ಸೋಮವಾರ, ಫೆಬ್ರವರಿ 17, 2020
16 °C
* ವಿದ್ಯಾರ್ಥಿಯಿಂದ ಬಯಲಾದ ಕೃತ್ಯ * ಛಾಯಾಗ್ರಾಹಕ ಬಂಧನ

₹250ಕ್ಕೆ ಬಿಎಂಟಿಸಿ ನಕಲಿ ಪಾಸ್‌ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನಕಲಿ ಪಾಸ್‌ಗಳನ್ನು ಸೃಷ್ಟಿಸಿ ವಿದ್ಯಾರ್ಥಿಗಳಿಗೆ ಮಾರುತ್ತಿದ್ದ ಆರೋಪದಡಿ ಛಾಯಾಗ್ರಾಹಕ ಎಸ್‌.ಮಧು (29) ಎಂಬಾತನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

‘ಎಸ್ಸೆಸ್ಸೆಲ್ಸಿವರೆಗೆ ಓದಿರುವ ಮಧು, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ ಸಮೀಪದಲ್ಲೇ ಎಂ.ಆರ್‌.ಡಿಜಿಟಲ್ ಸ್ಟುಡಿಯೋ ಹಾಗೂ ಸೈಬರ್‌ ಕೆಫೆ ಇಟ್ಟುಕೊಂಡಿದ್ದ. ವಿದ್ಯಾರ್ಥಿಗಳಿಗೆ ₹1,500 ಬೆಲೆಯ ಪಾಸ್‌ಗಳನ್ನು ಬಿಎಂಟಿಸಿ ನೀಡಿದೆ. ಅದನ್ನು ಹೋಲುವ ರೀತಿಯಲ್ಲೇ ನಕಲಿ ಪಾಸ್‌ ಸಿದ್ಧಪಡಿಸಿ ₹250ಕ್ಕೆ ಮಾರುತ್ತಿದ್ದ. ಇದನ್ನು ಪತ್ತೆ ಹಚ್ಚಿದ್ದ ಬಿಎಂಟಿಸಿ ನಿರ್ವಾಹಕ ರಾವುತಪ್ಪ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಸ್ಟುಡಿಯೋದಲ್ಲೂ ತಪಾಸಣೆ ನಡೆಸಲಾಗಿದೆ. ಕಂಪ್ಯೂಟರ್, ಸ್ಕ್ಯಾನರ್, ಪ್ರೀಂಟರ್ ಹಾಗೂ ಮೂರ್ನಾಲ್ಕು ನಕಲಿ ಪಾಸ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ನಕಲಿ ಪಾಸ್‌ ಮಾಡಿಕೊಟ್ಟಿರುವುದಾಗಿ ಆರೋಪಿ ಹೇಳುತ್ತಿದ್ದಾನೆ’ ಎಂದು ತಿಳಿಸಿದರು. 

‘ದಾಖಲೆ ತಿದ್ದಿದ (ಐಪಿಸಿ 465), ಪೋರ್ಜರಿ (ಐಪಿಸಿ 471), ನಕಲಿ ದಾಖಲೆ ಸೃಷ್ಟಿ (ಐಪಿಸಿ 468) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಮಧು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘ಬಿಎಂಟಿಸಿಯ ಉತ್ತರಹಳ್ಳಿ ಡಿಪೊದ ನಿರ್ವಾಹಕ ರಾವುತಪ್ಪ ಇದೇ 28ರಂದು ಬೆಳಿಗ್ಗೆ ಕರ್ತವ್ಯದಲ್ಲಿದ್ದರು. ಚೌಡೇಶ್ವರಿನಗರ ಪೈಪ್‌ ಲೈನ್ ಬಸ್ ತಂಗುದಾಣದಲ್ಲಿ ಬಸ್ಸಿಗೆ ಹತ್ತಿದ್ದ ವಿದ್ಯಾರ್ಥಿಯೊಬ್ಬ ಪಾಸ್‌ ನೀಡಿದ್ದ. ಬಣ್ಣದ ಜೆರಾಕ್ಸ್ ರೀತಿಯಲ್ಲಿದ್ದ ಪಾಸ್‌ ನೋಡಿ ರಾವುತಪ್ಪ ಅವರಿಗೆ ಅನುಮಾನ ಬಂದಿತ್ತು’ ಎಂದು ಪೊಲೀಸರು ಹೇಳಿದರು.

‘ಪಾಸ್‌ ವಶಕ್ಕೆ ಪಡೆದಿದ್ದ ರಾವುತಪ್ಪ ಬಿಎಂಟಿಸಿಯ ತಪಾಸಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪಾಸ್‌ ನಕಲಿ ಎಂಬುದು ಖಾತ್ರಿಯಾಗಿತ್ತು. ವಿದ್ಯಾರ್ಥಿಯನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತೊಬ್ಬನ ಹೆಸರು ಬಾಯ್ಬಿಟ್ಟಿದ್ದ. ಆತನನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ, ಎಂ.ಆರ್‌.ಡಿಜಿಟಲ್ ಸ್ಟುಡಿಯೋದಲ್ಲಿ ಪಾಸ್ ಮಾಡಿಸಿರುವುದಾಗಿ ಹೇಳಿಕೆ ನೀಡಿದ್ದ’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು