ಅಕ್ಟೋಬರ್‌ 15ರಿಂದ ‘ಬೆಂಗಳೂರು ಪುಸ್ತಕೋತ್ಸವ’

7

ಅಕ್ಟೋಬರ್‌ 15ರಿಂದ ‘ಬೆಂಗಳೂರು ಪುಸ್ತಕೋತ್ಸವ’

Published:
Updated:

ಬೆಂಗಳೂರು: ಬೆಂಗಳೂರು ಪುಸ್ತಕ ಮಾರಾಟಗಾರರು, ಪ್ರಕಾಶಕರ ಸಂಘ ಮತ್ತು ಇಂಡ್ಯಾ ಕಾಮಿಕ್ಸ್‌ ಸಹಯೋಗದಲ್ಲಿ ಅಕ್ಟೋಬರ್‌ 15 ರಿಂದ 21 ರವರೆಗೆ ‘ಬೆಂಗಳೂರು ಪುಸ್ತಕೋತ್ಸವ–2018’ ನಡೆಯಲಿದೆ.

ಈ ಪುಸ್ತಕೋತ್ಸವವು ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ತಿಳಿಸಿದರು.

ಈ ಬಾರಿ ಪುಸ್ತಕೋತ್ಸವದಲ್ಲಿ ಕನ್ನಡ, ಇಂಗ್ಲಿಷ್‌, ಸಂಸ್ಕೃತ, ಹಿಂದಿ, ತಮಿಳು, ಮಲೆಯಾಳಿ, ಬಂಗಾಳಿ, ತೆಲುಗು ಭಾಷೆಗಳಿಗೆ ಸೇರಿದ 350 ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಇದೇ ಸಂದರ್ಭದಲ್ಲಿ ಎರಡು ದಿನಗಳ ಸಾಹಿತ್ಯೋತ್ಸವವನ್ನೂ ನಡೆಸಲಾಗುವುದು ಎಂದರು.

ಈ ಸಲದ ಪುಸ್ತಕೋತ್ಸವದಲ್ಲಿ  ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಐಟಿ–ಬಿಟಿ ಉದ್ಯೋಗಿಗಳು, ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ  ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಕಾವ್ಯ ಪರಂಪರೆ ಇತ್ಯಾದಿಗಳನ್ನು ಪರಿಚಯಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ಪುಸ್ತಕಗಳಿಗೆ ಶೇ. 50 ರ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುವುದು. ರಾಜ್ಯದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿಲ್ಲ. ದಿನೇ ದಿನೇ ವೃದ್ಧಿಗೊಳ್ಳುತ್ತಿದೆ. ಆನ್‌ಲೈನ್‌ ಮೂಲಕ ಪುಸ್ತಕ ಖರೀದಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದರು.

ಪುಸ್ತಕ ಮಾರಾಟಗಾರರಿಗೆ ಮಳಿಗೆಗಳನ್ನು ಡ್ರಾ ಮೂಲಕ ನೀಡಲಾಗುವುದು. ಮಳಿಗೆ ಕಾಯ್ದಿರಿಸಲು ಕೊನೆಯ ದಿನ ಅಕ್ಟೋಬರ್‌ 10. ಮಳಿಗೆಗಳನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗುವುದು. ಯಾವುದೇ ಪ್ರಕಾಶಕರಿಗೂ ತೊಂದರೆ ಆಗದಂತೆ ನೋಸಿಕೊಳ್ಳುತ್ತೇವೆ ಎಂದು ಕಾರ್ಯಕ್ರಮದ ನಿರ್ದೇಶಕ ಬಿ.ಎಸ್‌.ರಘುರಾಮ್‌ ತಿಳಿಸಿದರು.

ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಿದ್ದು, ಸಾರ್ವಜನಿಕರು ₹ 20 ಪ್ರವೇಶ ಶುಲ್ಕ ನೀಡಬೇಕು, ಓದುಗರ ತಮ್ಮ ನೆಚ್ಚಿನ ಲೇಖಕರ ಹಸ್ತಾಕ್ಷರ ಹಾಕಿಸಿಕೊಳ್ಳಬಹುದು. ಅವರೊಂದಿಗೆ ಮಾತನಾಡವುದಕ್ಕೂ ಅವಕಾಶವಿದೆ ಎಂದರು.

ಪುಸ್ತಕೋತ್ಸವದ ಬಗ್ಗೆ ಅರಿವು ಮೂಡಿಸಲು ಶಾಲಾ– ಕಾಲೇಜುಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !