ಭಾನುವಾರ, ಸೆಪ್ಟೆಂಬರ್ 19, 2021
26 °C
ಹೊರ ವರ್ತುಲ ರಸ್ತೆ–ವಿಮಾನ ನಿಲ್ದಾಣ ಮಾರ್ಗ

ನಮ್ಮ ಮೆಟ್ರೊ: ಆರು ನಿಲ್ದಾಣಗಳ ವಿನ್ಯಾಸ ಬದಲು ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಹೊರವರ್ತುಲ ರಸ್ತೆ ಮತ್ತು ವಿಮಾನ ನಿಲ್ದಾಣ ಸಂಪರ್ಕಿಸುವ ಎತ್ತರಿಸಿದ ಮಾರ್ಗದಲ್ಲಿ ಐದು ಮೆಟ್ರೊ ನಿಲ್ದಾಣಗಳ ಮೂಲ ವಿನ್ಯಾಸವನ್ನು ಬದಲಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ.

ಎರಡೂ ಮಾರ್ಗಗಳನ್ನು ಸಂಪರ್ಕಿಸಲು ಒಂದೇ ಪ್ಲಾಟ್‌ಫಾರಂ ನಿರ್ಮಾಣ ಮಾಡುವ ರೀತಿಯಲ್ಲಿ ಆರು ನಿಲ್ದಾಣಗಳ ವಿನ್ಯಾಸ ಬದಲಾಗಲಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಎಲ್ಲವೂ ಯೋಜನೆಯಂತೆ ನಡೆದರೆ, ನಗರದಲ್ಲಿನ ಎತ್ತರಿಸಿದ ನಿಲ್ದಾಣಗಳಲ್ಲಿ ಈ ಮಾದರಿಯ ಪ್ಲಾಟ್‌ಫಾರಂಗಳು ಮೊದಲ ಬಾರಿ ನಿರ್ಮಾಣವಾದಂತಾಗುತ್ತದೆ.  ಪೂರ್ವ–ಪಶ್ಚಿಮ ಕಾರಿಡಾರ್‌ನ (ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ) ಸುರಂಗ ಮಾರ್ಗದಲ್ಲಿ ಕಬ್ಬನ್‌ ಪಾರ್ಕ್‌, ಸರ್. ಎಂ.ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣಗಳಲ್ಲಿ ಈ ರೀತಿಯ ಪ್ಲಾಟ್‌ಫಾರಂಗಳು ಈಗಾಗಲೇ ಇವೆ. 

ವಿನ್ಯಾಸ ಬದಲಿಸಲು ಉದ್ದೇಶಿಸಿರುವ ನಿಲ್ದಾಣಗಳಲ್ಲಿ ಈಗಾಗಲೇ ಹೆಚ್ಚುವರಿಯಾಗಿ ಭೂಸ್ವಾಧೀನಪಡಿಸಿಕೊಳ್ಳುವ ಕಾರ್ಯವೂ ನಡೆದಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

‘ಈಗ ಕಾರ್ಯಾಚರಣೆ ನಡೆಯುತ್ತಿರುವ ಎತ್ತರಿಸಿದ ಮಾರ್ಗದ ಎಲ್ಲ ನಿಲ್ದಾಣಗಳು ಎರಡು ಬದಿ ಪ್ಲಾಟ್‌ಫಾರಂಗಳನ್ನು ಹೊಂದಿವೆ. ಅಂದರೆ, ಈ ಪ್ಲಾಟ್‌ಫಾರಂಗಳಲ್ಲಿ ಯಾವುದಾದರೂ ಒಂದು ಮಾರ್ಗದ ಕಡೆಗೆ ಹೋಗುವ ರೈಲನ್ನು ಮಾತ್ರ ಹತ್ತಬಹುದು. ಮತ್ತೊಂದು ಮಾರ್ಗಕ್ಕೆ ಹೋಗಬೇಕೆಂದರೆ, ಮೆಟ್ಟಿಲುಗಳನ್ನು ಬಳಸಿಕೊಂಡು ಬೇರೆ ಪ್ಲಾಟ್‌ಫಾರಂಗೆ ಹೋಗಬೇಕು’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

‘ಕಬ್ಬನ್‌ ಪಾರ್ಕ್‌ ಅಥವಾ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದ ಮಾದರಿಯಲ್ಲಿ, ವಿಮಾನ ನಿಲ್ದಾಣದ ಎತ್ತರಿಸಿದ ಮಾರ್ಗದಲ್ಲಿಯೂ ಇಂತಹ ಪ್ಲಾಟ್‌ಫಾರಂಗಳನ್ನು ನಿರ್ಮಿಸುವ ಉದ್ದೇಶವಿದೆ. ಪ್ಲಾಟ್‌ಫಾರಂನ ಎರಡೂ ಬದಿಯಲ್ಲಿ, ಎರಡು ಮಾರ್ಗದ ಕಡೆಗೆ ಸಾಗುವ ರೈಲುಗಳು ಲಭ್ಯವಾಗುವ ನಿಟ್ಟಿನಲ್ಲಿ ವಿನ್ಯಾಸ ಬದಲಿಸಲಾಗುತ್ತದೆ’ ಎಂದರು.

‘ಎಲ್ಲ ನಿಲ್ದಾಣಗಳ ಬಳಿಯೂ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವವೂ ಇದೆ. ಆದರೆ, ಈ ವಿನ್ಯಾಸ ಇನ್ನೂ ಅಂತಿಮವಾಗಿಲ್ಲ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು