ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಲೆಗಳಲ್ಲಿ ತಂತ್ರಜ್ಞಾನ ಕಲಿಕೆಗೆ ಆದ್ಯತೆ’

‘ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌–2018’ ಸ್ಪರ್ಧೆಯ ಫೈನಲ್‌
Last Updated 31 ಮಾರ್ಚ್ 2018, 9:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಚಿಕ್ಕಂದಿನಲ್ಲಿಯೇ ಸಂಶೋಧನಾ ಮನೋಭಾವ ರೂಢಿಸಿಕೊಂಡರೆ ಅರ್ಧ ಯಶಸ್ಸು ಸಿಕ್ಕಂತೆ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿಯೂ ತಂತ್ರಜ್ಞಾನ ಕಲಿಕೆ, ಸಂಶೋಧನಾಸಕ್ತಿ ಬೆಳೆಸಲು ಆದ್ಯತೆ ನೀಡಲಾಗುತ್ತಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.‌ದೇಶದ 28 ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿರುವ ಡಿಜಿಟಲ್‌ ಉತ್ಪನ್ನ ಅಭಿವೃದ್ಧಿ ಸ್ಪರ್ಧೆ ‘ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ 2018’ ನ ಫೈನಲ್‌ನಲ್ಲಿ ಸ್ಪರ್ಧಿಗಳನ್ನು ಉದ್ದೇಶಿಸಿ ಶುಕ್ರವಾರ ರಾತ್ರಿ ಅವರು, ನಗರದ ಬಿವಿಬಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಡಿಯೊ ಸಂವಾದದಲ್ಲಿ ಮಾತನಾಡಿದರು.

‘ಸದ್ಯ ದೇಶದ 2,000 ಶಾಲೆಗಳಲ್ಲಿ ತಂತ್ರಜ್ಞಾನ ಕಲಿಕೆ ಮತ್ತು ಅಭಿವೃದ್ಧಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಒಟ್ಟು 30 ಸಾವಿರ ಶಾಲೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಮೋದಿ ಹೇಳಿದರು.‘ಡಿಜಿಟಲ್‌ ಉದ್ಯಮ ಅಭಿವೃದ್ಧಿಗೆ, ಸಂಶೋಧಕರಿಗೆ ವೇದಿಕೆ ಒದಗಿಸಲು, ಅವಕಾಶ ನೀಡಲು ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಪ್ರತಿ ವರ್ಷ ಒಂದು ಸಾವಿರ ಸಂಶೋಧಕರಿಗೆ ಪ್ರಧಾನಮಂತ್ರಿ ರಿಸರ್ಚ್‌ ಫೆಲೋಷಿಪ್‌ ನೀಡಲಾಗುತ್ತಿದೆ. ಅಲ್ಲದೆ, ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ನೆರವು ನೀಡಲು ₹10 ಸಾವಿರ ಕೋಟಿ ತೆಗೆದಿರಿಸಲಾಗಿದೆ. ಅಲ್ಲದೆ, ಅಟಲ್‌ ಸಂಶೋಧನಾ ಮಿಷನ್‌ (ಏಮ್‌) ನಿರ್ಮಾಣ ಮಾಡಲಾಗಿದೆ’ ಎಂದು ಮೋದಿ ಹೇಳಿದರು.

‘ದೇಶದಲ್ಲಿ ಮೊದಲು, ಕಡಿಮೆ ಸಂಖ್ಯೆಯಲ್ಲಿ ಮೊಬೈಲ್‌ ಫೋನ್‌ ತಯಾರಿಕಾ ಕಾರ್ಖಾನೆಗಳಿದ್ದವು. ಆದರೆ, ಈಗ ಅವುಗಳ ಸಂಖ್ಯೆ 120ಕ್ಕೆ ಏರಿದೆ’ ಎಂದು ಅವರು ಹೇಳಿದಾಗ ಸಂವಾದ ಕೇಳುತ್ತಿದ್ದ ವಿದ್ಯಾರ್ಥಿಗಳು, ಉಪನ್ಯಾಸಕರು ಚಪ್ಪಾಳೆ ತಟ್ಟಿದರು.

‘ಕೇವಲ ಡಿಜಿಟಲ್‌ ಉತ್ಪನ್ನಗಳ ಅಭಿವೃದ್ಧಿಗಾಗಿ ಹ್ಯಾಕಥಾನ್‌ ಆಯೋಜಿಸುವ ಬದಲು, ಕೃಷಿ, ಕೈಗಾರಿಕಾ, ಶಿಕ್ಷಣ ಕ್ಷೇತ್ರದಲ್ಲಿನ ಸಂಶೋಧನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಹ್ಯಾಕಥಾನ್‌ ಆಯೋಜಿಸಬೇಕು’ ಎಂದರು.‘ದೇಶದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಹ ಸಂಶೋಧನೆಗೆ ವಿದ್ಯಾರ್ಥಿಗಳು ಮುಂದಾಗಬೇಕು. ಅದಕ್ಕೂ ಮೊದಲು ಎಲ್ಲರೂ ಕನಸು ಕಾಣಬೇಕು. ಆ ಕನಸನ್ನು ನನಸು ಮಾಡಿಕೊಳ್ಳಲು ಕಾರ್ಯೋನ್ಮುಖರಾಗಬೇಕು’ ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು.

ವಾರಾಣಸಿ, ಭುವನೇಶ್ವರ, ಪುಣೆ ಮತ್ತು ಬೆಂಗಳೂರಿನ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಪ್ರಧಾನಮಂತ್ರಿ ಉತ್ತರ ನೀಡಿದರು. ಕೊನೆಯಲ್ಲಿ, ತಾಂತ್ರಿಕ ತೊಂದರೆ ಉಂಟಾಯಿತು. ವಿದ್ಯಾರ್ಥಿಗಳು ಇನ್ನೂ ಪ್ರಶ್ನೆಗಳು ಕೇಳುವುದು ಬಾಕಿ ಇರುವಂತೆಯೇ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಶೆಟ್ಟರ್, ಬಿವಿಬಿ ಪ್ರಾಚಾರ್ಯ ತೇವರಿ, ಡಾ. ಪಿ.ಜಿ. ತೇವರಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT