ಬುಧವಾರ, ಜನವರಿ 29, 2020
31 °C
ದಕ್ಷಿಣ ಬೆಂಗಳೂರು ಕಡೆ ಸಾಗುವವರಿಗೂ ಸಹಕಾರಿ

ಮೆಟ್ರೊ: ಹೆಬ್ಬಾಳದಲ್ಲಿ 2 ನಿಲ್ದಾಣ, ವಿಮಾನ ನಿಲ್ದಾಣದ ಕಡೆಗೆ ಹೋಗುವವರಿಗೆ ಅನುಕೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಬ್ಬಾಳದಲ್ಲಿ ಎರಡು ಬೇರೆ ಕಾರಿಡಾರ್‌ಗಳಿಗೆ ಎರಡು ಮೆಟ್ರೊ ನಿಲ್ದಾಣಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ನಿರ್ಮಾಣ ಮಾಡಲಿದೆ.

ಹೆಬ್ಬಾಳದಿಂದ ದಕ್ಷಿಣ ಬೆಂಗಳೂರು ಕಡೆಗೆ ಹೋಗುವವರಿಗೆ ಒಂದು ನಿಲ್ದಾಣ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಕಡೆಗೆ ಹೋಗುವವರಿಗೆ ಮತ್ತೊಂದು ನಿಲ್ದಾಣ ನಿರ್ಮಾಣಗೊಳ್ಳಲಿದೆ. 

‘ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಭವಿಷ್ಯದಲ್ಲಿ ಈ ಮಾರ್ಗದಲ್ಲಿ ಹೆಚ್ಚು ರೈಲುಗಳು ಸಂಚರಿಸುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆಂಟ್ರಲ್‌ ಸಿಲ್ಕ್‌ಬೋರ್ಡ್‌–ಕೆ.ಆರ್. ಪುರದ ಹೊರವರ್ತುಲ ರಸ್ತೆ  (ಒಆರ್‌ಆರ್‌) ಮಾರ್ಗದ ನಿಲ್ದಾಣಕ್ಕೆ ಹೆಬ್ಬಾಳ ಉತ್ತರ ಹಾಗೂ ಜೆ.ಪಿ. ನಗರದಿಂದ ಹೆಬ್ಬಾಳ ಸಂಪರ್ಕಿಸುವ ಮಾರ್ಗದ ನಿಲ್ದಾಣಕ್ಕೆ ಹೆಬ್ಬಾಳ ಪಶ್ಚಿಮ ಎಂದು ಹೆಸರಿಡುವ ಯೋಚನೆ ಇದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಆದರೆ, ಒಆರ್‌ಆರ್‌–ಕೆಐಎ ಮಾರ್ಗದ ನಿಲ್ದಾಣ ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿಯೇ ನಿರ್ಮಾಣ ವಾದರೆ, ಜೆ.ಪಿ. ನಗರ–ಹೆಬ್ಬಾಳ ಮಾರ್ಗದ ನಿಲ್ದಾಣ ಮೂರನೇ ಹಂತದಲ್ಲಿ ತಲೆ ಎತ್ತುವ ಸಾಧ್ಯತೆ ಇದೆ. 

ಹೆಬ್ಬಾಳ ಪಶ್ಚಿಮ ಮೆಟ್ರೊ ನಿಲ್ದಾಣವು, ಹೆಬ್ಬಾಳ ರೈಲು ನಿಲ್ದಾಣದ ಬಳಿಯಲ್ಲಿ ಸ್ಥಾಪನೆಯಾದರೆ, ಹೆಬ್ಬಾಳ ಉತ್ತರ ನಿಲ್ದಾಣವು ಶವಾಗಾರದ ಬಳಿ ಸ್ಥಾಪನೆಯಾಗುವ ಸಾಧ್ಯತೆ ಇದೆ. ಇವರೆಡು ನಿಲ್ದಾಣಗಳ ನಡುವೆ 700ರಿಂದ 800 ಮೀಟರ್‌ ಅಂತರವಿರಲಿದೆ.

ಒಆರ್‌ಆರ್‌ ಹಾಗೂ ಪಶ್ಚಿಮ ಮೆಟ್ರೊ ಮಾರ್ಗಕ್ಕೆ ಕಿತ್ತಳೆ ಬಣ್ಣ ಹಾಗೂ ಒಆರ್‌ಆರ್‌–ವಿಮಾನ ನಿಲ್ದಾಣ ಮಾರ್ಗಕ್ಕೆ ತಿಳಿ ನೀಲಿ ಬಣ್ಣವನ್ನು ಆಯ್ಕೆ ಮಾಡಲಾಗಿದೆ. 

ಎರಡು ನಿಲ್ದಾಣ ಏಕೆ ಅನಿವಾರ್ಯ?: ಹೆಬ್ಬಾಳ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚು. ಇದು ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿರುವ ಮಾರ್ಗ ವಾಗಿರುವುದರಿಂದ ಬಿಎಂಟಿಸಿಯ ವಾಯುವಜ್ರ ಬಸ್‌ಗಳು ಇಲ್ಲಿಯೇ
ಸಂಚ ರಿಸುತ್ತವೆ.

ಉದ್ದೇಶಿತ ಉಪನಗರ ರೈಲು ಕಾರಿಡಾರ್‌ನಲ್ಲಿ, ಹೆಬ್ಬಾಳ ರೈಲು ನಿಲ್ದಾಣ ಬೈಯಪ್ಪನಹಳ್ಳಿ–ಚಿಕ್ಕಬಾಣಾವರ ಕಾರಿಡಾರ್‌ನ ಭಾಗವಾಗಲಿದೆ. ಲೊಟ್ಟೆಗೊಲ್ಲಹಳ್ಳಿಯಲ್ಲಿ ಮತ್ತೊಂದು ಉಪನಗರ ರೈಲು ನಿಲ್ದಾಣ ತಲೆ ಎತ್ತಲಿದ್ದು, ಇದು ಮೆಜೆಸ್ಟಿಕ್‌ ರೈಲು ನಿಲ್ದಾಣ–ದೇವನಹಳ್ಳಿ ಮತ್ತು ಬೈಯಪ್ಪನ ಹಳ್ಳಿ–ಚಿಕ್ಕಬಾಣಾವರ ಕಾರಿಡಾರ್‌ನ ಭಾಗವಾಗಲಿದೆ. 

ಹೆಚ್ಚು ಅನುಕೂಲ: ‘ಇದು ಉತ್ತರ ಮತ್ತು ದಕ್ಷಿಣ ಬೆಂಗಳೂರು ಸಂಪರ್ಕಿಸುವ ಪ್ರಮುಖ ಮಾರ್ಗ. ದೊಡ್ಡಬಳ್ಳಾ ಪುರ, ಚಿಕ್ಕಬಳ್ಳಾಪುರ ಮತ್ತು ಆಂಧ್ರಪ್ರದೇಶದಿಂದ ಅನೇಕ ಬಸ್‌ಗಳು ಬೆಂಗಳೂರು ಪ್ರವೇಶಿಸುವುದು ಇದೇ ಮಾರ್ಗದಿಂದ. ಹೀಗಾಗಿ, ಇಲ್ಲಿ ಎರಡು ನಿಲ್ದಾಣ ನಿರ್ಮಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಸಂಜೀವ ದ್ಯಾಮಣ್ಣವರ.

ಪಾದಚಾರಿ ಮೇಲ್ಸೇತುವೆಯೂ ಬೇಕು

ಮುಂದಿನ ದಿನಗಳಲ್ಲಿ ಹೆಬ್ಬಾಳ ರೈಲು ನಿಲ್ದಾಣ ಅಭಿವೃದ್ಧಿ ಹೊಂದಲಿದೆ. ಉದ್ದೇಶಿತ ಮೆಟ್ರೊ ನಿಲ್ದಾಣ ಇದಕ್ಕಿಂತ ಸ್ವಲ್ಪ ದೂರದಲ್ಲಿ ತಲೆ ಎತ್ತಲಿದೆ. ರೈಲು ಹಳಿಯ ಮತ್ತೊಂದು ಬದಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಭೂಮಿ ಇರುವ ಕಡೆಗೆ ಪಾದಚಾರಿ ಮೇಲ್ಸೇತುವೆ ನಿರ್ಮಾಣವಾಗಬೇಕು. ಇದು ನಿರ್ಮಾಣವಾದರೆ, ಭೂಪಸಂದ್ರ, ಸಂಜಯನಗರದ ನಿವಾಸಿಗಳಿಗೆ ಮೆಟ್ರೊ ರೈಲು ನಿಲ್ದಾಣಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಸಂಜೀವ್‌ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು