ಡೀಲರ್ ಕರೆಸಿ ಬಿಎಂಡಬ್ಲ್ಯು ಬೈಕ್ ಸುಲಿಗೆ

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಡೀಲರ್ ಮೇಲೆ ಹಲ್ಲೆ ಮಾಡಿ ₹16 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಬೈಕ್ ಸುಲಿಗೆ ಮಾಡಿದ್ದ 6 ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಬೈಕ್ ಡೀಲರ್ ಮೊಹಮ್ಮದ್ ಆಸಿಫ್ ಎಂಬುವವರು ಸುಲಿಗೆ ಬಗ್ಗೆ ದೂರು ನೀಡಿದ್ದರು. ಎ.ಎಲ್. ವಿಶ್ವಾಸ್ (23), ಎನ್. ಜಗನ್ನಾಥ್ (21), ಎಸ್.ಎಸ್. ಗಜೇಂದ್ರ (34), ಲಿಖಿತ್ ಕುಮಾರ್ (29), ಎಸ್. ಶಶಾಂಕ್ (23) ಹಾಗೂ ಕೆ. ಪವನ್ (21) ಬಂಧಿತರು’ ಎಂದು ಪೊಲೀಸರು ಹೇಳಿದರು.
‘ದೂರುದಾರ ಆಸೀಫ್, ವಿಜಯ ನಗರದಲ್ಲಿ ಮಳಿಗೆ ಇಟ್ಟುಕೊಂಡಿದ್ದಾರೆ. ಇವರನ್ನು ಸಂಪರ್ಕಿಸಿದ್ದ ಆರೋಪಿ ವಿಶ್ವಾಸ್, ಬಿಎಂಡಬ್ಲ್ಯು ಬೈಕ್ ಬೇಕೆಂದು ಹೇಳಿದ್ದ. ಟೆಸ್ಟ್‌ಡ್ರೈವ್ ನೋಡಲು ವಿಜಯನಗರ ಕ್ಲಬ್ ಬಳಿ ಬೈಕ್ ತರುವಂತೆ ತಿಳಿಸಿದ್ದ. ಆತನ ಮಾತು ನಂಬಿದ್ದ ದೂರುದಾರ, ಡಿ. 10ರಂದು ಬೈಕ್ ತೆಗೆದುಕೊಂಡು ಹೋಗಿದ್ದರು.’
‘ಇತರೆ ಆರೋಪಿಗಳ ಜೊತೆ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದ ವಿಶ್ವಾಸ್, ಮೊಹಮ್ಮದ್ ಆಸೀಫ್ ಮೇಲೆ ಹಲ್ಲೆ ಮಾಡಿದ್ದ. ಐ–ಫೋನ್, ₹35 ಸಾವಿರ ನಗದು ಕಿತ್ತುಕೊಂಡಿದ್ದ. ನಂತರ, ದೂರುದಾರರನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಅಪಹರಿಸಲು ಮುಂದಾಗಿದ್ದ. ಸ್ಥಳದಲ್ಲಿ ಜನರು ಸೇರುತ್ತಿದ್ದಂತೆ ಅವರನ್ನು ಬಿಟ್ಟು, ಬಿಎಂಡಬ್ಲ್ಯು ಬೈಕ್ ಸಮೇತ ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ಆಸೀಫ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.
‘ಆರೋಪಿಗಳು ಪರಾರಿಯಾಗುವ ವೇಳೆ ಕಾರನ್ನು ಸ್ಥಳದಲ್ಲಿ ಬಿಟ್ಟು ಹೋಗಿದ್ದರು. ಅದನ್ನು ಆಧರಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಬಚ್ಚಿಟ್ಟಿದ್ದ ಬೈಕ್ ಸಹ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.
ವಂಚನೆ ಪ್ರಕರಣದಲ್ಲಿ ಆರೋಪಿ: ‘ಬೈಕ್ ಡೀಲರ್ ಎಂಬುದಾಗಿ ಹೇಳಿಕೊಂಡು ಓಡಾಡುತ್ತಿದ್ದ ವಿಶ್ವಾಸ್, ಗ್ರಾಹಕರಿಂದ ಹಣ ಪಡೆದು ವಂಚಿಸುತ್ತಿದ್ದನೆಂಬ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.