ಗುರುವಾರ , ಜನವರಿ 20, 2022
15 °C

ಪ್ರಜಾವಾಣಿ ಫೋನ್‌ಇನ್ ಕಾರ್ಯಕ್ರಮ: 23 ಸಮಸ್ಯೆ ಪರಿಹರಿಸಿದ ಬಿಎಂಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಸ್‌ ಸೌಕರ್ಯದ ಕೊರತೆ ಬಗ್ಗೆ ‘ಪ್ರಜಾವಾಣಿ’ ಫೋನ್‌ಇನ್ ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರ ಬಳಿ ಸಾರ್ವಜನಿಕರು ಹೇಳಿಕೊಂಡ ಅಹವಾಲುಗಳಿಗೆ ಎರಡೇ ದಿನಗಳಲ್ಲಿ ಬಿಎಂಟಿಸಿ ಸ್ಪಂದಿಸಿದ್ದು, 23 ಸಮಸ್ಯೆಗಳನ್ನು ಪರಿಹರಿಸಿದೆ.

ಕಾಟನ್‌ಪೇಟೆ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಬಿಎಂಟಿಸಿ ಬಸ್‌ ವ್ಯವಸ್ಥೆ ಇಲ್ಲದೆ ತೊಂದರೆ ಉಂಟಾಗಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದರು. ‘50 ಸುತ್ತುವಳಿಯಲ್ಲಿ ಮಿಡಿ ವಾಹನಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ನ.29ರಿಂದ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ’ ಎಂದು ಬಿಎಂಟಿಸಿ ತಿಳಿಸಿದೆ.

‘ಮೆಟ್ರೊ ರೈಲು ನಿಲ್ದಾಣದಿಂದ ಫೀಡರ್‌ ಬಸ್‌ಗಳ ಸೇವೆಯನ್ನು ಹೆಚ್ಚುವರಿಯಾಗಿ 23 ಸುತ್ತುವಳಿಯಲ್ಲಿ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೆ.ಆರ್‌.ಮಾರುಕಟ್ಟೆ–ಕಲ್ಕೆರೆ ಮಾರ್ಗದಲ್ಲಿ ರಾತ್ರಿ ತಂಗುವ ಪಾಳಿಯಲ್ಲಿ ಸೋಮವಾರದಿಂದ ಬಸ್ ಕಾರ್ಯಾಚರಣೆಯಾಗಲಿದೆ. ಕೆಂಗೇರಿ–ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ಪ್ರತಿ 5ರಿಂದ 10 ನಿಮಿಷಗಳ ಅಂತರದಲ್ಲಿ ಸಾರಿಗೆ ಸೌಲಭ್ಯವಿದ್ದು, ಪ್ರಯಾಣಿಕರ ದಟ್ಟಣೆ ಪರಿಶೀಲಿಸಿ ಕ್ರಮ ವಹಿಸಲಾಗುವುದು’ ಎಂದು ವಿವರಿಸಿದೆ.

‘ಮೂಡಲಪಾಳ್ಯದಿಂದ ವಿಜಯನಗರಕ್ಕೆ ಗೋವಿಂದರಾಜನಗರ, ಮನುವನ ಮಾರ್ಗದಲ್ಲಿ ಸೋಮವಾರದಿಂದ ಬಸ್ ಕಾರ್ಯಾಚರಣೆಯಾಗಲಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಯಶವಂತಪುರ ಮಾರ್ಗದಲ್ಲಿ ಅನ್ನಪೂರ್ಣೇಶ್ವರಿನಗರಕ್ಕೆ ಕಾರ್ಯಾಚರಣೆಯಲ್ಲಿದ್ದ ಬಸ್‌ ಅನ್ನು ರಾತ್ರಿ ತಂಗುವ ಪಾಳಿಗೆ ಬದಲಿಸಲಾಗಿದೆ. ಜಾಲಹಳ್ಳಿ ವಿಲೇಜ್‌ನಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೊಸ ಕಾರ್ಯಾಚರಣೆಯೂ ಸೋಮವಾರದಿಂದ ಆರಂಭವಾಗಲಿದೆ’ ಎಂದು ವಿವರಿಸಿದೆ.

‘ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಿರುವ ಸಹಾಯ ಹಸ್ತ ಪಾಸುಗಳನ್ನು ಮಾನ್ಯ ಮಾಡಲು ಚಾಲನಾ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಮೀಸಲು ಆಸನ ಬಿಡಿಸಿಕೊಡಲೂ ಸಿಬ್ಬಂದಿಗೆ ತಿಳುವಳಿಕೆ ನೀಡಲಾಗಿದೆ’ ಎಂದು ತಿಳಿಸಿದೆ.‌

‘ಪೋನ್‌ಇನ್ ಕಾರ್ಯಕ್ರಮದಲ್ಲಿ ಬಂದಿರುವ ಇನ್ನಷ್ಟು ದೂರುಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಲಿವೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು