ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹೋರಾತ್ರಿ ಕಿ.ರಂ ಚಿಂತನೆಯ ಗುಂಗು

ಗುರುಸ್ಮರಣೆಯಲ್ಲಿ ಮುಳುಗಿದ ಶಿಷ್ಯ ವೃಂದ
Last Updated 16 ನವೆಂಬರ್ 2019, 23:03 IST
ಅಕ್ಷರ ಗಾತ್ರ

ಬೆಂಗಳೂರು: ಕಿ.ರಂ. ನಾಗರಾಜ್‌ ಕುರಿತ ಐದು ಪುಸ್ತಕಗಳ ಬಿಡುಗಡೆ, 12 ಮಂದಿಗೆ ಕಿ.ರಂ. ಪುರಸ್ಕಾರ, ಅವರ ಕೃತಿಗಳ ಅನುಸಂಧಾನ, ಕಿ.ರಂ. ಮತ್ತು ಮೌಖಿಕ ಚಿಂತನೆಗಳ ಅವಲೋಕನ, ಕವಿಸಮಯ... ಹೀಗೆ ಶನಿವಾರ ಅಹೋರಾತ್ರಿ ಕಿ.ರಂ ಗುಂಗಿನಲ್ಲಿ ಅವರ ಶಿಷ್ಯ ವೃಂದ ಕಳೆದುಹೋಯಿತು.

ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್ ಆಯೋಜಿಸಿದ್ದ ‌‘ಕಾಡುವ ಕಿ.ರಂ‌’ ಕಾರ್ಯಕ್ರಮವನ್ನು ಕವಿ ಡಾ. ಸಿದ್ದಲಿಂಗಯ್ಯ ಉದ್ಘಾಟಿಸಿದರು.

‘ಕಿರಂ ಅವರು ಇಂಗ್ಲಿಷ್‌, ಗ್ರೀಕ್‌ ಸಾಹಿತ್ಯದಲ್ಲಿ ಅಪಾರ ಅರಿವು ಹೊಂದಿದ್ದರು. ಗಂಭೀರ ವಿಷಯದ ಬಗ್ಗೆ ಎಷ್ಟು ಆಸಕ್ತಿಯಿಂದ ಸಮಾಲೋಚನೆ ನಡೆಸುತ್ತಿದ್ದರೋ, ಗಣೇಶ ಬೀಡಿ ಮತ್ತು ಸಾಧು ಬೀಡಿಗೂ ಇರುವ ಭಿನ್ನತೆಯ ಬಗ್ಗೆಯೂ ಅಷ್ಟೇ ಗಂಭೀರವಾಗಿ ಚರ್ಚಿಸುತ್ತಿದ್ದರು. ಅವರೊಬ್ಬ ನಿತ್ಯ ಕುತೂಹಲದ ಸೂಕ್ಷ ಸಂವೇದನೆಯ ವ್ಯಕ್ತಿ’ ಎಂದು ಬಣ್ಣಿಸಿದರು.

‘ಹೊಲೆಮಾದಿಗರ ಹಾಡು ಕವನ ಸಂಕಲನ ಪ್ರಕಟಗೊಳ್ಳಲು ಅವರ ಕೊಡುಗೆಯೂ ಅಪಾರ. ನಮ್ಮನ್ನು ತಿದ್ದಿ ಮುನ್ನಡೆಸಿದ ಅವರು ನಮ್ಮೊಡನಿದ್ದ ಒಬ್ಬ ಅವಧೂತ.’ ಎಂದರು.

‘ನಾಸ್ತಿಕನಾದ ನನಗೆ ಮಂಟೇಸ್ವಾಮಿ, ಮಲೆಮಾದೇಶ್ವರ ಸೇರಿ ಜನಪದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬೆಳೆಸಿದರು. ಹೊಸ ತಲೆಮಾರಿಗೆ ಸೂಕ್ಷ್ಮವಾಗಿ ಯೋಚನೆ ಮಾಡುವುದನ್ನು ಕಲಿಸಿದ್ದರು’ ಎಂದರು.

ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ, ಲೇಖಕ ಆರ್.ಕೆ.ನಲ್ಲೂರು ಪ್ರಸಾದ್, ಶೂದ್ರ ಶ್ರೀನಿವಾಸ್, ಕಾಳೇಗೌಡ ನಾಗವಾರ, ಎಂ.ಎಸ್.ಮೂರ್ತಿ‌ ಮಾತನಾಡಿದರು.

ಆರು ಗೋಷ್ಠಿ
ಕಿ.ರಂ. ಕೃತಿಗಳ ಅನುಸಂಧಾನ, ಕಿ.ರಂ. ಮತ್ತು ಮೌಖಿಕ ಚಿಂತನೆಗಳ ಅವಲೋಕನ ಗೋಷ್ಠಿಗಳು ಮಧ್ಯಾಹ್ನ ನಡೆದವು. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ನಾಲ್ಕು ಕವಿಗೋಷ್ಠಿಗಳು ನಡೆದವು. 80 ಕವಿಗಳು ಕವಿತೆಗಳನ್ನು ವಾಚನ ಮಾಡಿದರು.

5 ಪುಸ್ತಕ ಬಿಡುಗಡೆ

ಶೂದ್ರ ಶ್ರೀನಿವಾಸ್ ಅವರ ‘ಕಿರಂ ಕಟ್ಟಿಕೊಟ್ಟ ಮನೋಲೋಕ, ಡಾ.ಟಿ.ವೆಂಕಟೇಶಮೂರ್ತಿ ಅವರ ‘ಯಾಜಮಾನ್ಯ ಸಂಕಥನ’, ಡಾ. ಶಿವರಾಜ್ ಬ್ಯಾಡರಳ್ಳಿ ಅವರ ‘ನುಡಿಬೆಡಗು’, ಡಾ. ಜಯಶಂಕರ ಹಲಗೂರು ಅವರ ‘ಕಿರಂ ಹೊಸ ಕವಿತೆಗಳು–2019’ ಮತ್ತು ನಿಶಾ ಯಶ್‌ರಾಮ್ ಅವರ ‘ಬಿಡುಗಡೆ’ ಪುಸ್ತಕಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ಕಿ.ರಂ. ಪುರಸ್ಕಾರ: ಕ.ರಾ.ಕೃ, ಮನು ಪಾಟೀಲ, ಕಾಳೇಗೌಡ ನಾಗವಾರ, ನಾಗತಿಹಳ್ಳಿ ಚಂದ್ರಶೇಖರ, ಪ್ರತಿಭಾ ನಂದಕುಮಾರ್, ಲಕ್ಷ್ಮೀಪತಿ ಕೋಲಾರ, ಪ.ಸ.ಕುಮಾರ್, ಎಸ್.ಆರ್. ರಾಮಕೃಷ್ಣ, ಎಂ.ಆರ್.ಕಮಲಾ, ಉಷಾ ಕಟ್ಟೇಮನೆ, ಹರೀಶ್ ಕಟ್ಟೆಬೆಳಗುಳಿ, ಇಂಡಸ್ ಜಯರಾಂ ಅವರಿಗೆ ಕಿ.ರಂ. ಪುರಸ್ಕಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT