ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಪನ್ಮೂಲ ಸೋರಿಕೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ’

Last Updated 17 ನವೆಂಬರ್ 2018, 18:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಪಾಲಿಕೆಯ ಸಂಪನ್ಮೂಲ ಸೋರಿಕೆಗೆ ಅವಕಾಶ ನೀಡಬೇಡಿ, ಬಿಬಿಎಂಪಿ ಸದಸ್ಯರಿಗೆ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿ, ವಾರ್ಡ್‌ ಸಮಿತಿಗಳನ್ನು ಬಲಪಡಿಸಿ...

ಈ ಒತ್ತಾಯಗಳು ಕೇಳಿ ಬಂದಿದ್ದು, ನಗರದಲ್ಲಿ ಬಿ.ಪ್ಯಾಕ್‌ ಸಂಸ್ಥೆ ಶನಿವಾರ ಆಯೋಜಿಸಿದ್ದ ‘ನಗರ ಅಧಿಕಾರ ಹಾಗೂ ಆಡಳಿತ’ ಕುರಿತ ಸಂವಾದದಲ್ಲಿ.

ಆಧಾರ್‌ ಜೋಡಿಸಿ: ‘ಮತದಾರರ ಪಟ್ಟಿ ಸರಿ ಇಲ್ಲದಿರುವುದೇನಗರ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗಲು ಮೂಲ ಕಾರಣ. ಹಲವರು ಸ್ವಂತ ಊರು ಹಾಗೂ ಕಾರ್ಯನಿರ್ವಹಿಸುತ್ತಿರುವ ನಗರದಲ್ಲಿ ಮತದಾರರ ಗುರುತಿನ ಚೀಟಿ ಹೊಂದಿರುತ್ತಾರೆ. ಹಾಗಾಗಿ, ಇಲ್ಲಿ ನಿಜವಾದ ಮತದಾರರು ಯಾರು ಎಂದೇ ತಿಳಿಯುವುದಿಲ್ಲ. ಆದ್ದರಿಂದ, ಮತದಾರರ ಪಟ್ಟಿಯ ಶುದ್ಧೀಕರಣ ಆಗಬೇಕು. ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು’ ಎಂದು ಶಾಸಕ ಎಸ್‌.ಸುರೇಶ್‌ ಕುಮಾರ್‌ಒತ್ತಾಯಿಸಿದರು.

‘ರಾಷ್ಟ್ರದಲ್ಲಿ ಲೋಕಪಾಲ, ರಾಜ್ಯದಲ್ಲಿ ಲೋಕಾಯುಕ್ತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.ಲೋಕಾಯುಕ್ತ ಹಲ್ಲು ಕಿತ್ತ ಹಾವಿನಂತಾಗಿದೆ’ ಎಂದು ಪತ್ರಕರ್ತ ಮಹದೇವ ಪ್ರಕಾಶ್‌ ಆರೋಪಿಸಿದರು.

‘ಕಪ್ಪು ಹಣ ಉಳ್ಳವರು, ಉದ್ದಿಮೆದಾರರೇ ರಾಜಕೀಯಕ್ಕೆ ಬರುತ್ತಿದ್ದಾರೆ. ವಿಜ್ಞಾನಿಗಳು, ಯುವಜನತೆ, ಯೋಗ್ಯರನ್ನು ಬಿಬಿಎಂಪಿಯ ಚುನಾವಣೆಯತ್ತ ಕರೆತರುವವರಾರು. ಮೇಯರ್‌ ಅವರನ್ನು ಜನರು ನೇರವಾಗಿ ಆಯ್ಕೆ ಮಾಡುವಂತಾಗಬೇಕು’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌ ಹೇಳಿದರು.

ಮೇಯರ್‌ ಅಧಿಕಾರಾವಧಿ ವಿಸ್ತರಿಸಿ

‘ಒಂದು ವರ್ಷದಲ್ಲಿ ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲುಮೇಯರ್‌ಗೆ ಸಾಧ್ಯವಾಗುವುದಿಲ್ಲ. ಹಾಗಾಗಿ, ಅಧಿಕಾರಾವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್‌, ‘ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ದೇಶದಾದ್ಯಂತ ಪಂಚಾಯತ್‌ ರಾಜ್ ಮತ್ತು ನಗರಾಡಳಿತ ಸಂಸ್ಥೆಗಳ ರಚನೆಗಳಿಗೆ ಏಕರೂಪತೆ ತರಲು ರಚಿಸಿದ್ದರೂ, ಅವುಗಳ ಅನುಸರಣೆ ಆಗುತ್ತಿಲ್ಲ.ರಾಜಕಾರಣಿ, ಅಧಿಕಾರಿ, ಗುತ್ತಿಗೆದಾರರ ಮಾಫಿಯಾ ಸಾರ್ವಜನಿಕ ವಲಯವನ್ನು ತೀವ್ರವಾಗಿ ಆವರಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಿಬಿಎಂಪಿ ವಿಭಜನೆಯಿಂದ ಆಡಳಿತ ಸುಧಾರಣೆ ಅಸಾಧ್ಯ. ಪಾರದರ್ಶಕ ಆಡಳಿತಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನುಳ್ಳ ‘ಗ್ರೇಟರ್‌ ಬೆಂಗಳೂರು ಅಥಾರಿಟಿ’(ಉನ್ನತ ಮಟ್ಟದ ಪ್ರಾಧಿಕಾರ) ಸ್ಥಾಪನೆಯಾಗಬೇಕು’ ಎಂದು ಎಂ.ಆರ್‌.ಶ್ರೀನಿವಾಸ್‌ಮೂರ್ತಿ ಒತ್ತಾಯಿಸಿದರು.‌

‘ಪಾಲಿಕೆಗೆ ಆರ್ಥಿಕ ಕೊರತೆ’

‘ರಸ್ತೆ ಗುಂಡಿ, ರಾಜಕಾಲುವೆ ಇವೆಲ್ಲವುಗಳ ನಿರ್ವಹಣೆ ಹಾಗೂ ಅಭಿವೃದ್ಧಿಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ವಿಚಾರ ಮಾಡುವಂಥದ್ದು.ನಗರದ ಅಭಿವೃದ್ಧಿ ಕಾರ್ಯಗಳಿಗೆ ಆಸ್ತಿ ತೆರಿಗೆ ಸಂಗ್ರಹಿಸಿದರೂ ನಿರ್ವಹಣೆಗೆ ಬೇಕಾದ ಆರ್ಥಿಕತೆ ಮತ್ತು ಮಾನವ ಸಂಪನ್ಮೂಲದ ಕೊರತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಬದಲಾವಣೆಗಳನ್ನು ತರುವ ಅಗತ್ಯವಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅಭಿಪ್ರಾಯಪಟ್ಟರು.

‘ಪಾಲಿಕೆಯ ಒಟ್ಟು ಬಜೆಟ್‌ ₹ 7.5 ಸಾವಿರ ಕೋಟಿ. (ರಾಜ್ಯ ಸರ್ಕಾರದಿಂದ ₹ 3.5 ಸಾವಿರ ಕೋಟಿ ಅನುದಾನ ಸೇರಿ). ಇದರಲ್ಲಿ ಸಂಬಳ ಕಳೆದು, ₹ 5 ಸಾವಿರ ಕೋಟಿಯಲ್ಲಿ ಎಲ್ಲ ನಿರ್ವಹಣೆ ಅಸಾಧ್ಯ’ ಎಂದರು.

ಅಂಕಿ ಅಂಶ

* 1.30 ಕೋಟಿಬೆಂಗಳೂರು ಜನಸಂಖ್ಯೆ

* 93,000 ಒಟ್ಟು ರಸ್ತೆಗಳು

* 842 ಕಿ.ಮೀ ರಾಜಕಾಲುವೆಗಳು

* 1,050 ಉದ್ಯಾನಗಳು

* 150 ಆಟದ ಮೈದಾನಗಳು

* 156 ಶಾಲಾ– ಕಾಲೇಜುಗಳು

* 27 ಆಸ್ಪತ್ರೆಗಳು,

* 167 ಕೆರೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT