ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಕ ವೈಕೆಎಂಗೆ ಅಭಿಮಾನಿಗಳ ಆತ್ಮೀಯ ಸನ್ಮಾನ

‘ಹಾಡು ಹಿಡಿದ ಜಾಡು’ ಆತ್ಮಕಥೆ ಬಿಡುಗಡೆಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 5 ಜೂನ್ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ಗಾಯಕ ವೈ.ಕೆ.ಮುದ್ದುಕೃಷ್ಣ ಅವರಿಗೆ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಅವರ ಅಭಿಮಾನಿಗಳು, ಶಿಷ್ಯರು ಹಾಗೂ ಗಾಯಕರು ಆತ್ಮೀಯವಾಗಿ ಸನ್ಮಾನಿಸಿದರು. ವೈ.ಕೆ.ಎಂ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾಹಿತಿಗಳೂ ಸಾಕ್ಷಿಯಾದರು.

ಸುಗಮ ಸಂಗೀತ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಮಾತನಾಡಿ, ‘ವೈಕೆಎಂ ಅವರು ಉನ್ನತಾಧಿಕಾರಿಯಾಗಿದ್ದರೂ ವೃಕ್ಷ ವ್ಯಕ್ತಿತ್ವದವರು. ಸುಗಮ ಸಂಗೀತ ಕ್ಷೇತ್ರಕ್ಕೆ ಬಲವಾದ ಹಾಗೂ ಖಚಿತವಾದ ದಾರಿ ತೋರಿದವರು. ವೈಕೆಎಂ ಜನಮುಖಿ ಬದುಕು ಬಹಳ ಮುಖ್ಯ’ ಎಂದು ಪ್ರತಿಪಾದಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ದೇಶದಲ್ಲಿ ಅಭಿಪ್ರಾಯ ಮಂಡನೆಗೆ ಸ್ವಾತಂತ್ರ್ಯವಿದೆ. ಹೊರ ಪ್ರಯಾಣಕ್ಕಿಂತ ಒಳಪ್ರಯಾಣ ಬಹಳ ಮುಖ್ಯ. ಸಾಮಾಜಿಕ ಜವಾಬ್ದಾರಿಯಿಂದ ಬದುಕಬೇಕು. ಮಾನವೀಯ ಗುಣವುಳ್ಳವರಾಗಿದ್ದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ’ ಎಂದು ಹೇಳಿದರು.

‘ಪ್ರತಿ ವ್ಯಕ್ತಿಗೂ ಒಂದು ದಾರಿಯಿರುತ್ತದೆ. ಈ ದಾರಿಯಲ್ಲಿ ಪರಿಪೂರ್ಣತೆಯಿಂದ ಬದುಕಬೇಕಿದೆ. ಮಕ್ಕಳಲ್ಲಿ ಮುಗ್ಧತೆ ಹಾಗೂ ಕುತೂಹಲ ಇರಲಿದೆ. ದೊಡ್ಡವಾರದ ಮೇಲೆಯೂ ಅದು ಉಳಿಯಲಿ. ಆತ್ಮಸಾಕ್ಷಿಗೆ ಅನುಗುಣವಾಗಿ ಜೀವಿಸೋಣ’ ಎಂದು ಮುಖ್ಯಮಂತ್ರಿ ಕರೆ ನೀಡಿದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಹಂಪ ನಾಗರಾಜಯ್ಯ ಮಾತನಾಡಿ, ‘ಜೀವನದ ಅಂತಃಕರಣಕ್ಕೆ ದಾರಿ ತೋರುವವರು ಸಂಗೀತಗಾರರು. ವೈಕೆಎಂ ಸಂಗೀತದ ಜೊತೆಗೆ ಹಲವು ಕ್ಷೇತ್ರದಲ್ಲಿ ವಿಜೃಂಭಿಸಿದವರು. ಹಾಡಿನ ಮೂಲಕ ಮನಸ್ಸಿಗೆ ಸ್ಫೂರ್ತಿ ತುಂಬಿದವರು’ ಎಂದು ಹೇಳಿದರು.

ಆತ್ಮಕಥೆಯ ಸಂಪಾದಕ ಡಾ.ನಾ.ದಾಮೋದರ ಮಾತನಾಡಿ, ‘ವೈಕೆಎಂ ಅವರು ನಿವೃತ್ತರಾದ ಮೇಲೂ ಜನಪರವಾದ ಕೆಲಸ ಮಾಡುತ್ತಿದ್ದಾರೆ. 80ನೇ ವರ್ಷಕ್ಕೆ ದೊಡ್ಡ ಕಾರ್ಯಕ್ರಮ ಮತ್ತೊಂದು ಕೃತಿ ಹೊರ ತರಲಾಗುವುದು’ ಎಂದು ನುಡಿದರು.

‘ಹಾಡು ಹಿಡಿದ ಜಾಡು’ ಆತ್ಮಕಥೆಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಕೃಷಿಕ್ ಸರ್ವೋದಯ ಫೌಂಡೇಶನ್ ಅಧ್ಯಕ್ಷ ವೈ.ಕೆ.ಪುಟ್ಟಸೋಮೇಗೌಡ, ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ, ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನಿವಾಸ್‌ ಉಡುಪ ಹಾಜರಿದ್ದರು. ಎನ್‌.ಅಪರ್ಣಾ ಹಾಗೂ ಹರೀಶ್‌ ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಪುಸ್ತಕ ಪರಿಚಯ
ಪುಸ್ತಕ: ಹಾಡು ಹಿಡಿದ ಜಾಡು
ಸಂಪಾದಕ: ಡಾ.ನಾ.ದಾಮೋದರ್‌
ನಿರೂಪಕರು: ಶಮಾ ನಂದಿಬೆಟ್ಟ
ಪ್ರಕಾಶನ: ಸಪ್ನಾ ಬುಕ್‌ ಹೌಸ್‌
ಪುಟಗಳು: 312
ಬೆಲೆ: ₹ 375

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT