ಶನಿವಾರ, ಸೆಪ್ಟೆಂಬರ್ 25, 2021
22 °C
ದುಬಾರಿ ವೆಚ್ಚ:

ಇ–ಬಸ್: ಬಿಳಿಯಾನೆ ಭಯದಲ್ಲಿ ಬಿಎಂಟಿಸಿ- ಫೇಮ್–2 ಯೋಜನೆ ಅನುಷ್ಠಾನ ಅನುಮಾನ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸರ್ಕಾರದ ಫೇಮ್‌ ಇಂಡಿಯಾ–2(ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್) ಕಾರ್ಯಕ್ರಮದಡಿ ಸಿಲಿಕಾನ್ ಸಿಟಿಗೆ ಎಲೆಕ್ಟ್ರಿಕ್ ಬಸ್ ಪರಿಚಯಿಸುವ ಬಿಎಂಟಿಸಿ ಪ್ರಯತ್ನ ಸದ್ಯಕ್ಕೆ ಸಾಕಾರವಾಗುವ ಲಕ್ಷಣ ಇಲ್ಲ. ಪ್ರಯಾಣಿಕರಿಲ್ಲದೆ ಮೊದಲೇ ಬಡವಾಗಿರುವ ಬಿಎಂಟಿಸಿ, ಈ ಎಲೆಕ್ಟ್ರಿಕ್ ಬಸ್‌ಗಳು ಬಿಳಿಯಾನೆಯ ಆಗಲಿವೆಯೇನೋ ಎಂಬ ಭಯವನ್ನು ಎದುರಿಸುತ್ತಿದೆ.

ಡೀಸೆಲ್ ಬಸ್‌ಗಳಿಗೆ ಬದಲಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವ ಪ್ರಯತ್ನ ಇಂದು–ನಿನ್ನೆಯದಲ್ಲ. 2015ರಿಂದಲೂ ಈ ವಿಷಯ ಪ್ರಸ್ತಾಪವಾಗುತ್ತಲೇ ಇದೆ. 2015ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರದ ‘ಫೇಮ್–1’ ಯೋಜನೆ ಆರಂಭವಾಯಿತು. 80 ಬಸ್‌ಗಳನ್ನು ರಸ್ತೆಗಳಿಸಲು ₹14.95 ಕೋಟಿ, ಚಾರ್ಜಿಂಗ್ ಸ್ಟೇಷನ್‌ಗಳಿಗೆ ₹3.73 ಕೋಟಿ ಒಳಗೊಂಡಂತೆ ಒಟ್ಟಾರೆ ಸುಮಾರು ₹18.68 ಕೋಟಿ ನೆರವನ್ನು ನೀಡಿತ್ತು. ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಬೇಕೋ, ಗುತ್ತಿಗೆ ಆಧಾರದಲ್ಲಿ ಪಡೆಯಬೇಕೋ ಎಂಬ ಕಗ್ಗಂಟಿನಲ್ಲೇ ಬಿಎಂಟಿಸಿ ಕಾಲ ತಳ್ಳಿತು.

ಕೇಂದ್ರ ಸರ್ಕಾರ ಎರಡನೇ ಹಂತದ ಫೇಮ್‌–2 ಯೋಜನೆ ಜಾರಿಗೊಳಿಸಲು ಮುಂದಾಯಿತು. ಆದರೆ, ಬಸ್‌ಗಳ ಖರೀದಿಗೆ ಬದಲು ಅವುಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿತು. ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಪಡೆದರೆ ಮಾತ್ರ ಸಬ್ಸಿಡಿ ನೀಡಲಾಗುವುದು ಎಂಬ ಮಾರ್ಗಸೂಚಿ ರೂಪಿಸಿತು. ಆದರೆ, ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವುದು ಬೇಡ, ಖರೀದಿ ಮಾಡಬೇಕು ಎಂದು ಈ ಹಿಂದಿನ ಸಾರಿಗೆ ಸಚಿವರು ಪಟ್ಟು ಹಿಡಿದಿದ್ದರಿಂದ ಯೋಜನೆ ಒಂದಷ್ಟು ಕಾಲ ನನೆಗುದಿಗೆ ಬಿದ್ದಿತ್ತು.

ಮುಂಗಡವಾಗಿ ಹಣ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ, ಬಡ್ಡಿ ಸಹಿತ ಹಣ ವಾಪಸ್ ನೀಡುವಂತೆ ತಾಕೀತು ಮಾಡಿತು. ಬಳಿಕ 300 ಬಸ್‌ಗಳನ್ನು ಗುತ್ತಿಗೆ ಆಧಾರರಲ್ಲಿ ಪಡೆದುಕೊಳ್ಳಲು ಕೆಎಸ್‌ಆರ್‌ಟಿಸಿ ಮೂಲಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಯಿತು. 2019ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಇದರ ನಡುವೆ ದುತ್ತೆಂದು ಎದುರಾದ ಕೋವಿಡ್ ಬಿಎಂಟಿಸಿಯ ಧೈರ್ಯ ಕುಂದುವಂತೆ ಮಾಡಿದೆ. ಮೊದಲೇ ಪ್ರಯಾಣಿಕರಿಲ್ಲದೆ ಬಸ್‌ಗಳು ಖಾಲಿ ಸಂಚರಿಸುತ್ತಿವೆ. ಕೋವಿಡ್‌ ಪೂರ್ವದಲ್ಲೂ ಇಪಿಕೆಎಂ (ಪ್ರತಿ ಕಿ.ಮೀ.ಗೆ ಬರುವ ಆದಾಯದ ಪ್ರಮಾಣ) ₹60 ಇದ್ದರೆ ಸಿಪಿಕೆಎಂ (ಪ್ರತಿ ಕಿ.ಮೀ.ಗೆ ತಗಲುವ ವೆಚ್ಚ) ₹84 ಇತ್ತು. ಈ ಅಂತರ ಈಗ ಇನ್ನಷ್ಟು ಹೆಚ್ಚಾಗಿದೆ.

ಎಲೆಕ್ಟ್ರಿಕ್ ಬಸ್‌ಗೆ ಫೇಮ್–2ರಲ್ಲಿ ಪ್ರತಿ ಕಿಲೋ ಮೀಟರ್‌ಗೆ ₹89 ದರ ನಿಗದಿ ಮಾಡಲಾಗಿದೆ. ದಿನಕ್ಕೆ ಕನಿಷ್ಠ 200 ಕಿಲೋ ಮೀಟರ್‌ನಷ್ಟು ಬಾಡಿಗೆ ಕೊಡಲೇಬೇಕು. ಅಂದರೆ ಒಂದು ದಿನಕ್ಕೆ ಪ್ರತಿ ಬಸ್‌ಗೆ ₹17,800 ಪಾವತಿಸಲೇಬೇಕು. ಅಷ್ಟು ಪ್ರಮಾಣದ ವರಮಾನ ಆ ಬಸ್‌ಗಳಿಂದ ಬರಲಿದೆಯೇ ಎಂಬ ಪ್ರಶ್ನೆಯೂ ಉದ್ಬವವಾಗಿದೆ. ನೌಕರರ ವೇತನ ಕೊಡಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಬಿಎಂಟಿಸಿ, ಈ ಕಷ್ಟದ ಸ್ಥಿತಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆಗೆ ಪಡೆದು ಏನು ಮಾಡುವುದು ಎಂಬ ಚಿಂತೆಯಲ್ಲಿದೆ.

ವಿಮಾನ ನಿಲ್ದಾಣಕ್ಕೆ ಈಗ ಸಂಚರಿಸುತ್ತಿರುವ ವೋಲ್ವೊ ಬಸ್‌ಗಳ ಬದಲಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವ ಉದ್ದೇಶವನ್ನು ಬಿಎಂಟಿಸಿ ಹೊಂದಿತ್ತು. ಆದರೆ, ಕೋವಿಡ್ ಕಾರಣದಿಂದ ಈ ಮಾರ್ಗದಲ್ಲೂ ಪ್ರಯಾಣಿಕರ ಕೊರತೆ ಇರುವ ಕಾರಣ ಸದ್ಯಕ್ಕೆ ಫೇಮ್–2 ಯೋಜನೆಯಡಿ ಬಸ್‌ಗಳನ್ನು ಗುತ್ತಿಗೆಗೆ ಪಡೆಯುವ ಬಗ್ಗೆಯೇ ಸಂಸ್ಥೆ ನಿರಾಸಕ್ತಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್‌ನಲ್ಲಿ ಬರಲಿವೆ ಮಿನಿ ಬಸ್

ಫೇಮ್ ಇಂಡಿಯಾ–2 ಯೋಜನೆಯಡಿ ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ವಿಳಂಬವಾಗುತ್ತಿರುವ ಬೆನ್ನಲ್ಲೇ, ಸ್ಮಾರ್ಟ್‌ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್‌ ಬಸ್‌ಗಳ ಕಾರ್ಯಚರಣೆ ಆಗಸ್ಟ್‌ನಿಂದ ಆರಂಭವಾಗುವ ನಿರೀಕ್ಷೆ ಇದೆ.

2020 ಫೆಬ್ರುವರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಅದರ ಪ್ರಕಾರ ಆರು ತಿಂಗಳಲ್ಲೇ ಬಸ್‌ಗಳು ರಸ್ತೆಗೆ ಇಳಿಯಬೇಕಿತ್ತು. ಕೋವಿಡ್ ಕಾರಣದಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿ 2021ರ ಫೆಬ್ರುವರಿಯಲ್ಲಿ ಎನ್‌ಟಿಪಿಸಿ–ಜೆಬಿಎಂ ಕಂಪನಿಗೆ ಕಾರ್ಯಾದೇಶ ನೀಡಲಾಗಿದೆ. ಗುತ್ತಿಗೆ ಆಧಾರದಲ್ಲಿ 12 ವರ್ಷಗಳ ಅವಧಿಗೆ ಬಸ್‌ಗಳನ್ನು ಪಡೆಯಲಾಗುತ್ತಿದೆ.

30ರಿಂದ 35 ಸೀಟುಗಳನ್ನು ಹೊಂದಿರುವ 9 ಮೀಟರ್ ಉದ್ದದ ಈ ಬಸ್‌ಗಳನ್ನು ಪ್ರತಿ ಕಿಲೋ ಮೀಟರ್‌ಗೆ ₹51 ದರದಲ್ಲಿ ಪಡೆಯಲಾಗುತ್ತಿದೆ. ಒಂದು ಬಾಗಿಲನ್ನು ಹೊಂದಿರುವ ಈ ಬಸ್‌ಗಳು ಎಲ್ಲಾ ಮೆಟ್ರೊ ನಿಲ್ದಾಣಗಳಿಂದ ಫೀಡರ್ ಸೇವೆಗಳಾಗಿ ಮಾತ್ರ ಸಂಚರಿಸಲಿವೆ.

‘ಮೊದಲ ಹಂತದಲ್ಲಿ ಆಗಸ್ಟ್‌ನಲ್ಲಿ ಕೆಲ ಬಸ್‌ಗಳು ರಸ್ತೆಗೆ ಇಳಿಯಲಿವೆ. ನಂತರ ಹಂತ–ಹಂತವಾಗಿ 90 ಬಸ್‌ಗಳು ಬಿಎಂಟಿಸಿ ಸೇರಿಕೊಳ್ಳಲಿವೆ’ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಿತ್ ಬಿ.ತೋರಗಲ್ ತಿಳಿಸಿದರು.

ವಾಯು ಮಾಲಿನ್ಯ ಕಡಿಮೆಯಾಗದು

ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವ ಒಂದೇ ಕಾರಣದಿಂದ ನಗರದಲ್ಲಿ ವಾಯು ಮಾಲಿನ್ಯ ಕಡಿಮೆ ಆಗುವುದು ಕಷ್ಟ ಎಂದು ಬಸ್ ಪ್ರಯಾಣಿಕರ ವೇದಿಕೆ ಸದಸ್ಯೆ ಶಾಹೀನ್ ಶಾಸಾ ಹೇಳಿದರು.

‘ನಗರದಲ್ಲಿ 85 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಬಿಎಂಟಿಸಿಯಲ್ಲಿ ಕೇವಲ 6 ಸಾವಿರ ಬಸ್‌ಗಳಿವೆ. ಅದರಲ್ಲಿ 300 ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುವುದರಿಂದ ನಗರದ ವಾಯು ಮಾಲಿನ್ಯ ನಿಯಂತ್ರಣ ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಆಟೋಮೊಬೈಲ್ ಉದ್ಯಮವನ್ನು ಉತ್ತೇಚಿಸಲು ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಪರಿಚಯಿಸುತ್ತಿರುವ ಕಾರಣ ನಿರ್ವಹಣೆಗೆ ಮುಂದಿನ ದಿನಗಳಲ್ಲಿ ತೊಂದರೆ ಆಗುವ ಸಾಧ್ಯತೆ ಇದೆ. ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಬಿಎಂಟಿಸಿ ಹೊರಟಿದೆ. ಒಮ್ಮೆ ಬಸ್‌ಗಳು ರಸ್ತೆಗಿಳಿದ ಬಳಿಕ ಸಾಧಕ–ಬಾಧಕ ತಿಳಿಯಲಿದೆ’ ಎಂದರು.

‘ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡುವತ್ತ ಬಿಎಂಟಿಸಿ ಮೊದಲು ಆದ್ಯತೆ ನೀಡಬೇಕು. ವೇಗ ಹೆಚ್ಚಿಸಲು ಬಸ್ ಆದ್ಯತಾ ಪಥಗಳನ್ನು ಎಲ್ಲೆಡೆ ಸಮರ್ಪಕವಾಗಿ ಜಾರಿಗೆ ತರಬೇಕು. ಬಸ್‌ನಲ್ಲಿ ದಟ್ಟಣೆ ಆಗದಂತೆ ನೋಡಿಕೊಳ್ಳಲು ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸಬೇಕು. ಕೊನೆಯ ತಾಣಕ್ಕೂ ಬಸ್ ಸಂಪರ್ಕ ಕಲ್ಪಿಸುವುದು ಮುಖ್ಯ’ ಎಂದು ಅವರು ವಿವರಿಸಿದರು.

ಬಿಎಂಟಿಸಿ ಖಾಸಗೀಕರಣದ ಹುನ್ನಾರ

‘ಖಾಸಗಿ ಕಂಪನಿಗಳಿಂದ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಪಡೆದು ಬಳಿಕ ಬಿಎಂಟಿಸಿ ಸಂಸ್ಥೆಯನ್ನೇ ಖಾಸಗೀಕರಣ ಮಾಡುವ ಉದ್ದೇಶದಿಂದ ಫೇಮ್ ಇಂಡಿಯಾ ಯೋಜನೆ ರೂಪಿಸಲಾಗಿದೆ’ ಎಂದು ಆರೋಪಿಸುತ್ತಾರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್(ಸಿಐಟಿಯು) ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್.

‘ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವ ಖಾಸಗಿ ಕಂಪನಿಗಳಿಗೆ ಹಣ ನೀಡಲು ಪ್ರಯಾಣಿಕರ ಮೇಲೆ ಬರೆ ಹಾಕುವ ಸಾಧ್ಯತೆ ಇದೆ. ಈಗಾಗಲೇ ಸಂಸ್ಥೆಯ ಆಸ್ತಿಗಳನ್ನು ಅಡಮಾನ ಇಡಲಾಗಿದೆ. ಸಂಸ್ಥೆಯನ್ನು ನಷ್ಟದ ಮೇಲೆ ನಷ್ಟಕ್ಕೆ ದೂಡಿ ಬಳಿಕ ಆಸ್ತಿಗಳನ್ನು ಮಾರಾಟ ಮಾಡುವ ಸಾಧ್ಯತೆಯೂ ಇದೆ’ ಎಂದರು.

‘ನಷ್ಟ ಸರಿದೂಗಿಸಿಕೊಳ್ಳಲು ಕ್ರಮೇಣ ಆ ಕಂಪನಿಗಳಿಗೆ ಕೆಲ ಮಾರ್ಗಗಳನ್ನು ಬಿಟ್ಟುಕೊಡುವುದು, ಡಿಪೊಗಳನ್ನು ಬಿಟ್ಟುಕೊಡುವುದು ಮುಂತಾದ ಕ್ರಮ ಅನುಸರಿಸಿ ಮಾಡಿ ಮುಂದೊಂದು ದಿನ ಸಂಸ್ಥೆಯನ್ನೇ ಬಿಟ್ಟುಕೊಡುವ ಉದ್ದೇಶ ಇದ್ದಂತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈ ಹುನ್ನಾರದ ವಿರುದ್ಧ ಜನರು ಹೋರಾಟ ನಡೆಸಬೇಕು. ಇಲ್ಲದಿದ್ದರೆ ಬಿಎಂಟಿಸಿ ಖಾಸಗಿ ಪಾಲಾಗಲಿದೆ’ ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು