ಶನಿವಾರ, ಮೇ 21, 2022
25 °C
ಕೋವಿಡ್ ಕಷ್ಟ ಜೀರ್ಣಿಸಿಕೊಂಡು ಪುಟಿದೇಳುತ್ತಿರುವ ವಾಣಿಜ್ಯ ನಗರಿ

ಬೆಂಗಳೂರು ನೈಟ್‌ ಲೈಫ್‌ಗೆ ಮತ್ತೆ ರಂಗು

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡು ವರ್ಷ ಕಾಡಿದ ಕೋವಿಡ್‌ ಭಯದಿಂದ ಜನರು ನಿಧಾನವಾಗಿ ಹೊರ ಬರುತ್ತಿದ್ದಾರೆ. ಕೋವಿಡ್ ಕಾಲದ ಕಷ್ಟದ ದಿನಗಳನ್ನು ಜೀರ್ಣಿಸಿಕೊಂಡು ಮೆಲ್ಲಗೆ ಮಾಸ್ಕ್‌ಗಳನ್ನು ಕೆಳಗಿಳಿಸಿ ಸಹಜ ಜೀವನಕ್ಕೆ ಹೊರಳುತ್ತಿದ್ದಾರೆ. ಎರಡು ವರ್ಷಗಳಿಂದ ಕಳೆಗುಂದಿದ್ದ ಬೆಂಗಳೂರಿನ ವಾಣಿಜ್ಯ ವಹಿವಾಟು ಈಗ ಮತ್ತೆ ಚೇತರಿಕೆ ಹಾದಿಯಲ್ಲಿದೆ.

ಕೋವಿಡ್ ಪೂರ್ವದಲ್ಲಿ ಜಗತ್ತಿನ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬೆಂಗಳೂರು ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಹಿವಾಟು ಹೆಚ್ಚಾಗುತ್ತಲೇ ಇತ್ತು. 2020ರ ಮಾರ್ಚ್‌ ತಿಂಗಳಲ್ಲಿ ಮೊದಲ ಕೋವಿಡ್ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿತ್ತು. 2020ರ ಮಾರ್ಚ್‌ 20ರಂದು ದೇಶದಾದ್ಯಂತ ಲಾಕ್‌ಡೌನ್ ಆರಂಭವಾಯಿತು. ಕೋವಿಡ್ ಮೂರು ಅಲೆಗಳ ನಡುವೆ ಸಿಲುಕಿ ಜನ ರೋಸಿ ಹೋಗಿದ್ದರು. ಲಾಕ್‌ಡೌನ್ ತೆರವಾದರೂ ಜನಸಂಚಾರವೇ ಇಲ್ಲದೆ ವಹಿವಾಟು ಸಂಪೂರ್ಣ ನೆಲ ಕಚ್ಚಿತ್ತು.

ಮೂರನೇ ಅಲೆ ಅಷ್ಟೇನೂ ಅಬ್ಬರಿಸದೆ ಮಾಯವಾಗಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಮೂರನೇ ಅಲೆ ದಾಟಿದ ನಂತರ ದಿನದಿಂದ ದಿನಕ್ಕೆ ವಹಿವಾಟು ಹೆಚ್ಚಾಗತೊಡಗಿದೆ. ಸಭೆ–ಸಮಾರಂಭಗಳು ನಡೆಯುತ್ತಿರುವುದರಿಂದ ಹೋಟೆಲ್‌ಗಳು, ಮಾರುಕಟ್ಟೆಗಳು, ಬಟ್ಟೆ ಅಂಗಡಿಗಳು, ಆಭರಣ ಅಂಗಡಿಗಳು ಮತ್ತೆ ಗಿಜಿಗುಡಲಾರಾಂಭಿಸಿವೆ.

ಚಿಕ್ಕಪೇಟೆಯಲ್ಲಿ ಬಟ್ಟೆ ವಹಿವಾಟು ಹಿಂದಿನಂತೆ ತನ್ನ ವೈಭವದ ಸ್ಥಿತಿಗೆ ಮರಳುವ ತವಕದಲ್ಲಿದೆ. ಕೋವಿಡ್‌ ಪೂರ್ವದಲ್ಲಿ ಇದ್ದ ಹೋಟೆಲ್‌ಗಳ ವಹಿವಾಟಿಗೆ ಹೋಲಿಸಿದರೆ ಶೇ 90ರಷ್ಟು ಚೇತರಿಕೆಯಾಗಿದೆ. ಖಾಲಿ ಹೊಡೆಯುತ್ತಿದ್ದ ಕಲ್ಯಾಣ ಮಂಟಪಗಳು, ಹೋಟೆಲ್ ಸಭಾಂಗಣಗಳನ್ನು ತಿಂಗಳು ಮೊದಲೇ ಕಾಯ್ದಿರಿಸಬೇಕಾಗಿದ್ದು, ಬಹುತೇಕ ಕೋವಿಡ್‌ ಪೂರ್ವದ ಸ್ಥಿತಿಗೆ ಮರಳುತ್ತಿದೆ.

ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್‌ಗಳು, ಡ್ಯಾನ್ಸ್‌ ಬಾರ್‌ಗಳಲ್ಲಿ ವಹಿವಾಟು ಚುರುಕು ಪಡೆದಿದೆ. ರಿಯಲ್ ಎಸ್ಟೇಟ್‌ ಉದ್ಯಮದ ವಹಿವಾಟು ಕೂಡ ಶೇ 25ರಷ್ಟು ಚೇತರಿಕೆ ಕಂಡಿದೆ. ಬಿಎಂಟಿಸಿ ಬಸ್ ಮತ್ತು ಮೆಟ್ರೊ ರೈಲಿನಲ್ಲಿ ಪ್ರಯಾಣಿಕರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳು–ಹಿರಿಯರೊಂದಿಗೆ ಜನರು ಮನೆಬಿಟ್ಟು ಹೊರಗೆ ಬರುತ್ತಿದ್ದಾರೆ. ‌

ಇದೆಲ್ಲದರ ಪರಿಣಾಮವಾಗಿ ವಹಿವಾಟು ಮೆಲ್ಲಗೆ ಸುಧಾರಣೆಯಾಗುತ್ತಿದೆ. ಕೋವಿಡ್‌ ನಾಲ್ಕನೇ ಅಲೆ ಬಾರದಿದ್ದರೆ ಒಂದೆರಡು ತಿಂಗಳಲ್ಲಿ ಕೋವಿಡ್‌ ಪೂರ್ವ ಸ್ಥಿತಿಗೆ ಬೆಂಗಳೂರಿನ ವಹಿವಾಟು ಬರಲಿದೆ ಎಂಬುದು ತಜ್ಞರ ಲೆಕ್ಕಾಚಾರ.

ಉಸಿರಾಡುತ್ತಿರುವ ಕೈಗಾರಿಕೆಗಳು:

ಕೋವಿಡ್‌ ಸಂದರ್ಭದಲ್ಲಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಕೈಗಾರಿಕೆಗಳು ಈಗ ನಿರಾಳವಾಗಿ ಉಸಿರಾಡುವಂತಾಗಿದೆ.

ಕೈಗಾರಿಕೆ ವಲಯಗಳಲ್ಲಿ ಕಾರ್ಖಾನೆಗಳ ಸದ್ದು ಮತ್ತೆ ಜೋರಾಗಿದೆ. ವಹಿವಾಟು ಚುರುಕು ಪಡೆದಿರುವುದರಿಂದ ಕೈಗಾರಿಕೆಗಳಲ್ಲಿ ಉದ್ಯೋಗಿಗಳಿಗೆ ಕೈತುಂಬ ಕೆಲಸ ನೀಡಲಾಗುತ್ತಿದೆ.

‘ಕೈಗಾರಿಕೆಗಳು ಮತ್ತೆ ಸಹಜ ಸ್ಥಿತಿಗೆ ಬಂದಿವೆ. ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಮುಂದಾಗಿದ್ದು, ಆದ್ದರಿಂದ ಉದ್ಯೋಗ ಕೂಡ ಸೃಷ್ಟಿಯಾಗುತ್ತಿದೆ. ಕೋವಿಡ್‌ ಸಂದರ್ಭದ ಕಷ್ಟದ ದಿನಗಳನ್ನು ಜೀರ್ಣಿಸಿಕೊಂಡು ಕೈಗಾರಿಕೆಗಳು ಸುಧಾರಿಸಿಕೊಳ್ಳುತ್ತಿವೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಐ.ಎಸ್.ಪ್ರಸಾದ್ ಹೇಳಿದರು.

ಈ ನಡುವೆ, ಕಬ್ಬಿಣದ ದರ ಹೆಚ್ಚಾಗಿರುವುದು ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳು ತೊಂದರೆ ಎದುರಿಸುತ್ತಿವೆ ಎಂದೂ ಅವರು ತಿಳಿಸಿದರು.

ಎಂ.ಜಿ.ರಸ್ತೆಯಲ್ಲಿ ಮತ್ತೆ ಕಳೆ:

ಬೆಂಗಳೂರಿನ ನೈಟ್‌ಲೈಫ್‌ನ ಕೇಂದ್ರ ಸ್ಥಾನ ಎಂದು ಕರೆಸಿಕೊಳ್ಳುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌ಗಳು ತನ್ನ ಗತಕಾಲದ ವೈಭವಕ್ಕೆ ಮತ್ತೆ ನಿಧಾನವಾಗಿ ಹೊರಳುತ್ತಿವೆ.

ಜನರ ಓಡಾಟ ಮತ್ತೆ ಹೆಚ್ಚಾಗುತ್ತಿದೆ. ವಾರಾಂತ್ಯ ಮತ್ತು ಸಾಲ–ಸಾಲು ರಜೆಗಳಿದ್ದ ದಿನಗಳಲ್ಲಿ ಯುವಕ–ಯುವತಿಯರ ದಂಡು ನೆರೆಯುತ್ತಿದೆ. ಇಲ್ಲಿನ ಹೋಟೆಲ್‌ಗಳು, ಪಬ್‌ಗಳು ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ವಹಿವಾಟ ಹೆಚ್ಚಾಗುತ್ತಿದೆ. ಕೋವಿಡ್‌ ಮೊದಲ ಅಲೆ ವೇಳೆ ಮುಚ್ಚಿದ್ದ ಅಂಗಡಿಗಳಲ್ಲಿ 35ಕ್ಕೂ ಹೆಚ್ಚು ವರ್ತಕರು ಮತ್ತೆ ತೆರೆಯುವ ಗೋಜಿಗೆ ಹೋಗಿರಲಿಲ್ಲ.

‘ಈಗ ನಿಧಾನವಾಗಿ ಒಂದೊಂದೇ ಅಂಗಡಿಗಳು ತೆರೆಯುತ್ತಿವೆ. ವಹಿವಾಟು ಸಹಜ ಸ್ಥಿತಿಯತ್ತ ಮರಳುತ್ತಿದೆ’ ಎಂದು ಬ್ರಿಗೇಡ್‌ ರಸ್ತೆ ಮಳಿಗೆಗಳ ಮಾಲೀಕರ ಸಂಘದ ಕಾರ್ಯದರ್ಶಿ ಸುಹೈಲ್‌ ಯೂಸುಫ್ ಹೇಳಿದರು.

ಎಂಆರ್‌ಪಿ ಮದ್ಯದ ಅಂಗಡಿ ವಹಿವಾಟು ಜಾಸ್ತಿ:

ಮದ್ಯದ ವಹಿವಾಟ ಎಂಆರ್‌ಪಿ ಶಾಪ್‌ಗಳಲ್ಲಿ ಹೆಚ್ಚಾಗಿದ್ದರೆ, ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಕುಳಿತು ಮದ್ಯ ಸೇವಿಸುವರ ಸಂಖ್ಯೆ ಅಷ್ಟೇನೂ ಹೆಚ್ಚಾಗಿಲ್ಲ.

‘ಮದ್ಯದ ವಹಿವಾಟಿನಲ್ಲಿ ಶೇ 65ರಷ್ಟು ಪಾರ್ಸೆಲ್‌ ವಹಿವಾಟಿನಲ್ಲೇ ನಡೆಯುತ್ತಿದ್ದು, ಕುಳಿತು ಮದ್ಯ ಸೇವನೆ ಮಾಡುವ ವಹಿವಾಟು ಶೇ 35ರಷ್ಟು ಮಾತ್ರ ಇದೆ’ ಎಂದು ಬೆಂಗಳೂರು ನಗರ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಹೇಳಿದರು.

‘ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ನಿರ್ವಹಣೆಗೆ ಹೆಚ್ಚು ವೆಚ್ಚವಾಗುತ್ತದೆ. ಅದನ್ನು ಸರಿದೂಗಿಸಲು ಕಷ್ಟವಾಗುತ್ತಿದೆ. ಈ ನಡುವೆ, ವೆಬ್‌ ಇಂಡೆಂಟ್‌ ಪದ್ಧತಿ ಕೂಡ ನಮ್ಮಲ್ಲಿ ಗೊಂದಲ ಸೃಷ್ಟಿಸಿದೆ’ ಎಂದು ಅವರು ಅಳಲು ತೋಡಿಕೊಂಡರು.

ಐ.ಟಿ ಕಂಪನಿಗಳಲ್ಲಿ ಜೂನ್‌ನಿಂದ ಕಚೇರಿ ಕೆಲಸ:

ಕೋವಿಡ್‌ ನಾಲ್ಕನೇ ಅಲೆ ಬಾರದಿದ್ದರೆ ಐ.ಟಿ ಕಂಪನಿಗಳಲ್ಲೂ ಮನೆಯಿಂದ ಕೆಲಸ ಮಾಡುವ ಪದ್ಧತಿ ಜೂನ್‌ನಿಂದ ಅಂತ್ಯವಾಗುವ ಸಾಧ್ಯತೆ ಇದೆ.

‘ಸದ್ಯಕ್ಕೆ ವಾರದಲ್ಲಿ ಎರಡು ದಿನ ಕಚೇರಿಗೆ ಬಂದು ಕೆಲಸ ಮಾಡಲು ಐ.ಟಿ ಕಂಪನಿಗಳು ಉದ್ಯೋಗಿಗಳಿಗೆ ತಿಳಿಸುತ್ತಿವೆ. ಆದರೆ, ಕಡ್ಡಾಯ ಮಾಡಿಲ್ಲ’ ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದ(ಒಆರ್‌ಆರ್‌ಸಿಎ) ನವೀನ್‌ಕುಮಾರ್ ತಿಳಿಸಿದರು.

‘ಕೋವಿಡ್ ನಾಲ್ಕನೇ ಅಲೆ ಬರುವ ಮುನ್ಸೂಚನೆ ಇರುವುದರಿಂದ ಕಚೇರಿಗೆ ಬರುವುದು ಕಡ್ಡಾಯ ಮಾಡಿಲ್ಲ. ಒಂದು ವೇಳೆ ಕೋವಿಡ್ ಬಂದರೆ ಜೂನ್‌ನಲ್ಲೂ ಐ.ಟಿ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲಿದ್ದಾರೆ’

ಹೋಟೆಲ್ ಉದ್ಯಮ ಚೇತರಿಕೆ:

‘ನಗರದ ಹೋಟೆಲ್ ಉದ್ಯಮವೂ ಬಹುತೇಕ ಚೇತರಿಕೆ ಕಂಡಿದೆ. ಕೋವಿಡ್‌ ಪೂರ್ವದಲ್ಲಿ ಇದ್ದ ಸ್ಥಿತಿಗೆ ಇನ್ನೂ ಮರಳಿಲ್ಲ. ಅದರೆ, ಶೇ 90ರಷ್ಟು ಚೇತರಿಕೆ ಕಂಡಿದೆ’ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.

ಹೋಟೆಲ್‌ಗಳ ಸಭಾಂಗಣಗಳಲ್ಲೂ ಪ್ರತಿನಿತ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಹೋಟೆಲ್‌ಗಳಿಗೆ ಬಂದು ಆಹಾರ ಸೇವಿಸಲು ಈಗ ಜನ ಭಯಪಡುತ್ತಿಲ್ಲ ಎಂದರು.

‘ಐ.ಟಿ ಕಂಪನಿಗಳಲ್ಲಿ ಮನೆಯಿಂದಲೇ ಕೆಲಸ ಮುಂದುವರಿದಿದೆ. ಆ ಉದ್ಯಮ ಅವಲಂಬಿಸಿ ನಡೆಯುತ್ತಿರುವ ಶೇ 10ರಷ್ಟು ಹೋಟೆಲ್‌ಗಳು ಇನ್ನೂ ಸುಧಾರಿಸಿಕೊಳ್ಳಲು ಆಗಿಲ್ಲ’ ಎಂದು ಹೇಳಿದರು.

ಟ್ಯಾಕ್ಸಿ ಬಳಕೆಯೂ ಹೆಚ್ಚಳ:

‘ಟ್ಯಾಕ್ಸಿಗಳನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಪ್ರವಾಸಿ ವಾಹನಗಳ ಉದ್ಯಮವೂ ಸುಧಾರಣೆಯಾಗಿದೆ’ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ತಿಳಿಸಿದರು.

ವಾಹನಗಳನ್ನು ದಿನದ ಬಾಡಿಗೆಗೆ ಪಡೆಯುವವರ ಸಂಖ್ಯೆ ಏರಿಕೆಯಾಗಿದೆ. ವಿಮಾನದಲ್ಲಿ ಬರುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಬೇಸಿಗೆ ರಜೆ ಇರುವುದರಿಂದ ಕುಟುಂಬ ಸಮೇತ ಪ್ರವಾಸ ಹೋಗಲು ವಾಹನಗಳನ್ನು ಬಳಸುತ್ತಿದ್ದಾರೆ. ಇರುವ ಎಲ್ಲಾ ವಾಹನಗಳಿಗೆ ಬೇಡಿಕೆ ಜಾಸ್ತಿಯಾಗಿದ್ದು, ವಹಿವಾಟು ಚುರುಕುಗೊಂಡಿದೆ ಎಂದರು.

‘ಎರಡು ವರ್ಷ ಕೋವಿಡ್‌ನಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಟ್ಯಾಕ್ಸಿ ಮಾಲೀಕರು ವಾಹನಗಳನ್ನು ಮಾರಾಟ ಮಾಡಿದರು. ಹಳದಿ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೊಸ ವಾಹನಗಳನ್ನು ಖರೀದಿಸುವ ಶಕ್ತಿ ಈಗ ಇಲ್ಲ. ಆದರೆ, ಇರುವ ವಾಹನಗಳಿಗೆ ಬಾಡಿಗೆ ದೊರೆಯುತ್ತಿದೆ’ ಎಂದು ವಿವರಿಸಿದರು.

‘ಐ.ಟಿ, ಬಿ.ಟಿ ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿದರೆ ಎಲ್ಲಾ ಗುಣಮಟ್ಟದ ವಾಹನಗಳಿಗೆ ಬೇಡಿಕೆ ಬರಲಿದೆ. ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದರಿಂದ ಐಷಾರಾಮಿ ವಾಹನಗಳಿಗೆ ಬೇಡಿಕೆ ಇಲ್ಲವಾಗಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು