ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲೇ ಕೆಟ್ಟು ನಿಂತ ಬಿಎಂಟಿಸಿಯ 56 ಬಸ್‌

ಸಂಚಾರ ದಟ್ಟಣೆಗೆ ಡಕೋಟಾ ಬಸ್‌ಗಳ ಕೊಡುಗೆ
Last Updated 28 ಫೆಬ್ರುವರಿ 2020, 3:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಎಂಟಿಸಿ ಬಸ್‌ಗಳತ್ತ ಜನರನ್ನು ಸೆಳೆಯುವ ಪ್ರಯತ್ನ ಒಂದೆಡೆ ಸಾಗುತ್ತಿದ್ದರೆ, ಇನ್ನೊಂದೆಡೆ ಸಂಸ್ಥೆಯ ಡಕೋಟಾ ಬಸ್‌ಗಳೇ ಸಂಚಾರ ದಟ್ಟಣೆಗೆ ಕಾರಣವಾಗುತ್ತಿವೆ.

ಎಲ್ಲೆಂದರಲ್ಲಿ ಬಸ್‌ಗಳು ಕೆಟ್ಟು ನಿಲ್ಲುವುದು, ‍ಪ್ರಯಾಣಿಕರೇ ಇಳಿದು ತಳ್ಳುವುದು ಸಾಮಾನ್ಯವಾಗಿದೆ. ‘ಒಂದು ವಾರದಲ್ಲೇ 56 ಬಸ್‌ಗಳು ರಸ್ತೆಯಲ್ಲಿ ಕೆಟ್ಟು ನಿಂತಿದ್ದವು. ಸಂಚಾರ ದಟ್ಟಣೆಗೆ ಈ ಬಸ್‌ಗಳೇ ಪ್ರಮುಖ ಕೊಡುಗೆ ನೀಡುತ್ತಿವೆ’ ಎಂಬ ಮಾಹಿತಿಯನ್ನು ಸಂಚಾರ ವಿಭಾಗದ ಜಂಟಿ ಕಮಿಷನರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಮುಂದೆಯೇ ಬಿಚ್ಚಿಟ್ಟಿದ್ದಾರೆ. ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.

ಸಂಚಾರ ದಟ್ಟಣೆ ವಿಷಯ ಬಂದಾಗ ಜಂಟಿ ಕಮಿಷನರ್, ‘ರಾಜಭವನ ರಸ್ತೆಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಗಣ್ಯರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡುವಾಗ ಸಾಮಾನ್ಯ ಜನರಿಗೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರೊಂದಿಗೆ ಬಿಎಂಟಿಸಿ ಬಸ್‌ಗಳ ಕೊಡುಗೆಯೂ ಅಪಾರ’ ಎಂದು ಸಭೆಗೆ ವಿವರಿಸಿದ್ದಾರೆ.

‘ಕೆಟ್ಟು ನಿಲ್ಲುವ ಬಸ್‌ಗಳನ್ನು ಕೂಡಲೇ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ಬಸ್‌ಗಳು ಹೀಗೆ ನಿಲ್ಲುವುದನ್ನು ತಪ್ಪಿಸಲು
ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಸಮಜಾಯಿಷಿ ನೀಡಿದ್ದಾರೆ. ‘ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ’ ಎಂದು ಬಿಎಂಟಿಸಿ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT