನಲ್ಲಿ ನಿಗಮವು ₹40 ಕೋಟಿ ವರಮಾನ ನಿರೀಕ್ಷಿಸಿತ್ತು. ಆದರೆ, ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ₹24.35 ಕೋಟಿ ಮಾತ್ರ ವರಮಾನ ಬಂದಿತ್ತು. 2019–20ರಲ್ಲಿ ಸಂಸ್ಥೆಗೆ ₹430 ಕೋಟಿ ವರಮಾನ ಬಂದಿದೆ. ನಿಗಮವು ₹445 ಕೋಟಿ ಆದಾಯದ ಗುರಿ ಹೊಂದಿತ್ತು.

‘ಕಾರ್ಯಾಚರಣೆ ಸ್ಥಗಿತವಾಗಿರುವುದರಿಂದ ನಿಗಮ ದೊಡ್ಡಮಟ್ಟದ ನಷ್ಟವೇನೂ ಎದುರಿಸಿಲ್ಲ. ಆದರೆ, ಸೇವೆ ಪ್ರಾರಂಭವಾದ ನಂತರ, ವ್ಯಕ್ತಿಗತ ಅಂತರ ಕಾಪಾಡಬೇಕಿರುವುದರಿಂದ ಪ್ರಯಾಣಿಕರ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಸೇವೆ ಪ್ರಾರಂಭವಾದ ನಂತರವೂ ಹೆಚ್ಚು ಪ್ರಯಾಣಿಕರು ಬಾರದಿದ್ದರೆ ನಷ್ಟದ ಪ್ರಮಾಣ ಹೆಚ್ಚಾಗಬಹುದು’ ಎಂದು ಸೇಠ್‌ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು