ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: 15 ದಿನಗಳಲ್ಲಿ ನಗರಕ್ಕೆ ಹೊಸ ಟಿಬಿಎಂ

Last Updated 18 ಡಿಸೆಂಬರ್ 2020, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸುರಂಗ ಮಾರ್ಗ ಕೊರೆಯಲು ಮತ್ತೆ ಮೂರು ಯಂತ್ರಗಳು ಶೀಘ್ರವೇ ನಗರಕ್ಕೆ ಬರಲಿವೆ. 15 ದಿನಗಳಲ್ಲಿ ಒಂದು, ತಿಂಗಳಲ್ಲಿ ಎರಡು ಟಿಬಿಎಂ ನಗರಕ್ಕೆ ಬರಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮೂಲಗಳು ಹೇಳಿವೆ.

ಎರಡು ದೈತ್ಯ ಯಂತ್ರಗಳು ಚೀನಾದಿಂದ ಹಡಗಿನಲ್ಲಿ ಭಾರತದತ್ತ ಪ್ರಯಾಣ ಬೆಳೆಸಿವೆ. ಮತ್ತೊಂದು ಚೆನ್ನೈನಲ್ಲೇ ಸಿದ್ಧಗೊಳ್ಳುತ್ತಿದೆ. ಈ ಪೈಕಿ ಒಂದು ಯಂತ್ರವು ನಗರದ ಡೇರಿ ವೃತ್ತದಿಂದ ಮೈಕೋ ಇಂಡಸ್ಟ್ರೀಸ್ ನಡುವೆ ಸುರಂಗ ಕೊರೆಯುವ ಕಾರ್ಯ ಆರಂಭಿಸಲಿದೆ. ತಿಂಗಳ ಅಂತರದಲ್ಲಿ ಮತ್ತೊಂದು ಯಂತ್ರವು ಇದೇ ಮಾರ್ಗದಲ್ಲಿ ಕಾರ್ಯಾಚರಣೆಗೆ ಅಣಿಯಾಗಲಿದೆ. ಇನ್ನೊಂದು ಯಂತ್ರವನ್ನು ವೆಲ್ಲಾರ ಜಂಕ್ಷನ್‌ನಿಂದ ಮೈಕೋ ಇಂಡಸ್ಟ್ರೀಸ್ ನಡುವೆ ಸುರಂಗ ಕೊರೆಯಲು ನಿಯೋಜಿಸಲಾಗುವುದು ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ಜರ್ಮನ್ ಮೂಲದ ಹೆರೆನ್‌ಕ್ನೆಚ್ ಕಂಪನಿಯು ಈ ಯಂತ್ರಗಳನ್ನು ಪೂರೈಸುತ್ತಿದ್ದು, ಅದರ ಬಹುತೇಕ ಬಿಡಿಭಾಗಗಳು ಮಾತ್ರ ಚೀನಾದಲ್ಲಿ ತಯಾರಾಗುತ್ತಿವೆ. ಇದರೊಂದಿಗೆ ಸರಾಸರಿ ಪ್ರತಿ 2 ಕಿ.ಮೀ.ಗೆ (ಜೋಡಿ ಸುರಂಗ) ಒಂದರಂತೆ ಒಟ್ಟಾರೆ ಆರು ಟಿಬಿಎಂಗಳು ಸುರಂಗ ಕೊರೆಯಲಿವೆ ಎಂದುತಿಳಿಸಿದರು.

ಜಯನಗರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕೇಂದ್ರದಿಂದ ನಾಗವಾರ ನಡುವೆ 10.37 ಕಿ.ಮೀ. ಉದ್ದದ ಜೋಡಿ ಸುರಂಗ ಮಾರ್ಗಕ್ಕೆ ಒಂಬತ್ತು ಟಿಬಿಎಂಗಳನ್ನು ಅಣಿಗೊಳಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ. ಈ ಪೈಕಿ ಉಳಿದ ಮೂರು ಯಂತ್ರಗಳು ಚೆನ್ನೈನಲ್ಲೇ ತಯಾರಾಗಲಿವೆ. ಒಟ್ಟು ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಇದರಲ್ಲಿ ಎರಡು ಪ್ಯಾಕೇಜ್‌ಗಳಲ್ಲಿ ಈಗಾಗಲೇ ಸುರಂಗ ಕೊರೆಯುವ ಕೆಲಸ ಪ್ರಗತಿಯಲ್ಲಿದೆ. ಟ್ಯಾನರಿ ರಸ್ತೆಯ ಕಂಟೋನ್ಮೆಂಟ್‌ನಿಂದ ಶಿವಾಜಿನಗರ ಕಡೆಗೆ ಟಿಬಿಎಂ ‘ಊರ್ಜಾ’ ಹಾಗೂ ‘ವಿಂದ್ಯಾ’ ಮತ್ತು ಶಿವಾಜಿನಗರದಿಂದ ವೆಲ್ಲಾರ ಕಡೆಗೆ ‘ಅವನಿ’ ಕಾರ್ಯ ಆರಂಭಿಸಿವೆ.

ಅ. 17ರಂದು ಮೊದಲ ಟಿಬಿಎಂ ‘ಊರ್ಜಾ’ಗೆ ಚಾಲನೆ ದೊರೆತಿತ್ತು. ಇದು ಸುಮಾರು 200 ಮೀಟರ್ ಸುರಂಗ ಕೊರೆದಿದೆ. ನಂತರ ಕಾರ್ಯಾಚರಣೆ ಆರಂಭಿಸಿದ ‘ಅವನಿ’ ಹಾಗೂ ‘ವಿಂದ್ಯಾ’ ಕ್ರಮವಾಗಿ 150 ಮೀ. ಮತ್ತು 100 ಮೀ. ಮಾರ್ಗ ಕ್ರಮಿಸಿವೆ. ನೆಲದಡಿ ಮಾರ್ಗ ದುರ್ಗಮವಾಗಿದ್ದು, ಗಟ್ಟಿಕಲ್ಲುಮಿಶ್ರಿತ ಮಣ್ಣು ಇದೆ. ಆದರೂ, ಈವರೆಗೆ ಯಂತ್ರವೇ ಸ್ಥಗಿತಗೊಳ್ಳುವಂತಹ ಯಾವುದೇ ಅಡ್ಡಿ ಉಂಟಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT