ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಟುತ್ತ ಸಾಗುತ್ತಿದೆ ಟಿಟಿಎಂಸಿ ಕಾಮಗಾರಿ

ರಸ್ತೆಯಲ್ಲೇ ನಿಲ್ಲುವ ಬಸ್‌ಗಳು: ಕನಿಷ್ಠ ಮೂಲ ಸೌಕರ್ಯವೂ ಇಲ್ಲದೆ ಪ್ರಯಾಣಿಕರ ಗೋಳು
Last Updated 23 ಆಗಸ್ಟ್ 2019, 20:36 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯಲ್ಲೇ ಬಸ್‌ಗಳ ಸಾಲು, ಕೊಚ್ಚೆ ಗುಂಡಿಯಲ್ಲೇ ನಿಲ್ಲುವ ಪ್ರಯಾಣಿಕರು, ಮೂಗು ಮುಚ್ಚಿಕೊಂಡೇ ಓಡಾಡುವ ಚಾಲಕ–ನಿರ್ವಾಹಕರು... ಇದು ಕಲಾಸಿಪಾಳ್ಯ ಬಸ್ ನಿಲ್ದಾಣದ ಸುತ್ತಮುತ್ತಲ ದೃಶ್ಯ. ‌

1940ರಲ್ಲಿ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರು ಇಲ್ಲಿ ನಿಲ್ದಾಣ ಸ್ಥಾಪಿಸಿದರು. ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ನಿಲ್ದಾಣ ಇದಾಗಿತ್ತು. ಕೆ.ಆರ್.ಮಾರುಕಟ್ಟೆಗೆ ಸಮೀಪ ಇರುವ ಕಾರಣ ಈಗಲೂ ಅತ್ಯಂತ ಜನನಿಬಿಡ ಪ್ರದೇಶ.

ಈ ಜಾಗದಲ್ಲಿ ಸುಸಜ್ಜಿತ ಟಿಟಿಎಂಸಿ ನಿರ್ಮಾಣಕ್ಕೆ 2016ರ ಆ.18ರಂದು ಶಂಕುಸ್ಥಾಪನೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದ್ದರು. 4.13 ಎಕರೆ ವಿಸ್ತೀರ್ಣದಲ್ಲಿ ₹60 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣವಾಗುತ್ತಿದೆ.

‘ಕೆಎಂವಿ ಪ್ರಾಜೆಕ್ಟ್ಸ್ ಲಿಮಿಟೆಡ್‌ ಸಂಸ್ಥೆಯು ಯೋಜನೆಯ ಗುತ್ತಿಗೆ ಪಡೆದಿದೆ. ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ನವೆಂಬರ್ ತನಕ ಕಾಲಾವಕಾಶವಿದೆ. ಅಷ್ಟರಲ್ಲಿ ಮುಗಿಸಿಕೊಡುವ ವಿಶ್ವಾಸವಿದೆ’ ಎನ್ನುತ್ತಾರೆ ಬಿಎಂಟಿಸಿ ಅಧಿಕಾರಿಗಳು. ಆದರೆ, ಕಾಮಗಾರಿಯನ್ನು ಗಮನಿಸಿದರೆ ನವೆಂಬರ್ ವೇಳೆಗೆ ಮುಗಿಯುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಸ್ಥಳೀಯರು.

‘ಕಲಾಸಿಪಾಳ್ಯದ ಕೋಟೆ ರಸ್ತೆಯಿಂದ ಕನಕಪುರ ರಸ್ತೆ, ಮಾಗಡಿ ರಸ್ತೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಬನ್ನೇರುಘಟ್ಟ, ಜಿಗಣಿ, ಹೊಸೂರು, ಆನೇಕಲ್‌ಗೆ ತೆರಳುವ ಬಸ್‌ಗಳು ಕಲಾಸಿಪಾಳ್ಯ ಮುಖ್ಯರಸ್ತೆಯಿಂದ ಹೊರಡುತ್ತವೆ. ಜಾಮಿಯಾ ಮಸೀದಿ ಬಳಿಯ ನಿಲ್ದಾಣದಿಂದ ಕೆ.ಆರ್‌.ಪುರ, ಹೊಸಕೋಟೆ, ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ನೆಲಮಂಗಲ ಕಡೆ ಬಸ್‌ಗಳು ಸಂಚರಿಸುತ್ತವೆ. ಕೆಎಸ್‌ಆರ್‌ಟಿಸಿಯ ನಾಲ್ಕು ಅಂಕಣ ಮತ್ತು ಬಿಎಂಟಿಸಿಯ 14 ಅಂಕಣಗಳಿವೆ. ಒಂದೊಂದು ಅಂಕಣದಿಂದ ಕನಿಷ್ಠ 100 ಬಸ್‌ಗಳು ನಿತ್ಯ ಸಂಚರಿಸುತ್ತವೆ’ ಎಂಬುದು ನಿಲ್ದಾಣಾಧಿಕಾರಿಗಳು ನೀಡುವ ಮಾಹಿತಿ.

ಕಟ್ಟಡ ನಿರ್ಮಾಣವಾಗುತ್ತಿದ್ದು, ಅದರ ಸುತ್ತ ತಗಡಿನ ಶೀಟಿನ ಕಾಂಪೌಂಡ್‌ ನಿರ್ಮಿಸಲಾಗಿದೆ. ಕಾಮಗಾರಿ ನಡೆಯುತ್ತಿರುವ ಪ್ರದೇಶವಾದ್ದರಿಂದ ಸ್ವಚ್ಛತೆಗೆ ಬಿಬಿಎಂಪಿ ಕೂಡ ಗಮನ ಹರಿಸಿಲ್ಲ. ಕಾಮಗಾರಿ ಕಾಂಪೌಂಡ್‌ ಪಕ್ಕದಲ್ಲೇ ಸಾಲುಗಟ್ಟಿ ಖಾಸಗಿ ಬಸ್‌ಗಳು ನಿಂತಿರುತ್ತವೆ. ಇದರಿಂದಾಗಿ, ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಕೆ.ಆರ್. ಮಾರುಕಟ್ಟೆ ಕಡೆಯಿಂದ ಹೊರಟರೆ ಕಲಾಸಿಪಾಳ್ಯ ವೃತ್ತ ತಲುಪಲು ವಾಹನ ಸವಾರರು ಹರಸಾಹಸಪಡಬೇಕು. ಪಾದಚಾರಿಗಳ ಪಾಡಂತೂ ಹೇಳತೀರದು.

ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿಗೆ ತಾತ್ಕಾಲಿಕವಾಗಿ ಕನಿಷ್ಠ ಮೂಲಸೌಕರ್ಯಗಳನ್ನೂ ಕಲ್ಪಿಸಿಲ್ಲ. ಬೀದಿ ದೀಪಗಳಿಲ್ಲ, ಕುಳಿತು ದಣಿವಾರಿಸಿಕೊಳ್ಳಲು ಕುರ್ಚಿಗಳಿಲ್ಲ. ತಾತ್ಕಾಲಿಕವಾಗಿ ನಾಲ್ಕೈದು ತಗಡಿನ ಶೀಟ್ ಹೊದಿಸಿರುವ ಪ್ರಯಾಣಿಕರ ತಂಗುದಾಣವೊಂದಿದೆ. ಅದರೊಳಗೆ ನಿಲ್ಲಲು ಸ್ಥಳವೇ ಇಲ್ಲದಷ್ಟು ಕಸ–ಕಡ್ಡಿ ತುಂಬಿ ಹೋಗಿದೆ.

ಪಕ್ಕದಲ್ಲೇ ಶೌಚಾಲಯ ಇದ್ದರೂ, ಬಳಕೆಗೆ ಯೋಗ್ಯವಾಗಿಲ್ಲ. ಹೆಚ್ಚು ಸಮಯ ಉಸಿರು ಬಿಗಿ ಹಿಡಿಯಲು ಶಕ್ತಿ ಇದ್ದವರು ಮಾತ್ರ ಹೋಗಿ ಬರಲು ಸಾಧ್ಯ. ಚಾಲಕ, ನಿರ್ವಾಹಕರು ಮತ್ತು ಪ್ರಯಾಣಿಕರು ವಿಧಿ ಇಲ್ಲದೆ ಮುಖ ಸಿಂಡರಿಸಿಕೊಂಡ ಒಳ ಹೋಗಿ ಬರುತ್ತಾರೆ. ಶೌಚಾಲಯದ ಕೊಳಚೆ ನೀರು ರಸ್ತೆ, ಫುಟ್‌ಪಾತ್‌ಗಳಲ್ಲಿ ಹರಿಯುತ್ತಿದೆ. ‘ಇನ್ನೆಷ್ಟು ಕಾಲ ಈ ಶಿಕ್ಷೆಯೋ ಗೊತ್ತಿಲ್ಲ’ ಎಂದು
ಮೂಗಿಗೆ ಬಟ್ಟೆ ಕಟ್ಟಿಕೊಂಡೇ ಇರುವ ನಿಲ್ದಾಣಾಧಿಕಾರಿಗಳು ಬೇಸರದಿಂದ ಪ್ರಶ್ನಿಸುತ್ತಾರೆ.

ನವೆಂಬರ್ ತನಕ ಅವಕಾಶ ಇದೆ

ಕಲಾಸಿಪಾಳ್ಯ ಸುಸಜ್ಜಿತ ಟಿಟಿಎಂಸಿ ನಿರ್ಮಾಣ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ನವೆಂಬರ್ ತನಕ ಅವಕಾಶ ಇದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಪ್ರಸಾದ್ ತಿಳಿಸಿದರು.

‘ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಬಾಕಿ ಸಣ್ಣಪುಟ್ಟ ಕೆಲಸಗಳನ್ನು ನವೆಂಬರ್ ವೇಳೆಗೆ ಗುತ್ತಿಗೆದಾರರು ಮುಗಿಸುವ ವಿಶ್ವಾಸವಿದೆ. ಒಂದೆರಡು ತಿಂಗಳು ಹೆಚ್ಚು ಕಡಿಮೆ ಆಗಬಹುದು’ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ‘ಜನಸ್ಪಂದನ’ 31ಕ್ಕೆ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಜನಸ್ಪಂದನ ಕಾರ್ಯಕ್ರಮ (ಸಿಟಿಜನ್‌ ಫಾರ್‌ ಚೇಂಜ್‌) ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಿಲ್ಸನ್‌ ಗಾರ್ಡನ್‌ ವಿನಾಯಕನಗರದ ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾದಲ್ಲಿ ಇದೇ 31ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.

ಕ್ಷೇತ್ರದ ಜನರು ತಮ್ಮ ದೂರುಗಳನ್ನು ನೇರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹೇಳಿಕೊಂಡು ಸ್ಥಳದಲ್ಲೇ ಪರಿಹಾರ ಪಡೆಯಬಹುದು.

ಕ್ಷೇತ್ರದ ಶಾಸಕ ಉದಯ ಗರುಡಾಚಾರ್‌, ವಾರ್ಡ್‌ಗಳ ಪಾಲಿಕೆ ಸದಸ್ಯರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಸ್ಕಾಂ, ಜಲಮಂಡಳಿ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಗಮನ ಸೆಳೆದು ಸ್ಥಳದಲ್ಲೇ ಪರಿಹಾರ ಪಡೆಯಲು ಸ್ಥಳೀಯರು ಈ ಅವಕಾಶ ಬಳಸಿಕೊಳ್ಳಬಹುದು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 31ರಂದು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ರವಿ ಎಂ. (9739997938) ಅವರನ್ನು ಸಂಪರ್ಕಿಸಬಹುದು. ಕುಂದು ಕೊರತೆಗಳನ್ನು ಮುಂಚಿತವಾಗಿ janaspandana@printersmysore.co.inಗೆ ಇ–ಮೇಲ್‌ ಕೂಡ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT