ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಥೆ ಸೃಷ್ಟಿಸಬಹುದು, ಭಾವನೆಗಳನ್ನಲ್ಲ: ಸಾಹಿತ್ಯದಲ್ಲಿ ಎಐ ಬಳಕೆಯ ಬಗ್ಗೆ ಕಳವಳ

ಸಾಹಿತ್ಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಬಳಕೆಯ ಬಗ್ಗೆ ಕಳವಳ
Published : 9 ಆಗಸ್ಟ್ 2024, 14:45 IST
Last Updated : 9 ಆಗಸ್ಟ್ 2024, 14:45 IST
ಫಾಲೋ ಮಾಡಿ
Comments

ಬೆಂಗಳೂರು: ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ (ಎಐ) ನೆರವಿನಿಂದ ಕಥೆಗಳನ್ನು ಸುಲಭವಾಗಿ ಸೃಷ್ಟಿಸಬಹುದು. ಆದರೆ, ನಮ್ಮಲ್ಲಿನ ಭಾವನೆಗಳನ್ನು ಅಲ್ಲಿ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಈ ತಂತ್ರಜ್ಞಾನವು ಅದ್ಭುತ ಸೃಷ್ಟಿಸುವ ವಿಶ್ವಾಸವಿಲ್ಲ...’

ಇವು ಸಾಹಿತ್ಯ ಕ್ಷೇತ್ರದ ಪ್ರಮುಖರ ಮಾತುಗಳು. ಇಲ್ಲಿ ಶುಕ್ರವಾರ ನಡೆದ ‘ಬುಕ್ ಬ್ರಹ್ಮ ಸಾಹಿತ್ಯೋತ್ಸವ’ದ ‘ಎಐ ಯುಗ–ಕ್ಲಾಸಿಕ್‌ಗಳ ಅಂತ್ಯವೇ?’ ಗೋಷ್ಠಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಬೀರಬಹುದಾದ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು.

ವಿಮರ್ಶಕ ರಾಜೇಂದ್ರ ಚೆನ್ನಿ, ‘ಎಐ ತಂತ್ರಜ್ಞಾನ ಈಗಾಗಲೇ ನಮ್ಮ ಜೀವನವನ್ನು ಪ್ರವೇಶಿಸಿದೆ. ಈ ವೇಳೆ ಅದರ ಕಾರ್ಯವೈಖರಿ ಬಗ್ಗೆ ಒಂದೆಡೆ ಸಂಭ್ರಮವಿದ್ದರೆ, ಇನ್ನೊಂದೆಡೆ ಕಳವಳ ವ್ಯಕ್ತವಾಗುತ್ತಿದೆ. ಮನುಷ್ಯನ ಬುದ್ಧಿಮತ್ತೆಗೆ ಸರಿಸಮನಾದ ಸಾಮರ್ಥವನ್ನು ಎಐ ಹೊಂದಿದೆಯೆ ಎಂಬುದರ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಸಾಹಿತ್ಯ ಕೃತಿಗಳು ಬರಹಗಾರರ ಅನುಭವದಿಂದ ಹುಟ್ಟುತ್ತವೆಯೇ ಹೊರತು, ದತ್ತಾಂಶಗಳಿಂದಲ್ಲ. ಆದ್ದರಿಂದ ಲೇಖಕರು ಸೃಷ್ಟಿಸಿದ ಸಾಹಿತ್ಯದಷ್ಟು ಎಐ ರಚಿಸುವ ಕೃತಿಗಳು ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದರು.

ವಿದ್ವಾಂಸ ಕೃಷ್ಣಮೂರ್ತಿ ಹನೂರು ಮಾತನಾಡಿ, ‘ಪಂಪನಿಂದ ಈವರೆಗೆ ಸೃಷ್ಟಿಯಾದ ಸಾಹಿತ್ಯವನ್ನು ಗಮನಿಸಿದರೆ ಭಾಷಾ ವೈವಿಧ್ಯವನ್ನು ಗುರುತಿಸಬಹುದು. ಸಾಹಿತ್ಯವು ಭಾವುಕ ಜಗತ್ತಾದರೆ, ಎಐ ಲೌಕಿಕ ಜಗತ್ತಾಗಿದೆ. ಸಹಜ ಬುದ್ಧಿಗೆ ಇರುವ ಋಜುತ್ವ ಎಐಗೆ ಇದೆಯೆ? ಕವಿ ಯಾವುದೇ ಒಂದು ಪದ ಬಳಸುವಾಗಲೂ ಸಾಕಷ್ಟು ಎಚ್ಚರಿಕೆ ವಹಿಸುತ್ತಾನೆ. ಆದರೆ, ಎಐ ತೋಚಿದ ಪದಗಳನ್ನು ಜೋಡಿಸಿ, ನಮ್ಮ ಮುಂದೆ ಇಡುತ್ತದೆ’ ಎಂದರು.

ಲೇಖಕಿ ಪೂರ್ಣಿಮಾ ಮಾಳಗಿಮನಿ, ‘ಸಾಹಿತ್ಯ ಸೃಷ್ಟಿಗೆ ಅಗತ್ಯವಿರುವ ಮಾಹಿತಿ ಪಡೆಯಲು, ಪರಿಷ್ಕರಣೆ ಸೇರಿ ವಿವಿಧ ಕಾರ್ಯಕ್ಕೆ ಎಐ ತಂತ್ರಜ್ಞಾನವನ್ನು ಒಂದು ಸಾಧನವಾಗಿ ಬಳಸಿಕೊಳ್ಳಬಹುದು. ಇದರಿಂದ ಪರಿಣಾಮಕಾರಿ ಬರಹ ಸಾಧ್ಯವಾಗಲಿದೆ. ಆದ್ದರಿಂದ ಭಾವನೆ ರಹಿತವಾದ ಈ ತಂತ್ರಜ್ಞಾನವನ್ನು ಅಗತ್ಯ ಇರುವಲ್ಲಿ ಬಳಸಿಕೊಂಡು, ಹೆಚ್ಚು ಜನರನ್ನು ತಲುಪಬೇಕು’ ಎಂದು ಹೇಳಿದರು. 

ಲೇಖಕಿ ದೀಪಾ ಗಣೇಶ್ ಗೋಷ್ಠಿಯನ್ನು ನಿರ್ವಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT