ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು | ಹೊರ ವರ್ತುಲ ರಸ್ತೆಯಲ್ಲಿ ಇದ್ದ ಆದ್ಯತಾ ಪಥ ಮಾಯ

ಪ್ರಸ್ತಾವದಲ್ಲೇ ಉಳಿದ ಬಸ್‌ ಪಥ
Last Updated 9 ಆಗಸ್ಟ್ 2022, 5:47 IST
ಅಕ್ಷರ ಗಾತ್ರ

ಬೆಂಗಳೂರು:‌ ಅತಿ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಬಸ್ ಆದ್ಯತಾ ಪಥ ಅಭಿವೃದ್ಧಿಪಡಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರಾಯೋಗಿಕವಾಗಿ ಹೊರ ವರ್ತುಲ ರಸ್ತೆಯಲ್ಲಿ ಅನುಷ್ಠಾನಕ್ಕೆ ತಂದಿದ್ದ ಬಸ್ ಪಥವೂ ಈಗ ಮಾಯವಾಗಿದೆ.

ನಗರದಲ್ಲಿ ತ್ವರಿತ ಬಸ್‌ ಸಾರಿಗೆ ಸೇವೆ ಒದಗಿಸಲು ಬಿಬಿಎಂಪಿ, ಬಿಎಂಟಿಸಿ, ಭೂಸಾರಿಗೆ ನಿರ್ದೇಶನಾಲಯ(ಡಲ್ಟ್‌) ಹಾಗೂ ಸಂಚಾರ ಪೊಲೀಸ್‌ ಅಧಿಕಾರಿಗಳು ಜಂಟಿಯಾಗಿ ಬಸ್ ಆದ್ಯತಾ ಪಥಗಳನ್ನು ನಿರ್ಮಿಸಲು 2019ರಲ್ಲಿ ಯೋಜನೆ ರೂಪಿಸಿದ್ದರು. ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್.ಪುರದ ತನಕ 17 ಕಿಲೋ ಮೀಟರ್‌ನಲ್ಲಿ ಪ್ರಾಯೋಗಿಕವಾಗಿ ಬಸ್ ಪಥ ನಿರ್ಮಾಣವೂ ಆಗಿತ್ತು.

ಆರು ಪಥದ ರಸ್ತೆಯಲ್ಲಿ ಎರಡು ಪಥಗಳನ್ನು ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಕಾಯ್ದಿರಿಸಲಾಗಿತ್ತು. ಹಲವು ತೊಡಕು, ಗೊಂದಲಗಳ ನಡುವೆ ಬಸ್ ಪಥ ನಿರ್ಮಾಣವಾಗಿತ್ತು. ಯೋಜನೆ ಆರಂಭಿಸಿದಾಗ ಆದ್ಯತೆ ಪಥದೊಳಗೆ ಬೇರೆ ವಾಹನಗಳು ನುಸುಳುವುದನ್ನು ತಡೆಯಲು ಕಬ್ಬಿಣದ ಬೊಲಾರ್ಡ್‌ಗಳನ್ನು ಬಿಬಿಎಂಪಿಯಿಂದ ಅಳವಡಿಸಲಾಗಿತ್ತು. ಖಾಸಗಿ ವಾಹನಗಳು ಬೊಲಾರ್ಡ್‌ಗಳಿಗೇ ಡಿಕ್ಕಿ ಹೊಡೆದು ಸರಣಿ ಅಪಘಾತಗಳಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಬಳಿಕ ಕಬ್ಬಿಣದ ಬೊಲಾರ್ಡ್ ತೆಗೆದು, ಎಫ್‌ಆರ್‌ಪಿ (ಫೈಬರ್ ರಿಇನ್‌ಫೋರ್ಸ್ಡ್‌ ಪ್ಲಾಸ್ಟಿಕ್) ಬೊಲಾರ್ಡ್‌ಗಳನ್ನು ಅಳವಡಿಸಲಾಯಿತು.

ಬಸ್ ಪಥದ ಬಗ್ಗೆ ಬಿಎಂಟಿಸಿ ಹೆಚ್ಚಿನ ಪ್ರಚಾರವನ್ನೂ ಮಾಡಿತ್ತು. ಗೀತೆಯೊಂದನ್ನು ರಚಿಸಿ ಯೂಟ್ಯೂಬ್‌ ನಲ್ಲಿ ಹಂಚಿಕೆ ಮಾಡಿತ್ತು. ಬಸ್‌ನಲ್ಲಿ ಪ್ರಯಾಣ ಮಾಡಿದರೆ ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಸಾಧ್ಯ ಎಂಬ ಸಂದೇಶವನ್ನು ಗೀತೆಯಲ್ಲಿ ಚಿತ್ರಿಸಲಾಗಿತ್ತು. ಆದರೆ, ಈಗ ಆ ಬಸ್‌ ಆದ್ಯತಾ ಪಥವೇ ಇಲ್ಲವಾಗಿದ್ದು, ಎಲ್ಲಾ ಬೊಲಾರ್ಡ್‌ಗಳನ್ನು ತೆರವುಗೊಳಿಸಲಾಗಿದೆ.

ಮೆಟ್ರೊ ರೈಲು ಮಾರ್ಗದ ಕಾಮಗಾರಿ ಆರಂಭವಾದ ಬಳಿಕ ಈ ಆದ್ಯತಾ ಪಥವೂ ಕಣ್ಮರೆ ಯಾಗಿದೆ. ಆರು ಪಥಗಳಲ್ಲಿ ಎರಡು ಪಥಗಳನ್ನು ಕಾಮಗಾರಿಗೆ ಬಳಕೆ ಮಾಡಿಕೊಳ್ಳಲಾಗಿದ್ದು, ಬ್ಯಾರಿಕೇಡ್‌ ಗಳನ್ನು ಅಳವಡಿಸಿಕೊಳ್ಳಲಾಗಿದೆ. ಉಳಿದ ನಾಲ್ಕು ಪಥದಲ್ಲಿ ಬಸ್ ಆದ್ಯತಾ ಪಥಕ್ಕೆ ಬಳಸಿಕೊಂಡರೆ, ಬೇರೆ ವಾಹನ ಗಳ ಸಂಚಾರಕ್ಕೆ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ತೆರವುಗೊಳಿಸಲಾಗಿದೆ.

‘ಬಸ್‌ ಆದ್ಯತಾ ಪಥ ಉಳಿಸಿಕೊಂಡು, ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ್ದರೆ ಬಸ್‌ನಲ್ಲಿ ಪ್ರಯಾಣಿಸಲು ಜನ ಆಸಕ್ತಿ ವಹಿಸುತ್ತಿದ್ದರು. ಆಗ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಈಗ ಬಸ್ ಪಥ ಇಲ್ಲದಿರುವುದರಿಂದ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ’ ಎಂಬುದು ನಾಗರಿಕ ಸಂಘಟನೆಗಳ ಅಭಿಪ್ರಾಯ.

ಸಂಚಾರ ದಟ್ಟಣೆಗೆ ಆದ್ಯತಾ ಪಥವೇ ಪರಿಹಾರ
‘ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಸ್ ಆದ್ಯತಾ ಪಥವೊಂದೇ ಪರಿಹಾರ’ ಎಂದು ಜನಾಗ್ರಹ ಸಂಘಟನೆಯ ಶ್ರೀನಿವಾಸ್ ಅಲವಿಲ್ಲಿ ಹೇಳಿದರು.

‘ಬಸ್‌ನಲ್ಲಿ ಪ್ರಯಾಣ ಮಾಡಿದರೆ ಸಮಯಕ್ಕೆ ಸರಿಯಾಗಿ ಗುರಿ ತಲುಪುವ ವಿಶ್ವಾಸ ಬಂದರೆ ಖಾಸಗಿ ವಾಹನಗಳ ಬದಲು ಬಸ್‌ನಲ್ಲೇ ಜನ ಪ್ರಯಾಣ ಮಾಡುತ್ತಾರೆ. ಈ ರೀತಿಯ ವಿಶ್ವಾಸ ಮೂಡಿಸುವ ಕೆಲಸ ಆಗಬೇಕಿದೆ’ ಎಂದರು.

‘ಬಸ್ ಪಥದಲ್ಲಿ ಹೆಚ್ಚಿನ ಬಸ್‌ಗಳು ಕಾರ್ಯಾಚರಣೆ ಮಾಡಬೇಕು. 12 ರಸ್ತೆಗಳು ಮಾತ್ರವಲ್ಲ ಅಗತ್ಯ ಇರುವ ಎಲ್ಲಾ ಕಡೆಯೂ ಆದ್ಯತಾ ಪಥ ಇರುವುದು ಒಳ್ಳೆಯದು. ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೊ ರೈಲು ಕಾಮಗಾರಿಗಾಗಿ ಬಸ್‌ ಪಥವನ್ನು ತೆರವುಗೊಳಿಸಲಾಗಿದೆ. ಉಳಿಸಿಕೊಂಡಿದ್ದರೆ ಸಂಚಾರ ದಟ್ಟಣೆ ಕಡಿಮೆ ಮಾಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

‘ಹಣ ಉಳಿತಾಯದ ಬಗ್ಗೆ ಜನ ಹೆಚ್ಚು ಯೋಚಿಸುತ್ತಾರೆ. ದ್ವಿಚಕ್ರ ವಾಹನಕ್ಕಿಂತ ಕಡಿಮೆ ಖರ್ಚಿನಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡಬಹುದು ಎಂಬುದನ್ನೂ ಅರ್ಥ ಮಾಡಿಸಬೇಕಿದೆ. ಪ್ರಯಾಣ ದರ ಹೊರೆ ಎನಿಸದಂತೆ ನೋಡಿಕೊಳ್ಳಬೇಕು’ ಎಂದರು.

‘ಒಂದು ವಾರ ಪ್ರಯೋಗ ಮಾಡಲಿ’
‘ಸಂಚಾರ ದಟ್ಟಣೆ ಕಡಿಮೆ ಮಾಡಲು ಬಸ್ ಆದ್ಯತಾ ಪಥ ಉಪಯೋಗ ಆಗುವುದರಲ್ಲಿ ಅನುಮಾನ ಇಲ್ಲ. ಸರ್ಕಾರ ಪ್ರಾಯೋಗಿಕವಾಗಿ ಒಂದು ವಾರ ಅನುಷ್ಠಾನಕ್ಕೆ ತಂದು ಪರಿಶೀಲಿಸಲಿ’ ಎಂದು ಐಐಎಸ್‌ಸಿ ಪ್ರೊಫೆಸರ್ ಆಶಿಶ್ ವರ್ಮಾ ಸಲಹೆ ನೀಡಿದರು.

‘ಸರ್ಕಾರಕ್ಕೆ ಹಲವು ಬಾರಿ ಈ ವಿಷಯ ಮನವರಿಕೆ ಮಾಡಿಸಿದ್ದೇವೆ. ಸಂಬಂಧಪಟ್ಟವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT