ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಕ್ಕೆ ವರ್ತಮಾನದ ಸಂವೇದನೆ ಅಗತ್ಯ: ಕೀಟ ತಜ್ಞ ಡಾ.ಕೆ.ಎನ್‌. ಗಣೇಶಯ್ಯ

ಕಾನನ ಜನಾರ್ದನ’ ಕಾದಂಬರಿ ಲೋಕಾರ್ಪಣೆ
Last Updated 13 ಮಾರ್ಚ್ 2022, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತ್ಯವು ಇತಿಹಾಸದ ಜತೆಗೆ ವರ್ತಮಾನದ ಸಂವೇದನೆಯನ್ನೂ ಒಳಗೊಂಡಿರಬೇಕು’ ಎಂದು ಕೀಟ ತಜ್ಞ ಹಾಗೂ ಲೇಖಕ ಡಾ.ಕೆ.ಎನ್‌. ಗಣೇಶಯ್ಯ ತಿಳಿಸಿದರು.

‘ಬುಕ್‌ ಬ್ರಹ್ಮ’ದ ಸಹಯೋಗದಲ್ಲಿ ‘ಅಂಕಿತ ಪುಸ್ತಕ’ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರ‘ಕಾನನ ಜನಾರ್ದನ’ ಕಾದಂಬರಿ ಬಿಡುಗಡೆಯಾಯಿತು. ತಮ್ಮ ಕೃತಿಯ ಬಗ್ಗೆ ಮಾತನಾಡಿದ ಅವರು,‘ವಸ್ತು ಮತ್ತು ಹುಡುಕಾಟ ಸಾಹಿತ್ಯ ರಚನೆಯ ನಿರಂತರ ಚಟುವಟಿಕೆ.ಸಮೂಹ ಕುತೂಹಲದೊಂದಿಗೆ ನನ್ನ ಭಾವಕೋಶದಲ್ಲಿ ಸಾಹಿತ್ಯ ರೂಪುಗೊಳ್ಳುತ್ತದೆ. ಕಾದಂಬರಿಯಲ್ಲಿ ಪ್ರಸ್ತಾಪಿತವಾದ ಧರ್ಮ ಹಾಗೂ ರಾಜಕಾರಣ ಮಾತ್ರ ಚರಿತ್ರೆಯನ್ನು ಆಧರಿಸಿದೆ.ಇತಿಹಾಸದ ಕೌತುಕ ಸಂಗತಿಗಳನ್ನು ಕಥೆಯಾಗಿಸುವ ಹುಡುಕಾಟ ನನ್ನ ಮನೋಧರ್ಮ’ ಎಂದರು.

ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್,‘ಮಾನವ, ಆಹಾರ, ಪರ್ಯಟನೆ, ವಲಸೆ, ದೈವತೆ ಸೇರಿದಂತೆ ವಿವಿಧ ಸಂಗತಿಗಳಿಗೆ ಸಂಬಂಧಿಸಿದ ಚರಿತ್ರೆಗಳನ್ನು ಕಾದಂಬರಿಯಲ್ಲಿ ಹೇಳಲಾಗಿದೆ.ಕಾದಂಬರಿಕಾರ ಯಾರ ಪರವಾಗಿಯೂ ಇರುವುದಿಲ್ಲ. ಇರುವುದನ್ನು ಪಾಕಮಾಡಿ, ರಸಪೂರ್ಣವಾಗಿ ನೀಡುವುದು ಕೆಲಸವಾಗಿರುತ್ತದೆ. ಗಣೇಶಯ್ಯ ಅವರು ಅದನ್ನೇ ಮಾಡಿದ್ದಾರೆ. ಚರಿತ್ರೆಯ ವಾಸ್ತವವನ್ನೂ ಕಾದಂಬರಿಯಲ್ಲಿ ಹೇಳಲಾಗಿದೆ.ದೇಶದಲ್ಲಿನ ಸಾಮಾಜಿಕ ಜೀವನದಲ್ಲಿ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು. ತಂತ್ರಜ್ಞಾನದ ಬದಲಾವಣೆಯಂತೂ ಊಹೆಗೆ ನಿಲುಕದಷ್ಟು ಆಗಿದೆ’ ಎಂದು ಹೇಳಿದರು.

ಸಾಹಿತಿ ಬೈರಮಂಗಲ ರಾಮೇಗೌಡ, ‘ಕಾದಂಬರಿಯು ಐತಿಹಾಸಿಕ ಸಂಗತಿಗಳ ಕುರಿತು ಕುತೂಹಲ ಕೆರಳಿಸುತ್ತದೆ. ಕೌತುಕ-ವಿಸ್ಮಯಗಳನ್ನು ಸಂಭ್ರಮಿಸುವಂತೆ ಮಾಡುತ್ತದೆ. ವಿಚಾರ ಪ್ರಚೋದಕವೂ ಆಗಿದೆ. ಇಂತಹ ಕಾದಂಬರಿಗಳನ್ನು ವಿಮರ್ಶಿಸಲು ಸಾಂಪ್ರದಾಯಿಕ ಮಾನದಂಡಗಳು ಸಾಕಾಗಲಾರವು. ಧರ್ಮಕಾರಣ-ರಾಜಕಾರಣಗಳ ಅಪವಿತ್ರ ಮೈತ್ರಿ ಹೆಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿ ಈ ಕಾದಂಬರಿಯ ವಸ್ತು ವಿಮರ್ಶೆಗೆ ಒಳಪಡಬೇಕು’ ಎಂದು ತಿಳಿಸಿದರು.

ಪುಸ್ತಕ ಪರಿಚಯ

ಪುಸ್ತಕ: ‘ಕಾನನ ಜನಾರ್ದನ’

ಲೇಖಕರು: ಡಾ.ಕೆ.ಎನ್. ಗಣೇಶಯ್ಯ

ಪುಟಗಳು: ₹ 400

ಬೆಲೆ: ₹ 395

ಪ್ರಕಾಶನ: ಅಂಕಿತ ಪುಸ್ತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT