ಮಂಗಳವಾರ, ನವೆಂಬರ್ 19, 2019
22 °C

ಬಿಎಂಟಿಸಿ ಡಬ್ಬಿ ಬೇಡ ಬಸ್‌ ಬೇಕು

Published:
Updated:
Prajavani

ಹಳೆಯ ಅಟೊ ರಿಕ್ಷಾ, ಬೈಕ್‌ ಮತ್ತಿತರ ಖಾಸಗಿ ವಾಹನಗಳನ್ನು ತಡೆದು ಅವುಗಳ ಕಂಡೀಷನ್‌, ಎಮಿಷನ್‌ ಟೆಸ್ಟ್‌ ಸಂಬಂಧಿ ದಾಖಲೆಗಳನ್ನು ಕೇಳಲಾಗುತ್ತದೆ. ಪೊಲುಷನ್‌ ಸಂಬಂಧಿ ನಿಯಮಗಳನ್ನು ಉಲ್ಲಂಘಿಸಿದ್ದರೆ ಅದಕ್ಕೆ ದಂಡವನ್ನೂ ವಿಧಿಸಲಾಗುತ್ತದೆ. ಇದೆಲ್ಲ ಸರಿ. ಆದರೆ, ಬಿಎಂಟಿಸಿಯ ಕೆಲವು ಬಸ್‌ಗಳನ್ನು ನೋಡಿದರೆ ಇವೆಲ್ಲ ಅವುಗಳಿಗೂ ಅಪ್ಲೈ ಆಗುತ್ತಿದೆಯಾ.. ಎನ್ನುವ ಅನುಮಾನ ಕಾಡುತ್ತದೆ.

ಥಣಿಸಂದ್ರ ಮುಖ್ಯರಸ್ತೆಯಲ್ಲಿ ಇಂಥ ಬಿಎಂಟಿಸಿ ಬಸ್‌ಗಳು ಓಡಾಡುತ್ತಿವೆ. ಕಣ್ಣಿಗೆ ರಾಚುವ ಹಾಗೆ ಗುಜರಿಗೆ ಹೋಗುವ ದಿನಗಳನ್ನು ಮುಂದೂಡಲಾಗಿದೆ ಎನ್ನುವ ಸತ್ಯ ಹೊತ್ತೇ ಅವು ಓಡಾಡುತ್ತಿವೆ ಅನ್ನಿಸುತ್ತದೆ. ಅಷ್ಟು ಕೆಟ್ಟ ಸ್ಥಿತಿಯಲ್ಲಿರುವ ಇಂಥ ವಾಹನಗಳನ್ನು ಇನ್ನೂ ಯಾಕಾದರೂ ಓಡಿಸುತ್ತಿದ್ದಾರೊ?

ಈ ಬಸ್‌ಗಳ ಗಡ ಗಡ ಸದ್ದು, ಡ್ರೈವರ್‌ ಗಿಯರ್‌ ಬದಲಾಯಿಸುವಾಗಲೆಲ್ಲ ಹೊಮ್ಮುವ ಖಡ್‌ ಖಡ್‌ ಎಂಬ ಕರ್ಕಶ ಕರ್ಣಕಠೋರ. ಇನ್ನು ಇವುಗಳ ಕುಲುಕಾಟಕ್ಕೆ ಮಕ್ಕಳು, ಹೆಂಗಸರು ಅದರಲ್ಲೂ ಗರ್ಭಿಣಿಯರು ಮತ್ತು ವೃದ್ಧರು ಅದೆಷ್ಟು ಕಿರಿ ಕಿರಿ ಅನುಭವಿಸುತ್ತಾರೊ ಅದು ಅವರಿಗೇ ತಿಳಿಯಬಹುದಾದ ನರಕ. ಸಾರ್ವಜನಿಕರ ಜೀವ, ಆರೋಗ್ಯ ಮತ್ತು ಅವರನ್ನು ಯಾವ ತೊಂದರೆಯಿಲ್ಲದೆ ಸುರಕ್ಷಿತವಾಗಿ ಸಾಗಿಸುವ ಕಾಳಜಿ ಸಾರಿಗೆ ಸಂಸ್ಥೆಯ ಜವಾಬ್ದಾರಿಯಲ್ಲವೇ?

ಕೂರಲು ಇರುವ ಆಸನಗಳ ಸ್ಥಿತಿ ನೋಡಿದರೆ ಪ್ರಯಾಣದ ಬಗ್ಗೆಯೇ ಜಿಗುಪ್ಸೆ ಮೂಡುತ್ತದೆ. ‘ನಗರದ ಸಂಚಾರ ದಟ್ಟಣೆಯನ್ನು ತಪ್ಪಿಸಲು ಸಾಮೂಹಿಕ ಸಾರಿಗೆ ವ್ಯವಸ್ಥೆ ಬಳಸಿ’ ಎನ್ನುವರ್ಥದಲ್ಲಿ ಸ್ವತಃ ಸಾರಿಗೆ ಇಲಾಖೆಯೇ ಜಾಹಿರಾತು ನೀಡುತ್ತದೆ. ಅಂಥ ಸಂದೇಶದ ಫಲಕಗಳು ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ರಾರಾಜಿಸುತ್ತವೆ. ವಾಸ್ತವದಲ್ಲಿರುವ ಅಧ್ವಾನ ಗಮನಿಸಿ ಯಾರು ತಾನೆ ಬಿಎಂಟಿಸಿ ಬಸ್‌ ಪ್ರಯಾಣ ಬಯಸುತ್ತಾರೆ?

ದೇಶದ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಕಾಯಕ ಅರಸಿ ಬರುವ ಕೂಲಿ, ಕಾರ್ಮಿಕರು ಮತ್ತು ಬಡವರು ಸಹಜವಾಗಿ ‘ಎಂಥದೋ ಒಂದು ಪ್ರಯಾಣಕ್ಕೆ ನೆರವಾದರೆ ಸಾಕು’ ಎನ್ನುವ ಉದಾರ ನೀತಿ ಅನುಸರಿಸಿ ಇಂಥ ಬಸ್‌ಗಳನ್ನೂ ಪ್ರಯಾಣಕ್ಕೆ ಬಳಸುತ್ತಾರೆ. ‘ಹೇಗೂ ನಡೆಯುತ್ತೆ’ ಎನ್ನುವ ಧೋರಣೆ ಸಾರಿಗೆ ಸಂಸ್ಥೆಯದು ಎನ್ನುವುದಕ್ಕೆ ಇಂಥ ಬಸ್‌ಗಳು ಸಾಕ್ಷಿಯಲ್ಲವೇ? 

ಅಷ್ಟಕ್ಕೂ ಪ್ರಯಾಣಿಕರು ಪುಕ್ಕಟೆಯಾಗಿ ಈ ಬಸ್‌ಗಳಲ್ಲಿ ಓಡಾಡುವುದಿಲ್ಲವಲ್ಲ! ನಿಗದಿತ ದರದ ಟಿಕೆಟ್‌ ಕೊಂಡು ಓಡಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಸಾರಿಗೆ ಇಲಾಖೆ ಕನಿಷ್ಠ ಸೌಲಭ್ಯವನ್ನಾದರೂ ವ್ಯವಸ್ಥೆ ಮಾಡಬಹುದಲ್ಲವೇ? ಕೆಲವು ರೂಟ್‌ಗಳಲ್ಲಿ ಹೊಸ ಬಸ್‌ಗಳನ್ನು ಓಡಾಡಿಸುವುದೇನೋ ಹೌದು. ಆದರೆ ಇದು ಎಲ್ಲ ಕಡೆಗೂ ಇರಲಿ. ಯಾವ ರೂಟ್‌ ಆದರೂ ಸರಿ. ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ, ಗುಜರಿಗೆ ಹೋಗಬಹುದಾದ ಬಸ್‌ಗಳನ್ನು ಉಳಿಸಿಕೊಳ್ಳಲು ಪ್ರಯಾಣಿಕರ ಬಲಿಪಶು ಮಾಡುವುದು ಎಷ್ಟು ಸರಿ? ಚಿತ್ರಗಳು: ದಿಲ್

ಪ್ರತಿಕ್ರಿಯಿಸಿ (+)