ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಡುವೆಯೂ ಟಿಕೆಟ್‌ ವರಮಾನ ಶೇ 6ರಷ್ಟು ಹೆಚ್ಚಳ

ಬಿಎಂಆರ್‌ಸಿಎಲ್‌: ನಿವ್ವಳ ನಷ್ಟ ಒಟ್ಟು ₹ 598.58 ಕೋಟಿ
Last Updated 28 ಆಗಸ್ಟ್ 2020, 8:17 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) 2019-20ನೇ ಆರ್ಥಿಕ ವರ್ಷದಲ್ಲಿ ವಾಣಿಜ್ಯ ಕಾರ್ಯಾಚರಣೆಯಿಂದ (ಟಿಕೆಟ್‌ ಮಾರಾಟದಿಂದ) ₹ 376.88 ಕೋಟಿ ವರಮಾನ ಗಳಿಸಿದೆ. ಹಿಂದಿನ ವರ್ಷದ ವರಮಾನಕ್ಕೆ (₹ 355.02 ಕೋಟಿ) ಹೋಲಿಸಿದರೆ ಈ ವರ್ಷ ಕೋವಿಡ್‌ ನಡುವೆಯೂ ನಿಗಮದ ವರಮಾನದಲ್ಲಿ ಶೇ 6.16ರಷ್ಟು ಬೆಳವಣಿಗೆ ದಾಖಲಾಗಿದೆ.

2020ರ ಮಾರ್ಚ್‌ ತಿಂಗಳಲ್ಲಿ ಮೆಟ್ರೊ ಪ್ರಯಣಿಕರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿತ್ತು. ಮಾರ್ಚ್‌ 22ರಿಂದ ‘ನಮ್ಮ ಮೆಟ್ರೊ’ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ತದನಂತರವೂ ₹ 54.20 ಕೋಟಿ ಆದಾಯವನ್ನು ನಿಗಮ ಗಳಿಸಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸಾಲಗಳ ಮೇಲಿನ ಬಡ್ಡಿದರ ₹ 108.97 ಕೋಟಿಯನ್ನು ಪರಿಗಣಿಸಿದಾಗ ನಿಗಮ ₹ 54.77 ಕೋಟಿ ನಷ್ಟ ಅನುಭವಿಸಿದೆ. ಹಿಂದಿನ ವರ್ಷ ನಿಗಮವು ₹ 29 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು.

2019-20ರಲ್ಲಿ ಟಿಕೆಟ್‌ ಮಾರಾಟ ಹೊರತಾಗಿ ನಿಗಮವು ₹ 41.91ಕೋಟಿ ವರಮಾನ ಗಳಿಸಿದೆ. ಬಿಬಿಎಂಪಿಯು ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ನಿರ್ಬಂಧ ಹೇರಿದ್ದು ಹಾಗೂ ನಿಗಮದ ಆಸ್ತಿಗಳಿಂದ ಬರುವ ವರಮಾನ 2020 ಮಾರ್ಚ್‌ನಿಂದ ಇಳಿಕೆಯಾಗಿದ್ದು ಈ ವರಮಾನ ಕುಸಿತ ಕಾಣಲು ಪ್ರಮುಖ ಕಾರಣ ಎಂದು ನಿಗಮ ತಿಳಿಸಿದೆ. ಕಳೆದ ಸಾಲಿನಲ್ಲಿ ಟಿಕೆಟ್‌ ಮಾರಾಟ ಹೊರತಾಗಿ ₹ 47.33 ಕೋಟಿ ವರಮಾನವನ್ನು ನಿಗಮ ಗಳಿಸಿತ್ತು.

ರಾಜ್ಯ ಸರ್ಕಾರವು 2017–18 ಹಾಗೂ 2018–19ನ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದ ₹ 43 ಕೋಟಿ ನಗದು ನಷ್ಟವನ್ನು ಮರುಪಾವತಿಸಿದೆ.

ಹಿಂದಿನ ಆರ್ಥಿಕ ವರ್ಷದ ಕೊನೆಯ ತ್ರೈ ಮಾಸಿಕದಲ್ಲಿ ಕಾರ್ಯಾಚರಣೆ ವಿಭಾಗದ ಸಿಬ್ಬಂದಿಯ ವೇತನ ಪರಿಷ್ಕರಿಸಲಾಗಿತ್ತು. ಇದರಿಂದಾಗಿ 2019–20ನೇ ಸಾಲಿನಲ್ಲಿ ₹ 39.49 ಕೋಟಿಗಳಷ್ಟು ಆರ್ಥಿಕ ಹೊರೆ ಹೆಚ್ಚಾಗಿದೆ. ಆರು ಬೋಗಿಗಳ ರೈಲುಗಳ ನಿರ್ವಹಣೆ ಸಲುವಾಗಿ ವಿದ್ಯುತ್‌ ವೆಚ್ಚ ಹೆಚ್ಚಳವಾಗಿದೆ. ಹಂತ–1ರಲ್ಲಿ ಮಾಡಿಕೊಂಡ ಕೆಲವು ಒಪ್ಪಂದಗಳ ಅವಧಿ ಮುಗಿದು ಹೊಸ ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು. ಇವುಗಳ ನಿರ್ವಹಣೆಯ ವೆಚ್ಚವೂ ಹೆಚ್ಚಿದೆ. ಮೊದಲ ಹಂತದ ಸವಕಳಿ ₹ 583 ಕೋಟಿಯನ್ನು ಕಳೆದರೆ ನಿಗಮವು 2019–20ರಲ್ಲಿ ಒಟ್ಟು ₹ 598.58 ಕೋಟಿ ನಿವ್ವಳ ನಷ್ಟ ಅನುಭವಿಸಿದೆ. ಹಿಂದಿನ ವರ್ಷ ₹ 498.41 ಕೋಟಿ ನಿವ್ವಳ ನಷ್ಟವನ್ನು ನಿಗಮ ಅನುಭವಿಸಿತ್ತು ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

‘ಸಮಯ ಪರಿಪಾಲನೆಯಲ್ಲಿ ಮುಂಚೂಣಿ’

ರೈಲುಗಳು ಸರಿಯಾದ ಸಮಯದಲ್ಲಿ ಸಂಚರಿಸುವ ವಿಚಾರದಲ್ಲಿ 2019–20ನೇ ಸಾಲಿನಲ್ಲಿ ಬಿಎಂಆರ್‌ಸಿಎಲ್‌ ಮುಂಚೂಣಿಯಲ್ಲಿತ್ತು.

‘ರೈಲು ಸಂಚಾರದ ವಿಚಾರದಲ್ಲಿ ಈ ವರ್ಷ ಶೇ 98.8ರಷ್ಟು ಸಮಯ ಪರಿಪಾಲನೆ ಮಾಡಲಾಗಿದೆ. ದೇಶದ ಇತರ ಮೆಟ್ರೊ ರೈಲು ಸೇವೆಗಳಿಗೆ ಹೋಲಿಸಿದರೆ ಇದು ಅತ್ಯುತ್ತಮ ಸಾಧನೆ. ಪ್ರಯಾಣಿಕರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಸ್‌.ಯಶವಂತ ಚೌಹಾಣ್‌ ತಿಳಿಸಿದ್ದಾರೆ.

2019–20ರಲ್ಲಿ ಬಿಎಂಆರ್‌ಸಿಎಲ್‌ನ ಪ್ರಮುಖ ಸಾಧನೆಗಳು

ಎಲ್ಲಾ 50 ರೈಲುಗಳನ್ನು 6 ಬೋಗಿಗಳನ್ನಾಗಿ ಪರಿವರ್ತಿಸಲಾಯಿತು

ರೈಲಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಕಾಯ್ದಿರಿಸಲಾಯಿತು

15 ಮೆಟ್ರೊ ನಿಲ್ದಾಣಗಳಲ್ಲಿ 18 ಹೊಸ ಎಸ್ಕಲೇಟರ್‌ ಸೌಲಭ್ಯ ಕಲ್ಪಿಸಲಾಯಿತು

2019ರ ಅ.25ರಂದು ಗರಿಷ್ಠ ಸಂಖ್ಯೆಯಲ್ಲಿ ಪ್ರಯಾಣಿಕರು (6.01 ಲಕ್ಷ) ಮೆಟ್ರೊ ಸೇವೆಯನ್ನು ಬಳಸಿದ್ದರು

2020ರ ಮಾರ್ಚ್‌ 2ರಂದು ನಿಗಮವು ಗರಿಷ್ಠ ದೈನಂದಿನ ವರಮಾನವನ್ನು (₹ 1.67 ಕೋಟಿ) ಗಳಿಸಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT