ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು - ದಾರಿ ಹತ್ತಾರು | ‘ಸಿಲಿಕಾನ್‌ ಸಿಟಿ’ಗೆ ‘ಸೇಫ್‌ ಸಿಟಿ’ ಬಲ

ತಂತ್ರಜ್ಞಾನದ ಬಳಕೆ l ಅಪರಾಧಗಳ ಮೇಲೆ ನಿಗಾ l ಮಕ್ಕಳು, ಮಹಿಳೆಯರ ಸುರಕ್ಷತೆಗೆ ಆದ್ಯತೆ
Last Updated 13 ಮಾರ್ಚ್ 2023, 23:22 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಲಿಕಾನ್‌ ಸಿಟಿ’ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದಿರುವ ‘ಸೇಫ್‌ ಸಿಟಿ’ ಯೋಜನೆಯಿಂದ ಸುರಕ್ಷತೆ ಹಾಗೂ ಅಪರಾಧ ಪ್ರಕರಣಗಳ ಪತ್ತೆಗೆ ಹೆಚ್ಚಿನ ಬಲಬಂದಿದೆ.

ದೇಶದ 8 ಮಹಾನಗರಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗಿದ್ದು, ಬೆಂಗಳೂರಿನಲ್ಲಿ ಯೋಜನೆಯ ಅನುಷ್ಠಾನ ವೇಗ ಪಡೆದುಕೊಂಡಿದೆ.

ಕೇಂದ್ರದ ನಿರ್ಭಯಾ ನಿಧಿ ಅಡಿ ಜಾರಿಗೆ ತಂದಿರುವ ಯೋಜನೆಗೆ ಮಾರ್ಚ್‌ ಮೊದಲ ವಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚಾಲನೆ ನೀಡಿದ್ದರು. ಅಪರಾಧ ಪ್ರಕರಣಗಳ ತನಿಖೆಗೆ ವೇಗ, ಆರೋಪಿಗಳ ಪತ್ತೆಗೆ ಆಧುನಿಕ ತಂತ್ರಜ್ಞಾನದ ಬಳಕೆ, ಆಂತರಿಕ ಸುರಕ್ಷತೆ ಹಾಗೂ ಅಪರಾಧ ತಡೆಗೆ ಯೋಜನೆ ನೆರವು ದೊರೆಯಲಿದೆ.

ಯೋಜನೆಗೆ ಕೇಂದ್ರ ಶೇ 60 ಹಾಗೂ ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ಭರಿಸಲಿದೆ. ಇದಕ್ಕೆ 2019ರ ಸಚಿವ ಸಂಪುಟಸಭೆಯಲ್ಲಿ ಒಪ್ಪಿಗೆ ಸೂಚಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ ₹ 632 ಕೋಟಿ ವೆಚ್ಚ ಮಾಡಲಾಗುತ್ತಿದ್ದು ಪೊಲೀಸ್‌ ಇಲಾಖೆಗೆ ಆಧುನಿಕ ಪರಿಕರಗಳು ಬಂದು ಸೇರುತ್ತಿವೆ.

ಏನಿದು ಯೋಜನೆ?: ಬೆಂಗಳೂರು ಐಟಿ–ಬಿಟಿ ನಗರವೆಂದು ಪ್ರಸಿದ್ಧಿ ಪಡೆದಿದೆ. ಅಪರಾಧ ಪ್ರಕರಣಗಳೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. 2022ರಲ್ಲಿ 28,518 ಐಪಿಸಿ ಪ್ರಕರಣಗಳು, 153 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು.

ನಗರದಲ್ಲಿ ಮಹಿಳೆಯರು, ಯುವತಿಯರು, ಮಕ್ಕಳ ಸುರಕ್ಷತೆ ಹಾಗೂ ಸಂರಕ್ಷಣೆಗೆ ಈ ಯೋಜನೆ ಒತ್ತು ನೀಡಲಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆರೋಪಿಗಳ ಪತ್ತೆ, ಕಾನೂನು ನೆರವು, ವೈದ್ಯಕೀಯ ಸೇವೆ ಕಲ್ಪಿಸುವುದು ‘ಸೇಫ್‌ ಸಿಟಿ’ ಯೋಜನೆ ಪ್ರಮುಖ ಉದ್ದೇಶವಾಗಿದೆ. ತಂತ್ರಜ್ಞಾನದೊಂದಿಗೆ ತಜ್ಞರ ನೆರವೂ ಪಡೆಯಲಾಗುವುದು. ಕಳೆದ ವರ್ಷ 9,939 ಸೈಬರ್‌ ಪ್ರಕರಣಗಳು ದಾಖಲಾಗಿದ್ದವು. ಅಂತಹ ಪ್ರಕರಣಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಆರೋಪಿಗಳನ್ನು ಬಹುಬೇಗ ಪತ್ತೆ ಮಾಡಲು ಸಾಧ್ಯವಾಗಲಿದೆ. ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಕಡಿವಾಣ, ಗಲಭೆ ನಿಯಂತ್ರಣಕ್ಕೂ ಈ ಯೋಜನೆ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕಮಾಂಡೊ ಕೇಂದ್ರ: ನಗರ ಪೊಲೀಸ್‌ ಆಯುಕ್ತರ ಕಚೇರಿಯ 3ನೇ ಮಹಡಿಯಲ್ಲಿ ಕಮಾಂಡೊ ಕೇಂದ್ರ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 1,640 ಸ್ಥಳಗಳಲ್ಲಿ 4,100 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಕಮಾಂಡೊ ಕೇಂದ್ರದಲ್ಲಿ ನೇರ ಪ್ರಸಾರವಾಗುತ್ತಿದೆ. ಅಲ್ಲದೇ ಕಾನೂನು ಸುವ್ಯವಸ್ಥೆಯ ಡಿಸಿಪಿ ಕಚೇರಿಗಳಲ್ಲೂ 24x7 ನೇರ ಪ್ರಸಾರವಾಗುತ್ತಿದೆ.

ಸುಮಾರು 30 ದಿನಗಳು ಎಚ್‌.ಡಿ ಗುಣಮಟ್ಟದ ವಿಡಿಯೊಗಳು ದಾಖಲಾಗಿರುತ್ತದೆ. ಅಪರಾಧಗಳು ನಡೆದರೆ ವಿಡಿಯೊ ಆಧರಿಸಿ, ಆರೋಪಿಗಳ ಪತ್ತೆ ಕಾರ್ಯ ನಡೆಯಲಿದೆ. ಬಾಕಿಯಿರುವ 2,200 ಸಿಸಿಟಿವಿ ಕ್ಯಾಮೆರಾಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ.

ನಗರವು ವಿಸ್ತಾರವಾಗಿ ಬೆಳೆಯುತ್ತಿದೆ. ಮಹಿಳೆಯರು ಹಾಗೂ ಯುವತಿಯರ ರಕ್ಷಣೆಗೆ 50 ಸುರಕ್ಷಾ ದ್ವೀಪ (ಐ–ಲ್ಯಾಂಡ್‌) ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಸಂಚಾರಿ ವಿಧಿ ವಿಜ್ಞಾನ ಪ್ರಯೋಗಾಲಯದ ವಾಹನ ಖರೀದಿಸಲಾಗಿದೆ. ಕೃತ್ಯ ನಡೆದ ಸ್ಥಳಕ್ಕೆ ವೇಗವಾಗಿ ತೆರಳಿ ಸಾಕ್ಷ್ಯಾಧಾರ ಸಂಗ್ರಹಿಸಲು ಸಾಧ್ಯವಾಗಲಿದೆ. 112 ಹೊಯ್ಸಳ ವಾಹನ, 112 ಪೊಲೀಸ್‌ ಜೀಪುಗಳು, 200 ಬೈಕ್‌ಗಳು ಇಲಾಖೆ ಸೇರಿವೆ.

8 ಕಡೆ ‘ಸಲಹಾ ಕೇಂದ್ರ’ ಸ್ಥಾಪನೆ
ದೌರ್ಜನ್ಯಕ್ಕೆ ಒಳಗಾದವರಿಗೆ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆಗೆಂದು ಈ ಯೋಜನೆ ಅಡಿ ನಗರದ ಎಂಟು ಆಸ್ಪತ್ರೆಗಳಲ್ಲಿ ಸಲಹಾ ಕೇಂದ್ರ ಸ್ಥಾಪಿಸಲಾಗಿದೆ.

ವಿಕ್ಟೋರಿಯ, ಬೌರಿಂಗ್‌, ಕೆ.ಸಿ.ಜನರಲ್‌, ವಾಣಿ ವಿಲಾಸ ಆಸ್ಪತ್ರೆ, ರಾಜಾಜಿನಗರದ ಇಎಸ್‌ಐ ಹಾಗೂ ಯಲಹಂಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಘಟಕಗಳನ್ನು ತೆರೆಯಲಾಗಿದೆ. ಇಲ್ಲಿ ಸಂತ್ರಸ್ತರಿಗೆ ಸಲಹೆ, ಮಾರ್ಗದರ್ಶನ ಹಾಗೂ ಧೈರ್ಯ ತುಂಬುವ ಕೆಲಸ ನಡೆಯಲಿದೆ.

**

ಮಕ್ಕಳು ಹಾಗೂ ಮಹಿಳೆಯರ ಸುರಕ್ಷತೆಗಾಗಿ ಸೇಫ್‌ ಸಿಟಿ ಯೋಜನೆಯಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಂದು ಪ್ರದೇಶದ ಮೇಲೆ ನೇತ್ರಾ ಕ್ಯಾಮೆರಾ ಕಣ್ಣಿಡಲಿದ್ದು, ಇದರ ನಿರ್ವಹಣೆಗೆ ಕಮಾಂಡೊ ಸೆಂಟರ್‌ ಕೆಲಸ ಮಾಡುತ್ತಿದೆ.
–ಪ್ರತಾಪ್‌ ರೆಡ್ಡಿ, ನಗರ ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT