ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನರ್, ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

Last Updated 20 ಅಕ್ಟೋಬರ್ 2020, 1:54 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಹಾಗೂ ಡ್ರಗ್ಸ್ ಜಾಲ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟು ಅಪರಿಚಿತನೊಬ್ಬ ಬಾಂಬ್ ಬೆದರಿಕೆ ಹಾಕಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಎರಡೂ ಪ್ರಕರಣಗಳನ್ನು ಉಲ್ಲೇಖಿಸಿ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂಜೀವ್ ಪಾಟೀಲ ತಿಳಿಸಿದರು.

‘ಪೊಲೀಸ್ ಕಮಿಷನರ್ ಕಚೇರಿ ಹಾಗೂ ನ್ಯಾಯಾಲಯಕ್ಕೆ ಬೆದರಿಕೆ ಪತ್ರ ಬಂದಿರುವುದಾಗಿ ಗೊತ್ತಾಗಿದೆ. ತುಮಕೂರಿನ ವಿಳಾಸದಿಂದ ಪತ್ರ ಬಂದಿರುವ ಮಾಹಿತಿ ಇದ್ದು, ಅದನ್ನು ಆಧರಿಸಿ ಸಿಸಿಬಿ ಪೊಲೀಸರು ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ’ ಎಂದರು.

‘ಬೆಟ್ಟಿಂಗ್‌ ಸಾಲ ತೀರಿಸಲು ಕಳವು’

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳವು ಮಾಡಿದ್ದ ಆರೋಪಿ ಅಭಿಷೇಕ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಪಾಪರೆಡ್ಡಿಪಾಳ್ಯ ನಿವಾಸಿ ಅಭಿಷೇಕ್, ತಮ್ಮ ದೊಡ್ಡಮ್ಮನ ಮನೆಯಲ್ಲಿ ಅ. 13ರಂದು ಕೃತ್ಯ ಎಸಗಿದ್ದ. ಆತನಿಂದ ₹ 4.55 ಲಕ್ಷ ಮೌಲ್ಯದ 144 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ಬಿ.ಕಾಂ ಪದವೀಧರನಾದ ಆರೋಪಿ, ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ. ಅದಕ್ಕಾಗಿ ಹಲವರ ಬಳಿ ಸಾಲ ಮಾಡಿದ್ದ. ಅದನ್ನು ತೀರಿಸಲು ಆರೋಪಿ ಕಳ್ಳತನ ಮಾಡಿದ್ದ. ಕದ್ದ ಆಭರಣಗಳನ್ನೂ ಮಾರಾಟ ಮಾಡಿದ್ದ’ ಎಂದರು.

ತೆರಿಗೆ ವಂಚನೆ ಎರಡು ಬಸ್‌ ವಶ

ಬೆಂಗಳೂರು: ರಹದಾರಿ ಪಡೆಯದೆ ಮತ್ತು ತೆರಿಗೆ ವಂಚಿಸಿ ಕಾರ್ಯಾಚರಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಸ್‌ಗಳನ್ನು ಯಶವಂತಪುರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮುಂಬೈ–ಬೆಂಗಳೂರು ನಡುವೆ ಕಾರ್ಯಚರಣೆ ಮಾಡುತ್ತಿದ್ದ ಧನುಷ್ ಟ್ರಾವೆಲ್ಸ್ ನ ಎಂಎಚ್‌–50, ಎನ್‌–9027 ನೋಂದಣಿ ನಂಬರಿನ ಬಸ್‌ವೊಂದನ್ನು ಸೆ.30ರಂದು ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ವಾರ ಕಳೆದರೂ ವಾರಸುದಾರರು ಬಾರದ ಕಾರಣ ಮೋಟಾರು ವಾಹನ ಹಿರಿಯ ನಿರೀಕ್ಷಕ ರಾಜಣ್ಣ ನೇತೃತ್ವದ ತಂಡ ಕಾರ್ಯಾಚರಣೆ ಮುಂದುವರಿಸಿತು. ‘ಎಂಎಚ್‌–50, ಎನ್‌–1404 ಸ್ಲೀಪರ್ ಬಸ್‌ ಅರಮನೆ ಮೈದಾನದಲ್ಲಿ ನಿಂತಿರುವುದು ಪತ್ತೆಯಾಗಿದ್ದು, ಈ ವಾಹನದ ಚಾಸಿ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ ತಾಳೆಯಾಗದಿರುವುದು ಕಂಡುಬಂದಿದೆ’ ಎಂದು ರಾಜಣ್ಣ ಮಾಹಿತಿ ನೀಡಿದರು.

‘ಒಂದು ವರ್ಷದಿಂದ ಸರ್ಕಾರಕ್ಕೆ ವಂಚಿಸಿ ಕಾರ್ಯಾಚರಣೆ ನಡೆಸುತ್ತಿರುವ ಎರಡೂ ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ರಹದಾರಿ ಶುಲ್ಕ ಮತ್ತು ತೆರಿಗೆ ಸೇರಿ ತಲಾ ₹6 ಲಕ್ಷ ಸರ್ಕಾರಕ್ಕೆ ಪಾವತಿಯಾಗಬೇಕಿದೆ. ವಾರಸುದಾರರೇ ಬಾರದ ಕಾರಣ ಕಚೇರಿಯ ಆವರಣದಲ್ಲೇ ಎರಡು ಬಸ್‌ಗಳನ್ನು ನಿಲ್ಲಿಸಲಾಗಿದೆ’ ಎಂದರು.

ಸುಟ್ಟ ಕಾರುಗಳ ಕೊಂಡೊಯ್ಯಲು ಮನವಿ

ಯಲಹಂಕ: 2019ರ ಏರ್-ಶೋ ಸಂದರ್ಭದಲ್ಲಿ ಸಂಭವಿಸಿದ್ದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಭಾಗಶಃ ಸುಟ್ಟುಹೋಗಿದ್ದ ಪ್ರೇಕ್ಷಕರ ಕಾರುಗಳನ್ನು ವಾರಸುದಾರರು ತೆಗೆದುಕೊಂಡು ಹೋಗಬೇಕೆಂದು ಯಲಹಂಕ ಠಾಣೆಯ ಪೊಲೀಸರು ಕೋರಿದ್ದಾರೆ.

ಏರ್-ಶೋ ಕಾರ್ಯಕ್ರಮವನ್ನು 2021ರಲ್ಲಿ ಯಲಹಂಕದ ವಾಯುನೆಲೆ ಕೇಂದ್ರದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಕ್ಟೋಬರ್‌ 21ರೊಳಗಾಗಿ ವಾರಸುದಾರರು ತಮ್ಮ ವಾಹನಗಳನ್ನು ಕೊಂಡೊಯ್ಯಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಕಾರುಗಳ ಮಾಲೀಕರ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚೂರಿ ಇರಿತ ಪ್ರಕರಣ: ಮತ್ತೊಬ್ಬ ಸಾವು

ಬೆಂಗಳೂರು: ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಎಂ.ಗಣೇಶ್ ಎಂಬಾತನಿಂದ ಚಾಕು ಇರಿತಕ್ಕೀಡಾಗಿದ್ದ ರಾಜೇಶ್ (28) ಎಂಬುವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಮೂಲಕ ಹಲ್ಲೆಯಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ.

‘ಆರೋಪಿ ಕೃತ್ಯದಿಂದ ತೀವ್ರವಾಗಿ ಗಾಯಗೊಂಡಿದ್ದ ಮಾರಿ ಎಂಬುವರು ಭಾನುವಾರ ಮೃತಪಟ್ಟಿದ್ದರು. ಇದೀಗ ರಾಜೇಶ್ ಸಹ ಅಸುನೀಗಿದ್ದಾರೆ. ಗಾಯಾಳು ಮೇಲಾಯುಧನ್ ಎಂಬುವರು ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತು ಸುರೇಶ್‌ ಎಂಬುವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿಯೂ ಚಿಂತಾಜನಕವಾಗಿದೆ’ ಎಂದೂ ಪೊಲೀಸರು ತಿಳಿಸಿದರು.

‘ಆರೋಪಿ ಗಣೇಶ್‌ನನ್ನು ಬಂಧಿಸಲಾಗಿದೆ. ಭಾನುವಾರ ರಾತ್ರಿ ಆತ ಠಾಣೆಯಲ್ಲಿ ರಂಪಾಟ ನಡೆಸಿದ್ದ. ಊಟ, ತಿಂಡಿ ಸಹ ತಿನ್ನುತ್ತಿಲ್ಲ. ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT