ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ಯಾವುದೇ ಅಂಜಿಕೆ ಇಲ್ಲದೇ ಬ್ರಾಹ್ಮಣರ ಬೆನ್ನು ತಟ್ಟುತ್ತಿದ್ದರು. ಈಗಿನ ರಾಜಕಾರಣಿಗಳು ಸ್ವಲ್ಪ ಹೆದರುತ್ತಾರೆ. ನನ್ನ ಕ್ಷೇತ್ರದಲ್ಲಿ ಎರಡು ಲಕ್ಷ ಮತದಾರರಿದ್ದಾರೆ. ಅದರಲ್ಲಿ 2,000 ಮಾತ್ರ ಬ್ರಾಹ್ಮಣರಾಗಿದ್ದಾರೆ. ಅಭಿಮಾನದಿಂದ ಕೆಲವರು ನನಗೆ ಮತ ಹಾಕುತ್ತಾರೆ. ಹೆಚ್ಚಿನ ಬ್ರಾಹ್ಮಣರು ಯಾವ ಪಕ್ಷಕ್ಕೆ ಹಾಕುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡಿ ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದರಿಂದ ನಾನು ಒಂಬತ್ತು ಬಾರಿ ಶಾಸಕನಾಗಲು ಸಾಧ್ಯವಾಗಿದೆ’ ಎಂದರು.