ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ಮುಟ್ಟಿದರೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ’

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಎಚ್ಚರಿಕೆ
Published 3 ಜೂನ್ 2023, 21:32 IST
Last Updated 3 ಜೂನ್ 2023, 21:32 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಕೆಲವರು ಬೊಬ್ಬೆ ಹಾಕುತ್ತಿದ್ದಾರೆ. ಯಾರಿಂದಲೂ ಸಂವಿಧಾನ ಅಲುಗಾಡಿಸಲು ಸಾಧ್ಯವಿಲ್ಲ. ಅದನ್ನು ಮುಟ್ಟಿದರೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೇ ನಡೆಯಲಿದೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಎಚ್ಚರಿಸಿದರು.

ನಗರದಲ್ಲಿ ಶನಿವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರಕಾಶನ ಹಾಗೂ ಜಾಣಗೆರೆ ಪತ್ರಿಕೆ ಪ್ರಕಾಶನ ಆಯೋಜಿಸಿದ್ದ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

‘ಅಂಬೇಡ್ಕರ್‌ ಅವರು ಪ್ರಬಲ ರಾಜಕೀಯ ಗ್ರಂಥವಾದ ಸಂವಿಧಾನ ಕೊಟ್ಟಿದ್ದಾರೆ. ಅವರು ತಮ್ಮ ಮುತ್ಸದ್ದಿತನದ ರಾಜಕೀಯ ಶಕ್ತಿಯನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕ ಮಾಡಿದ್ದಾರೆ. ಯಾರಿಂದಲೂ ಸಂವಿಧಾನ ಬದಲಾವಣೆ ಸಾಧ್ಯವೇ ಇಲ್ಲ. ಅವರು ಬೊಬ್ಬೆ ಹಾಕುತ್ತಲೇ ಇರಲಿ’ ಎಂದು ಹೇಳಿದರು.

‘ದಲಿತ ಸಂಘರ್ಷ ಸಮಿತಿ, ಎಡಪಕ್ಷಗಳನ್ನು ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳ ಮುಖವಾಡ ಒಂದೇ ಆಗಿದೆ. ರಾಜಕೀಯ ಪಕ್ಷಗಳು ಮಾತ್ರ ಬಂಡವಾಳಶಾಹಿಗಳಿಗೆ ಮಾತ್ರ ಚುನಾವಣೆಯಲ್ಲಿ ಟಿಕೆಟ್ ನೀಡುತ್ತಿವೆ. ದೇಶದ ಸುಭಿಕ್ಷೆ ಯಾರಿಗೂ ಬೇಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಕಳೆದಿದ್ದರೂ ಜನರಿಗೆ ಇನ್ನೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಿಕ್ಕಿಲ್ಲ. ನ್ಯಾಯಯುತವಾಗಿ ಭೂಮಿ ಹಂಚಿಕೆ ಆಗಿಲ್ಲ ಎಂದು ವಿಷಾದಿಸಿದರು.

ದಿವಂಗತ ಗೋಪಾಲ ದೇವನಹಳ್ಳಿ ಅವರ ‘ದಲಿತ ಚಿಂತನ ಲೋಕ’ ಕೃತಿ ಕುರಿತು ಮಾತನಾಡಿದ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್‌, ‘ಸಂವಿಧಾನದಲ್ಲಿರುವ ಎಲ್ಲ ಆಶಯಗಳು ಇಂದಿಗೂ ಜಾರಿಗೊಂಡಿಲ್ಲ. ಅಂಬೇಡ್ಕರ್‌ ಅವರ ಮೇಲೆ ಭಾವನಾತ್ಮಕ ಅಭಿಮಾನ ಹೊಂದಿರುವವರು ಕೋಟ್ಯಂತರ ಮಂದಿ ಇದ್ದಾರೆ. ಆದರೆ, ಅವರ ಬಗ್ಗೆ ಅಧ್ಯಯನ ಮಾಡಿ ಚಿಂತನೆಗಳನ್ನು ಪ್ರತಿಪಾದನೆ ಮಾಡುವವರ ಸಂಖ್ಯೆ ಕಡಿಮೆಯಿದೆ’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರ ಬರವಣಿಗೆಯ ವಿಷಯದ ವ್ಯಾಪ್ತಿ ಹಾಗೂ ವೈವಿಧ್ಯತೆ ವಿಸ್ತಾರವಾದದ್ದು. ಅಂಬೇಡ್ಕರ್‌ ವಿದ್ವತ್ತಿನ ಲೇಖನಗಳನ್ನು ಅಧ್ಯಯನ ಮಾಡಲು ಶ್ರದ್ಧೆ ಬೇಕಿದೆ. ಗೋಪಾಲ್‌ ದೇವನಹಳ್ಳಿ ಅವರ ಲೇಖನಗಳಲ್ಲಿ ಆ ಅಧ್ಯಯನಶೀಲತೆ ಕಾಣಿಸುತ್ತಿದೆ’ ಎಂದು ಹೇಳಿದರು.

ಲೇಖಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ‘ಅಂಬೇಡ್ಕರ್‌ ಅವರು ಸಂವಿಧಾನವನ್ನು ರಚಿಸದೇ ಇದ್ದರೆ ಸಮಾಜವು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಸಂವಿಧಾನವನ್ನು ಮುಟ್ಟಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್‌, ಚಿಂತಕ ಪ್ರೊ.ಎಲ್‌.ಎನ್.ಮುಕುಂದರಾಜ್‌, ಲೇಖಕ ಪ್ರೊ.ಎನ್‌.ಚಿನ್ನಸ್ವಾಮಿ ಸೋಸಲೆ, ಕೆ.ಚಂದ್ರಶೇಖರ್ ಇದ್ದರು.

ಲೇಖಕ: ಗೋಪಾಲ ದೇವನಹಳ್ಳಿ

ಕೃತಿ: ದಲಿತ ಚಿಂತನ ಲೋಕ

ಬೆಲೆ: ₹ 500

*

ಲೇಖಕ: ಜಾಣಗೆರೆ ವೆಂಕಟರಾಮಯ್ಯ

ಕೃತಿ: ಜಾಣಗೆರೆ: 50 ಕತೆಗಳು

ಬೆಲೆ: ₹ 500

*

ಲೇಖಕ: ಕೆ.ಚಂದ್ರಶೇಖರ್‌

ಕೃತಿ: ಅಂತರಾಳ (ಸಂಪಾದಕೀಯ ಬರಹಗಳ ಸಂಕಲನ)

ಬೆಲೆ: ₹ 250

(ಮೂರು ಕೃತಿಗಳೂ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರಕಾಶನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT