ಮಂಗಳವಾರ, ನವೆಂಬರ್ 19, 2019
22 °C
ಬಿಎಂಟಿಸಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದ ಸಿ.ಎಂ. ಹೇಳಿಕೆ : ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಅಧಿಕಾರಿಗಳ ಕಸರತ್ತು

ದರ ಇಳಿಕೆ– ಭಾರ ಹೊರುವುದೇ ಸರ್ಕಾರ?

Published:
Updated:
Prajavani

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಪ್ರಯಾಣ ದರ ಇಳಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದು ಕಾರ್ಯಸಾಧುವೇ ಎಂಬ ಪ್ರಶ್ನೆ ಉದ್ಭವವಾಗಿದೆ.

ವರ್ಷದಿಂದ ವರ್ಷಕ್ಕೆ ನಷ್ಟಕ್ಕೆ ಸಿಲುಕುತ್ತಿರುವ ಬಿಎಂಟಿಸಿಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಅಧಿಕಾರಿಗಳು ಹಲವು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇನ್ನೇನು ಉಪಚುನಾವಣೆ ಬರಲಿದೆ ಎನ್ನುವಾಗ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಯಾಣ ದರ ಇಳಿಕೆಯ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಸಂಸ್ಥೆಯ ಅಧಿಕಾರಿಗಳಲ್ಲೇ ಅಚ್ಚರಿ ಉಂಟುಮಾಡಿದೆ.

‘ವಾಯು ಮಾಲಿನ್ಯ ಕಡಿಮೆ ಮಾಡುವ ಮತ್ತು ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಆಗುವ ನಷ್ಟವನ್ನು ಸರ್ಕಾರ ತುಂಬಿಕೊಡಲಿದೆ’ ಎಂದೂ ಯಡಿಯೂರಪ್ಪ ಹೇಳಿದ್ದಾರೆ. ಪ್ರಯಾಣ ದರ ಕಡಿತದಿಂದ ಉಂಟಾಗುವ ನಷ್ಟದ ಭಾರವನ್ನು ಸರ್ಕಾರ ನಿಜಕ್ಕೂ ಹೊರುವುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟುಹಾಕಿದೆ.

ಬಸ್ ಪ್ರಯಾಣ ದರ ಇಳಿಕೆ ಸಾಧ್ಯತೆಗಳ ಬಗ್ಗೆ ಬಿಎಂಟಿಸಿ ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸದ ‌ಮುಖ್ಯಮಂತ್ರಿ ಅವರು, ಈ ಘೋಷಣೆ ಮಾಡಿದ್ದಾರೆ. ಈಗ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದು, ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

‘ಬಿಎಂಟಿಸಿ ಸಾರ್ವಜನಿಕರಿಗೆ ಸೇವೆ ಒದಗಿಸುವ ಸಂಸ್ಥೆಯಾಗಿದ್ದು, ಲಾಭ–ನಷ್ಟದ ಲೆಕ್ಕಾಚಾರ ಮಾಡಬೇಕಿಲ್ಲ. ಪ್ರಯಾಣಿಕರನ್ನು ಸಮೂಹ ಸಾರಿಗೆಗೆ ಸೆಳೆಯಲು ಪ್ರಯಾಣ ದರ ಕಡಿಮೆ ಮಾಡುವುದು ಸೂಕ್ತ’ ಎನ್ನುತ್ತಾರೆ ಸಾರಿಗೆ ತಜ್ಞರು.

‘ಆದರೆ, ನಗರ ವ್ಯಾಪ್ತಿಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಬಸ್ ಪ್ರಯಾಣದರ ಹೇಳಿಕೆ ಕೇವಲ ಘೋಷಣೆಯಾಗಿ ಉಳಿಯಬಾರದು’ ಎಂಬುದು ಅವರ ಒತ್ತಾಯ.

ಸದ್ಯ ಸಂಸ್ಥೆಯಲ್ಲಿ 6,521 ಬಸ್‌ಗಳಿದ್ದು, 825 ವೋಲ್ವೊ ಬಸ್‌ಗಳಿವೆ. ಈ ವೋಲ್ವೊ ಬಸ್‌ಗಳ ಸಂಚಾರದಿಂದ ಪ್ರತಿ ಕಿ.ಮೀಗೆ ₹ 20 ನಷ್ಟವನ್ನು ಬಿಎಂಟಿಸಿ ಎದುರಿಸುತ್ತಿದೆ. ಉಳಿದ ಬಸ್‌ಗಳೂ ಪ್ರತಿ ಕಿಲೋ ಮೀಟರ್‌ಗೆ ಸರಾಸರಿ ₹7.19 ನಷ್ಟವನ್ನೇ ಉಂಟುಮಾಡುತ್ತಿವೆ.

300 ಬಸ್‌ ಖರೀದಿಗಷ್ಟೇ ಟೆಂಡರ್‌: ‘ಹೊಸದಾಗಿ 6 ಸಾವಿರ ಬಸ್‌ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ. ಅದರಲ್ಲಿ ಶೇ 50ರಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗುವುದು’ ಎಂದು ಯಡಿಯೂರಪ್ಪ ಹೇಳಿದ್ದಾರೆ. ಸದ್ಯ ಫೇಮ್ ಇಂಡಿಯಾ ಯೋಜನೆಯಡಿ 300 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಟೆಂಡರ್ ಕರೆಯಲಾಗಿದೆ.

ಪ್ರಯಾಣ ದರ ಇಳಿಕೆ ಮಾರ್ಗೋಪಾಯ
ದರ ಇಳಿಕೆ ಮಾಡಿ ಬಸ್‌ಗಳಿಗೆ ಪ್ರಯಾಣಿಕರನ್ನು ಸೆಳೆಯುವುದು ಹೇಗೆ ಎಂಬ ಸಲಹೆಗಳನ್ನು ಬಸ್ ಪ್ರಯಾಣಿಕರ ವೇದಿಕೆ ನೀಡಿದೆ.

‘ಜಗತ್ತಿನಾದ್ಯಂತ ಪ್ರಮುಖ ನಗರಗಳಲ್ಲಿ ಬಸ್ ಪ್ರಯಾಣ ದರವನ್ನು ಇಳಿಕೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ದರ ಇಳಿಕೆ ಅಸಾಧ್ಯವೇನೂ ಅಲ್ಲ’ ಎಂದು ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್ ಹೇಳುತ್ತಾರೆ.

‘ನಷ್ಟದಲ್ಲಿರುವ ಬಿಎಂಟಿಸಿಗೆ ಆರ್ಥಿಕ ನೆರವನ್ನು ಸರ್ಕಾರ ನೀಡಬೇಕು. ಅದನ್ನು ಪ್ರೋತ್ಸಾಹಧನ ಎಂದು ಭಾವಿಸಬಾರದು, ಮೆಟ್ರೊ ರೈಲು ಯೋಜನೆ ರೀತಿಯಲ್ಲಿ ಬಂಡವಾಳ ಹೂಡಲಾಗುತ್ತಿದೆ ಎಂದೇ ಭಾವಿಸಬೇಕು. ಡೀಸೆಲ್ ಮತ್ತು ಮೋಟಾರು ವಾಹನ ತೆರಿಗೆಯನ್ನು ಬಿಎಂಟಿಸಿ ಬಸ್‌ಗಳಿಗೆ ವಿಧಿಸಬಾರದು. ಬದಲಿಗೆ ಖಾಸಗಿ ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ನಗರದಲ್ಲಿ ಬಹುತೇಕ ಕಡೆಗಳಲ್ಲಿ ವಾಹನ ನಿಲುಗಡೆಗೆ ಶುಲ್ಕ ಇಲ್ಲ. ಬೇರೆ ನಗರಗಳಲ್ಲಿ ಎಲ್ಲೇ ವಾಹನ ನಿಲ್ಲಿಸಿದರೂ ಶುಲ್ಕ ಪಾವತಿಸಲೇಬೇಕು. ನಗರದಲ್ಲೂ ಶುಲ್ಕ ವಸೂಲಿ ಮಾಡಿ ಅದನ್ನು ಬಿಎಂಟಿಸಿಗೆ ನೀಡಬೇಕು. ಬಿಬಿಎಂಪಿ ವಸೂಲಿ ಮಾಡುವ ಆಸ್ತಿ ತೆರಿಗೆಯಲ್ಲಿ ಸ್ವಲ್ಪ ಭಾಗವನ್ನು ಸಾರಿಗೆ ಸಂಸ್ಥೆಗೆ ನೀಡಬೇಕು’ ಎಂದರು.

‘ಇವುಗಳನ್ನು ಮಾಡಲು ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು. ಚುನಾವಣೆ ಸಂದರ್ಭದಲ್ಲಿ ಹೇಳಿಕೆ ನೀಡಿ ಸುಮ್ಮನಾಗಬಾರದು’ ಎಂದು ಅವರು ಒತ್ತಾಯಿಸಿದರು.

‘ಉಚಿತ ಪ್ರಯಾಣ ಕಲ್ಪಿಸಲಿ’
‘ಪ್ರಯಾಣ ದರ ಕಡಿಮೆ ಮಾಡುವುದು ಬೇಡ, ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಿ. ಆದರೆ, ಹೇಗೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್‌ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತಸುಬ್ಬರಾವ್ ಆಗ್ರಹಿಸಿದರು.

‘ನವದೆಹಲಿಯಲ್ಲಿ ಮಹಿಳೆಯರು ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಅದೇ ರೀತಿ ಇಲ್ಲಿಯೂ ಮಾಡಲಿ. ಅದಕ್ಕೂ ಮುನ್ನ ನೌಕರರಿಗೆ ಸರ್ಕಾರವೇ ವೇತನ ನೀಡಲಿ, ಡೀಸೆಲ್ ಖರೀದಿಯನ್ನೂ ಅವರೇ ಮಾಡಲಿ’ ಎಂದರು.

‘ನಾಲ್ಕು ವರ್ಷಗಳಿಂದ ಸಂಸ್ಥೆ ನಷ್ಟದಲ್ಲಿದ್ದು, ಸರ್ಕಾರ ಬಿಡಿಗಾಸನ್ನೂ ನೀಡಿಲ್ಲ. ನೌಕರರಿಗೆ ನೀಡಬೇಕಾದ ಗ್ರಾಚ್ಯುಟಿ, ಭವಿಷ್ಯ ನಿಧಿ ಹಣ ಬಾಕಿ ಉಳಿಸಿಕೊಂಡಿದೆ. ಆರ್ಥಿಕ ನೆರವು ನೀಡದೆ ಚುನಾವಣೆ ಸಂದರ್ಭದಲ್ಲಿ ಹೇಳಿಕೆ ನೀಡಿದರೆ ಪ್ರಯೋಜನವೇನು’ ಎಂದು ಅವರು ಪ್ರಶ್ನಿಸಿದರು.

‘ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ಪಡೆಯುವುದು ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಟ್ಟಂತೆ ಆಗಲಿದೆ. ಉದಾಹರಣೆಗೆ ದಿನಕ್ಕೆ 200 ಕಿಲೋ ಮೀಟರ್ ಸಂಚರಿಸಿದ ಬಸ್‌ ಅನ್ನು 250 ಕಿಲೋ ಮೀಟರ್ ಎಂದು ದಾಖಲಿಸಿ ಹಣ ಪಾವತಿಸಲಾಗುತ್ತದೆ. ಹಿಂದೆ ಈ ರೀತಿ ಆಗಿರುವ ಉದಾಹರಣೆಗಳಿದ್ದು, ತನಿಖೆಯೂ ನಡೆದಿದೆ. ಅಧಿಕಾರಿಗಳು ಸಂಸ್ಥೆಯ ಇತಿಹಾಸದ ಪುಟ ತಿರುಗಿಸಿ ನೋಡಬೇಕು’ ಎಂದರು.

**

ಬಸ್‌ ಪ್ರಯಾಣದರ ಕಡಿಮೆ ಮಾಡುವ ನಿರ್ಧಾರ ಸ್ವಾಗತಾರ್ಹ. ಪ್ರಯಾಣದರವನ್ನು ಶೇ 50ರಷ್ಟಾದರೂ ಕಡಿಮೆ ಮಾಡಬೇಕು.
-ಶ್ರೀನಿವಾಸ್‌ ಅಲವಿಲ್ಲಿ, ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಹಸಂಸ್ಥಾಪಕ

**
ಮುಖ್ಯಮಂತ್ರಿ ಅವರ ಸೂಚನೆಯಂತೆ ಬಸ್ ಪ್ರಯಾಣ ದರ ಕಡಿಮೆ ಮಾಡುವ ಮಾರ್ಗೋಪಾಯಗಳ ಬಗ್ಗೆ ಅಧ್ಯಯನ ನಡೆಸಲಾಗುವುದು.
-ಸಿ.ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ

ಪ್ರತಿಕ್ರಿಯಿಸಿ (+)