ಮಂಗಳವಾರ, ನವೆಂಬರ್ 19, 2019
21 °C
ಮಾಹಿತಿ ನೀಡಿದರೂ ಎಚ್ಚೆತ್ತುಕೊಳ್ಳದ ಕೆರೆ ಅಭಿವೃದ್ಧಿ ಪ್ರಾಧಿಕಾರ

ಬೆರಟೇನ ಅಗ್ರಹಾರ: ಕೆರೆ ಒತ್ತುವರಿ ಯತ್ನ

Published:
Updated:
Prajavani

ಬೊಮ್ಮನಹಳ್ಳಿ: ‘ಎಲೆಕ್ಟ್ರಾನಿಕ್ ಸಿಟಿ ಬಳಿಯ ಬೆರಟೇನ ಅಗ್ರಹಾರದಲ್ಲಿ ಕೆರೆಯನ್ನು ಒತ್ತುವರಿ ಮಾಡಿ ನಿವೇಶನಗಳನ್ನಾಗಿ ಪರಿವರ್ತಿಸಿ, ಮಾರಾಟ ಮಾಡಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಈ ಸಂಬಂಧ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ಥಳೀಯರೇ ಮಾಹಿತಿ ನೀಡಿದ್ದಾರೆ.

ಬೆರಟೇನ ಅಗ್ರಹಾರದ ಲವಕುಶ ಲೇಔಟ್ ಬಳಿ ಸರ್ವೆ ನಂಬರ್ 18ರಲ್ಲಿ ಇರುವ ಕೆರೆ ಜಾಗದ ಒತ್ತುವರಿಗಾಗಿ ಎರಡು ತಿಂಗಳಿನಿಂದ ಪ್ರಯತ್ನ ನಡೆದಿದೆ. ಜಲಮೂಲದ ಸುತ್ತಲೂ ಹಾಕಿದ್ದ ತಂತಿ ಬೇಲಿಯನ್ನು ಕಿತ್ತು, ಜೆಸಿಬಿಗಳನ್ನು ಬಳಸಿ ಐದು ಎಕರೆಯಷ್ಟು ಕಬಳಿಸಲಾಗಿದೆ. ಪಶ್ಚಿಮ ಭಾಗದಲ್ಲಿ ಕೆರೆಯ ತಂತಿ ಬೇಲಿ ಹಾಗೇ ಇದ್ದು, ಇದರ ಪಕ್ಕದಲ್ಲೇ ನಿವೇಶನಗಳನ್ನು ಮಾಡಲಾಗಿದೆ. ಈ ಮೂಲಕ ಮೀಸಲು ಪ್ರದೇಶದ ನಿಯಮ ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ನಮ್ಮ ಅಪಾರ್ಟ್‌ಮೆಂಟ್ ಸಮುಚ್ಚಯ ಕೆರೆಯ ದಕ್ಷಿಣ ಭಾಗದಲ್ಲಿದೆ. ನಾವು ಮೀಸಲು ಪ್ರದೇಶ ಉಲ್ಲಂಘಿಸಿ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು (ಎಸ್‌ಟಿಪಿ) ನಿರ್ಮಿಸಿದ್ದೇವೆ ಎಂಬ ಕಾರಣ ನೀಡಿ ಬಿಬಿಎಂಪಿ ನಮಗೆ ನೋಟಿಸ್ ನೀಡಿತ್ತು. ಅದರಂತೆ ನಾವು ಎಸ್‌ಟಿಪಿಯನ್ನು ಬೇರೆಡೆ ಸ್ಥಳಾಂತರ ಮಾಡಿದೆವು. ಆದರೀಗ ಇಡೀ ಕೆರೆಯನ್ನೇ ಮುಚ್ಚಲಾಗಿದೆ. ಆದರೂ ಬಿಬಿಎಂಪಿ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಕೀರ್ತಿ ರಾಯಲ್ ಫಾರ್ಮ್ಸ್ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ಅನ್ನಿ ದೂರಿದರು.

 ‘ಒತ್ತುವರಿ ಬಗ್ಗೆ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದೆವು. ಆದರೆ, ಅವರು ಎಚ್ಚೆತ್ತುಕೊಂಡಿಲ್ಲ. ಇದೀಗ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಮಹಮ್ಮದ್ ಸಲಾರ್‌ ಹೇಳಿದರು.

‘ನಾವು ಕೆರೆ ಜಾಗ ಒತ್ತುವರಿ ಮಾಡಿಲ್ಲ. ನಮ್ಮ ಜಮೀನಿನಲ್ಲಿ ನಿವೇಶನಗಳನ್ನು ನಿರ್ಮಿಸಲು ಅಕ್ಕಪಕ್ಕದ ಜಾಗವನ್ನು ಸ್ವಚ್ಛಗೊಳಿಸಿದ್ದೇವೆ. ಕೆರೆಯ ದಕ್ಷಿಣ ಭಾಗಕ್ಕೆ ಇರುವ ಜಾಗ ತೋಟಿ ಇನಾಮ್ತಿ ಜಮೀನಾಗಿದ್ದು, 1979ರಲ್ಲಿ ಸರ್ಕಾರ ನನ್ನ ತಂದೆ ಯಲ್ಲಪ್ಪ ಅವರಿಗೆ ಮಂಜೂರು ಮಾಡಿತ್ತು. ಹೀಗಾಗಿ, ಈ ಜಮೀನನ್ನು ಸರ್ವೆ ಮಾಡಿ ನಮ್ಮ ಜಮೀನಿನ ಹದ್ದುಬಸ್ತು ಗುರುತಿಸಿಕೊಳ್ಳಲು ಅನುಕೂಲ ಆಗುತ್ತದೆ ಎಂದು ಬಿಬಿಎಂಪಿ ಆಯುಕ್ತರಿಗೆ ನಾನೇ ಪತ್ರ ಬರೆದಿದ್ದೇನೆ’ ಎಂದು ಯಲ್ಲಪ್ಪ ಅವರ ಪುತ್ರ ಗಣೇಶ್ ಪ್ರತಿಕ್ರಿಯಿಸಿದರು.

ಕೆರೆ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಉಷಾ ಪ್ರತಿಕ್ರಿಯಿಸಿ, ‘ಒತ್ತುವರಿ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕಾವಲಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೆರೆಯ ವಿಸ್ತೀರ್ಣ ಹಾಗೂ ನಕ್ಷೆ ಒದಗಿಸುವಂತೆ ಬಿಡಿಎಗೂ ಪತ್ರ ಬರೆದಿದ್ದೇನೆ. ತಕ್ಷಣವೇ ಸ್ಥಳ ಪರಿಶೀಲನೆ ಮಾಡಿ, ಒತ್ತುವರಿ ಆಗಿದ್ದಲ್ಲಿ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದರು.

ಪ್ರತಿಕ್ರಿಯಿಸಿ (+)