ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್‌ ಡಿಕ್ಕಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

ತಾಯಿ ಜತೆ ಶಾಲೆಗೆ ಹೊರಟಿದ್ದ ಲಯಶ್ರೀ * ಬಸ್‌ ಚಾಲಕ ವಶಕ್ಕೆ
Last Updated 22 ನವೆಂಬರ್ 2022, 21:37 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್‌ ಹಾಗೂ ಸ್ಕೂಟರ್‌ ನಡುವೆ ಮಂಗಳವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಲಯಶ್ರೀ (16) ಮೃತಪಟ್ಟಿದ್ದಾಳೆ.

‘ಸಿಗೇಹಳ್ಳಿ ನಿವಾಸಿ ಲಯಶ್ರೀ, ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿದ್ದಳು. ತಾಯಿ ಪ್ರಿಯದರ್ಶಿನಿ (45) ಹಾಗೂ ತಮ್ಮ ಯಶ್ವಿನ್ (11) ಜೊತೆ ಸ್ಕೂಟರ್‌ನಲ್ಲಿ ಶಾಲೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಪ್ರಿಯದರ್ಶಿನಿ ಹಾಗೂ ಯಶ್ವಿನ್ ಸಹ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಅಪಘಾತಕ್ಕೆ ಕಾರಣವಾಗಿದ್ದ ಚಾಲಕ, ಬಸ್‌ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದ. ಈತನನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಶಾಲಾ ವಾಹನ ಬದಲು ಸ್ಕೂಟರ್: ‘ಲಯಶ್ರೀ ಹಾಗೂ ಯಶ್ವಿನ್ ನಿತ್ಯವೂ ಶಾಲಾ ವಾಹನದಲ್ಲಿ ಹೋಗಿ ಬರುತ್ತಿದ್ದರು. ಮಂಗಳವಾರ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕೆ ಹೊರಟಿದ್ದ ತಾಯಿ ಪ್ರಿಯದರ್ಶಿನಿ, ತನ್ನದೇ ಸ್ಕೂಟರ್‌ನಲ್ಲಿ ಶಾಲೆಯವರೆಗೂ ಬಿಡುವುದಾಗಿ ಹೇಳಿ ಮಕ್ಕಳಿಬ್ಬರನ್ನು ಕರೆದೊಯ್ಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಭಟ್ಟರಹಳ್ಳಿ ಕಡೆಯಿಂದ ಟಿ.ಸಿ ಪಾಳ್ಯದತ್ತ ಸರ್ವೀಸ್‌ ರಸ್ತೆಯಲ್ಲಿ ಸ್ಕೂಟರ್(ಕೆಎ 03 ಜೆಎಫ್ 9445) ಹೊರಟಿತ್ತು. ಟಿ.ಸಿ.ಪಾಳ್ಯದಿಂದ ಭಟ್ಟರಹಳ್ಳಿ ಕಡೆಗೆ ಬಿಎಂಟಿಸಿ ಬಸ್ (ಕೆಎ 01 ಎಫ್‌ಎ 1467) ಬರುತ್ತಿತ್ತು. ಚಾಲಕ, ಅತೀ ವೇಗವಾಗಿ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದ. ಇದರಿಂದಾಗಿ ಸ್ಕೂಟರ್‌ಗೆ ಬಸ್‌ ಡಿಕ್ಕಿ ಹೊಡೆದಿತ್ತು.’

‘ರಸ್ತೆಯಲ್ಲಿ ಸ್ಕೂಟರ್‌ ಉರುಳಿಬಿದ್ದಿತ್ತು. ಪ್ರಿಯದರ್ಶಿನಿ ಹಾಗೂ ಯಶ್ವಿನ್, ರಸ್ತೆ ಬದಿಯಲ್ಲಿ ಬಿದ್ದಿದ್ದರು. ಲಯಶ್ರೀ, ಬಸ್ಸಿನ ಬಲಭಾಗದ ಮುಂದಿನ ಚಕ್ರದಡಿ ಸಿಲುಕಿ ತೀವ್ರ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಲಯಶ್ರೀ ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಪೊಲೀಸರು ವಿವರಿಸಿದರು.

‘ಬಿಎಂಟಿಸಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿದೆ. ಬಸ್ ಸಹ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT