ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ: ಕೋವಿಡ್‌ ಬಳಿಕ ಕುದುರಿದ ಬೇಡಿಕೆ

‘ವರ್ಕ್‌ ಫ್ರಮ್‌ ಹೋಂ’ ನಂತರ ಮನೆಗಳಿಗೆ ಹೆಚ್ಚಿದ ಬೇಡಿಕೆ: ಐದು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ ಆಸ್ತಿ ಮೌಲ್ಯ
Last Updated 22 ನವೆಂಬರ್ 2020, 20:12 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ಯಾವುದೇ ಮಹಾನಗರದ ಅಭಿವೃದ್ಧಿಯಲ್ಲಿ ಅಲ್ಲಿನ ವಸತಿ ವ್ಯವಸ್ಥೆಯ ಪಾತ್ರವೂ ಹಿರಿದು. ‘ಐಟಿ ಸಿಟಿ’ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು, ರಿಯಲ್‌ ಎಸ್ಟೇಟ್ ಉದ್ಯಮದ ಬೆಳವಣಿಗೆಗಾಗಿಯೂ ದೇಶದ ಪ್ರಮುಖ ನಗರವಾಗಿ ಗುರುತಿಸಿಕೊಂಡಿದೆ. ಕೋವಿಡ್‌ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಈ ಕ್ಷೇತ್ರದಲ್ಲಿ ತೋರಿದ ಸ್ಥಿರತೆಯ ಕಾರಣದಿಂದಲೂ ದೇಶದಲ್ಲಿ ತನ್ನ ‘ಬ್ರ್ಯಾಂಡ್‌ ಮೌಲ್ಯ’ ಹೆಚ್ಚಿಸಿಕೊಂಡಿದೆ ಸಿಲಿಕಾನ್ ಸಿಟಿ.

ರಾಜ್ಯದ ಒಟ್ಟು ನಿರ್ಮಾಣ ಯೋಜನೆಗಳ ಪೈಕಿ ಶೇ. 90ರಷ್ಟು ಪಾಲು ಬೆಂಗಳೂರಿನದು. ಲಾಕ್‌ಡೌನ್‌ ನಂತರ ಈ ವಲಯದಲ್ಲಿ ಹೊಸ ಮನ್ವಂತರ ಆರಂಭವಾಗಿದ್ದು, ಕೈಗೆಟಕುವ ದರದ, ಮಧ್ಯಮ ಗಾತ್ರದ ಮನೆಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ನಿರ್ಮಾಣ ಹಂತದಲ್ಲಿದ್ದ ಯೋಜನೆಗಳ ಪೈಕಿ ಶೇ 95ರಷ್ಟು ಪೂರ್ಣಗೊಂಡಿವೆ ಎನ್ನುತ್ತಾರೆ ಬಿಲ್ಡರ್‌ಗಳು.

ವಿನ್ಯಾಸ ಬದಲು; ಕುದುರಿದ ಬೇಡಿಕೆ: ‘ವರ್ಕ್‌ ಫ್ರಮ್ ಹೋಂ’ ಸಂಸ್ಕೃತಿ ಪ್ರಾರಂಭವಾದ ಮೇಲೆ ಮನೆಗಳ ವಿನ್ಯಾಸದಲ್ಲಿಯೂ ಬದಲಾವಣೆ ಮಾಡಲಾಗುತ್ತಿದೆ. ಈ ಮೊದಲು, ಮನೆಗಿಂತಲೂ ಕಚೇರಿಯಲ್ಲಿಯೇ ಹೆಚ್ಚು ಸಮಯವನ್ನು ಜನ ಕಳೆಯುತ್ತಿದ್ದರು. ಈಗ ಮನೆಯೇ ಕಚೇರಿ ಆಗಿರುವುದರಿಂದ, ನಿವಾಸಗಳಲ್ಲಿಯೇ ‘ಕೆಲಸದ ವಾತಾವರಣ’ ಸೃಷ್ಟಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗುತ್ತಿದೆ.

ವೈ–ಫೈ ಸೌಲಭ್ಯ ಪಡೆಯಲು ಬೇಕಾದ ವ್ಯವಸ್ಥೆ, ಆಪ್ಟಿಕಲ್‌ ಫೈಬರ್ ಕೇಬಲ್‌ ಅಳವಡಿಸಲು ಪಾಯಿಂಟ್‌ಗಳು ಅಲ್ಲದೆ, ಅಡುಗೆ ಮನೆಯಿಂದಲೂ ಕಚೇರಿ ಕೆಲಸ ನಿರ್ವಹಿಸಲು ಬೇಕಾದ ವ್ಯವಸ್ಥೆಯನ್ನು ಹೊಸ ವಿನ್ಯಾಸದ ಮನೆಗಳಲ್ಲಿ ಕಲ್ಪಿಸಲಾಗುತ್ತಿದೆ. ಕಡಿಮೆ ವಿಸ್ತೀರ್ಣದ ಮನೆಗಳಲ್ಲಿಯೂ, ದೊಡ್ಡ ಬಂಗಲೆಗಳಲ್ಲಿ ಇರಬೇಕಾದ ಎಲ್ಲ ಸೌಲಭ್ಯಗಳನ್ನು ತಂತ್ರಜ್ಞಾನದ ಸಹಾಯದಿಂದ ಒದಗಿಸುತ್ತಿದ್ದೇವೆ ಎನ್ನುತ್ತಾರೆ ಡೆವಲಪರ್‌ಗಳು.

ಐದು ವರ್ಷಗಳಲ್ಲೇ ದುಪ್ಪಟ್ಟು: ದೇಶದ ಬೇರೆ ನಗರಗಳಿಗೆ ಹೋಲಿಸಿದರೆ, ರಿಯಲ್‌ ಎಸ್ಟೇಟ್‌ ಉದ್ಯಮವು ನಗರದಲ್ಲಿ ಏರುಗತಿಯಲ್ಲಿ ಸಾಗಿದೆ. ‘ನಗರದಲ್ಲಿ ಯಾವುದೇ ಆಸ್ತಿ ಮೇಲೆ ಬಂಡವಾಳ ಹೂಡಿದರೆ ಅದರ ಮೌಲ್ಯ ದುಪ್ಪಟ್ಟಾಗಲು 10ವರ್ಷಗಳಿಂದ 12 ವರ್ಷಗಳಾಗುತ್ತಿತ್ತು. ಈಗ ಮನೆಗಳಿಗೆ ಮೊದಲಿಗಿಂತಲೂ ಬೇಡಿಕೆ ಹೆಚ್ಚುತ್ತಿದೆ. ಮೆಟ್ರೊ ರೈಲು ಸಂಪರ್ಕ ವೃದ್ಧಿ, ಸಂಪರ್ಕ ರಸ್ತೆಗಳ ಅಭಿವೃದ್ಧಿ ಮತ್ತಿತರ ಸೌಲಭ್ಯಗಳು ಹೆಚ್ಚುತ್ತಿರುವುದರಿಂದ ಯಾವುದೇ ಆಸ್ತಿ ಖರೀದಿಸಿದರೆ, ಕೇವಲ 5 ವರ್ಷದಿಂದ 6 ವರ್ಷಗಳಲ್ಲಿ ಅದರ ಮೌಲ್ಯ ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚಿದೆ’ ಎಂದು ಡೆವಲಪರ್‌ ಒಬ್ಬರು ಹೇಳಿದರು.

ವಂಚನೆ ನಿಲ್ಲಲಿ: ‘ಯಾವುದೇ ಸ್ಥಳದಿಂದ ಕೆಲಸ ಮಾಡುವ ಅವಕಾಶಗಳು ಹೆಚ್ಚಾದ ನಂತರ, ದೂರವಾದರೂ ಪರವಾಗಿಲ್ಲ ಮನೆ ಬೇಕು ಎಂದು ಎಲ್ಲರೂ ಬಯಸುತ್ತಿದ್ದಾರೆ. ಆದರೆ, ಬಹಳಷ್ಟು ಡೆವಲಪರ್‌ಗಳು ಕೋವಿಡ್‌ ನೆಪ ಮುಂದಿಟ್ಟುಕೊಂಡು ಅವಧಿಯೊಳಗೆ ಮನೆಯನ್ನು ಕೊಡುತ್ತಿಲ್ಲ. ಕೊಟ್ಟಿರುವ ಹಣವನ್ನೂ ವಾಪಸ್ ಕೊಡುತ್ತಿಲ್ಲ. ರಿಯಲ್‌ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಈ ನಿಟ್ಟಿನಲ್ಲಿ ಬಿಲ್ಡರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಎಂಜಿನಿಯರ್‌ ರಮೇಶ್‌ ಗೌಳಿ ಒತ್ತಾಯಿಸುತ್ತಾರೆ.

‘ರೇರಾ ಕಾಯ್ದೆಯ ನಿಯಮಗಳು ಕಟ್ಟು ನಿಟ್ಟಾಗಿ ಜಾರಿಯಾದರೆ, ಗಡುವಿನೊಳಗೆ ಮನೆ ಗಳನ್ನು ಒದಗಿಸುವಂತಾದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ರಿಯಲ್‌ ಎಸ್ಟೇಟ್‌ ಉದ್ಯಮವೂ ವೃದ್ಧಿಯಾಗುತ್ತದೆ. ಸರ್ಕಾರಕ್ಕೂ ನಿರೀಕ್ಷಿತ ಆದಾಯ ಹೆಚ್ಚಾಗುವುದರಿಂದ ನಗರ ಅಭಿವೃದ್ಧಿ ಆಗಲಿದೆ’ ಎಂದು ಅವರು ಹೇಳುತ್ತಾರೆ.

ಹಳೆಯ ಯೋಜನೆಗಳು ಪೂರ್ಣ: ‘ಕೋವಿಡ್‌ ಸಂದರ್ಭದಲ್ಲಿ ರಾಜ್ಯದಲ್ಲಿ ಹೊಸ ಕಟ್ಟಡ ನಿರ್ಮಾಣ ಯೋಜನೆಗಳು ಪ್ರಾರಂಭವಾಗಿಲ್ಲ. ಆದರೆ, ನಿರ್ಮಾಣ ಹಂತದಲ್ಲಿದ್ದ ಎಲ್ಲ ಯೋಜನೆ ಗಳೂ ತ್ವರಿತಗತಿಯಲ್ಲಿ ಪೂರ್ಣಗೊಂಡಿವೆ. ಕಳೆದ ವರ್ಷದ ಏಪ್ರಿಲ್‌–ಅಕ್ಟೋಬರ್‌ಗೆ ಹೋಲಿಸಿದರೆ ಈ ವರ್ಷ ಇದೇ ಅವಧಿಯಲ್ಲಿ ನೋಂದಣಿಗೆ ಸಂಬಂಧಿಸಿ 1.91 ಲಕ್ಷ ದಾಖಲೆಗಳು ಕಡಿಮೆಯಾಗಿವೆ. ಸರ್ಕಾರಕ್ಕೆ ₹1,822 ಕೋಟಿ ವರಮಾನ ಕಡಿಮೆಯಾಗಿದೆ’ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮನೆಗೆ ಬೇಡಿಕೆ ಹೆಚ್ಚುತ್ತಿದೆ
‘ಆಹಾರ ಎಷ್ಟು ಅವಶ್ಯಕತೆಯೋ, ವಸತಿಗೂ ಅಷ್ಟೇ ಮಹತ್ವವಿದೆ. ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಯಾವತ್ತೂ ಮಹತ್ವ ಕಡಿಮೆಯಾಗುವುದಿಲ್ಲ. ಕೋವಿಡ್‌ ಸಂದರ್ಭದಲ್ಲಿಯೂ ಎಲ್ಲರೂ ಆಶ್ವರ್ಯ ಪಡುವಷ್ಟು ಪ್ರಗತಿ ಕಂಡು ಬಂದಿದೆ’ ಎನ್ನುತ್ತಾರೆ ರೇರಾ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ.

‘ರಾಜ್ಯದ ಒಟ್ಟು ಯೋಜನೆಗಳ ಪೈಕಿ ಶೇ 90ರಷ್ಟು ನಗರದಲ್ಲಿಯೇ ತಲೆ ಎತ್ತುತ್ತವೆ. ವಿಪರ್ಯಾಸವೆಂದರೆ, ಕಳೆದ ಜೂನ್‌ನಲ್ಲಿ ಹೊಸ ಯೋಜನೆಯ 53 ಅರ್ಜಿಗಳು ಪ್ರಾಧಿಕಾರಕ್ಕೆ ಬಂದಿದ್ದವು. ಈ ಜೂನ್‌ನಲ್ಲಿ 82 ಅರ್ಜಿಗಳು (ಪಟ್ಟಿ ನೋಡಿ) ಬಂದಿವೆ. ಮನೆಯಿಂದಲೇ ಕೆಲಸ ಮಾಡುವುದು ಆರಂಭವಾದಾಗಿನಿಂದ ಮನೆಗಳ ಬೇಡಿಕೆಯೂ ಹೆಚ್ಚಾಗಿದೆ. ಕಚೇರಿಯಿಂದ ದೂರ ಇದ್ದರೂ ಪರವಾಗಿಲ್ಲ ಸ್ವಂತ ಮನೆ ಇರಬೇಕು ಎಂದು ಜನ ಬಯಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಯಾವುದೇ ಡೆವಲಪರ್‌ಗಳಾದರೂ ಗಡುವಿನೊಳಗೆ ಮನೆಯನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರದಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವಿಳಂಬ ಮಾಡಿದರೆ ದಂಡ ವಿಧಿಸುವ, ಖರೀದಿದಾರರಿಗೆ ಸಾಲದ ಮೇಲಿನ ಬಡ್ಡಿ ಪಾವತಿಸುವ, ಯೋಜನೆ ಪೂರ್ಣಗೊಳಿಸದಿದ್ದರೆ ಸಂಪೂರ್ಣ ಹಣವನ್ನು ಖರೀದಿದಾರರಿಗೆ ಪಾವತಿಸಲು ಬಿಲ್ಡರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಪಾರದರ್ಶಕವಾಗಿ ವ್ಯವಹಾರ ನಡೆಸುವ ಬಿಲ್ಡರ್‌ಗಳನ್ನು ಪ್ರೋತ್ಸಾಹಿಸುವ ಕೆಲಸವನ್ನೂ ಪ್ರಾಧಿಕಾರ ಮಾಡುತ್ತಿದೆ’ ಎಂದರು.

‘ಜೊಳ್ಳು ಹೋಗಿ, ಗಟ್ಟಿ ಕಾಳು ಉಳಿದಿವೆ’
‘ಲಾಕ್‌ಡೌನ್‌ ಪ್ರಾರಂಭದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ, ವಹಿವಾಟು ಕುಸಿದಿಲ್ಲ. ಕೈಗೆಟಕುವ ದರದ, ಮಧ್ಯಮ ಗಾತ್ರದ ಮನೆಗಳು ‘ಹಾಟ್‌ ಕೇಕ್‌’ನಂತೆ ಮಾರಾಟವಾಗುತ್ತಿವೆ’ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಸಂಘದ (ಕ್ರೆಡೈ) ರಾಜ್ಯಘಟಕದ ಉಪಾಧ್ಯಕ್ಷ ಪ್ರದೀಪ್‌ ರಾಯ್ಕರ್.

‘ಲಾಕ್‌ಡೌನ್‌ ಹೊಡೆತದಿಂದ ಅಸಂಘಟಿತ ವಲಯದ ಡೆವಲಪರ್‌ಗಳು (ಕಾರ್ಪೊರೇಟ್‌ಯೇತರ) ಈ ಕ್ಷೇತ್ರದಲ್ಲಿ ಉಳಿಯುವುದು ಕಷ್ಟವಾಯಿತು. ಕಾರ್ಪೊರೇಟ್‌ ಡೆವಲಪರ್‌ಗಳು ಅಥವಾ ಸಂಘಟಿತ ಬಿಲ್ಡರ್‌ಗಳು ಇಂತಹ ಸಂಕಷ್ಟದ ಸಮಯದಲ್ಲಿಯೂ ನಿಗದಿತ ಗಡುವಿನೊಳಗೆ ಖರೀದಿದಾರರಿಗೆ ಮನೆಗಳನ್ನು ಒದಗಿಸಿದರು. ಸದ್ಯ, ಜೊಳ್ಳುಗಳೆಲ್ಲ ಹೋಗಿ, ಗಟ್ಟಿ ಕಾಳು ಉಳಿದಿವೆ’ ಎಂದು ಅವರು ಹೇಳಿದರು.

‘ರೇರಾದಲ್ಲಿ ನೋಂದಾಯಿತ, ಪಾರದರ್ಶಕವಾಗಿ ಕೆಲಸ ಮಾಡುತ್ತಿರುವ ಡೆವಲಪರ್‌ಗಳು ಈಗಲೂ ಗಟ್ಟಿಯಾಗಿ ನೆಲೆ ನಿಂತಿದ್ದಾರೆ. ಈ ಕಾರಣದಿಂದ ಬೇಡಿಕೆ ಹೆಚ್ಚಾಗಿದ್ದರೂ ಪೂರೈಕೆ ಕಡಿಮೆಯಾಗಿದೆ. ಗಟ್ಟಿಯಾಗಿ ಉಳಿಯಬೇಕೆಂದರೆ ಗುಣಮಟ್ಟದ, ಯೋಗ್ಯಬೆಲೆಯ ಮನೆಗಳನ್ನು ಒದಗಿಸಬೇಕು ಎಂಬುದನ್ನು ಕೋವಿಡ್‌ ತೋರಿಸಿಕೊಟ್ಟಿದೆ. ಮೊದಲಿಗಿಂತ ಹೆಚ್ಚು ವೇಗದಲ್ಲಿ, ಹೆಚ್ಚು ಪಾರದರ್ಶಕವಾಗಿ ಈ ಉದ್ಯಮ ಬೆಳೆಯುತ್ತಿದೆ’ ಎಂದು ಅವರು ಹೇಳುತ್ತಾರೆ.

‘ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿಯೂ ಗಡುವಿನೊಳಗೆ ಮನೆಗಳನ್ನು ಕೆಲವು ಡೆವಲಪರ್‌ಗಳು ಒದಗಿಸುತ್ತಿಲ್ಲ. ಆದರೆ, ರಾಜ್ಯದಲ್ಲಿ ರೇರಾ ಕಾಯ್ದೆ ಅನುಷ್ಠಾನವಾದ ಮೇಲೆ ರಿಯಲ್‌ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೆಚ್ಚು ಯೋಜನೆಗಳು ಬೆಂಗಳೂರಿನಲ್ಲಿಯೇ ತಲೆ ಎತ್ತುತ್ತಿವೆ. ರಾಜಧಾನಿಯೊಂದರಲ್ಲಿಯೇ 65 ಬೃಹತ್‌ ನಿರ್ಮಾಣ ಯೋಜನೆಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಸರ್ಕಾರದಿಂದ ಪ್ರೋತ್ಸಾಹ
*
₹20 ಲಕ್ಷದ ಮನೆಗಳಿಗೆ ಶೇ 2 ಹಾಗೂ ₹30 ಲಕ್ಷದ ಮನೆಗಳಿಗೆ ಶೇ 3ರಷ್ಟು ಮುದ್ರಾಂಕ ಶುಲ್ಕವನ್ನು ರಾಜ್ಯಸರ್ಕಾರ ಕಡಿಮೆ ಮಾಡಿದೆ. ಉದ್ಯಮದ ಬೆಳವಣಿಗೆಗೆ ಇದರಿಂದ ಪ್ರೋತ್ಸಾಹ ಸಿಗುತ್ತಿದೆ.
* ನಗರದ ಹೊರವಲಯದ ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳು ಇರುವಲ್ಲಿಯೂ ಮೆಟ್ರೊ ರೈಲು ಸಂಪರ್ಕ ವೃದ್ಧಿಸುತ್ತಿದೆ. ಈ ಭಾಗದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮವೂ ಅಭಿವೃದ್ಧಿಯಾಗುತ್ತಿದೆ.
* ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ವ್ಯವಸ್ಥೆ ಸುಧಾರಿಸಲಾಗಿದೆ. ಪ್ರಮುಖ ವಾಣಿಜ್ಯ ಕೇಂದ್ರ ಮತ್ತು ಪ್ರದೇಶಗಳಿಂದ 45 ನಿಮಿಷಗಳಲ್ಲಿ ತಲುಪುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
* ವಿಮಾನ ನಿಲ್ದಾಣದವರೆಗೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಸೇವೆ ಆರಂಭವಾದ ನಂತರ ಈ ಭಾಗದ ಸುತ್ತ–ಮುತ್ತ ರಿಯಲ್‌ ಎಸ್ಟೇಟ್‌ ಉದ್ಯಮ ಪ್ರಗತಿ ಕಾಣಲಿದೆ.

ಬೇಕಿದೆ ಇನ್ನಷ್ಟು ಉತ್ತೇಜನ
*
ಬಜೆಟ್‌ನಲ್ಲಿ ವಸತಿ ಅಥವಾ ಮೂಲಸೌಕರ್ಯ ನಿರ್ಮಾಣ ವಲಯಕ್ಕೆ ಹೆಚ್ಚು ಅನುದಾನ ನೀಡಬೇಕು.
* ಕಾರ್ಪೊರೇಟ್‌ ವಲಯ– ಕಾರ್ಪೊರೇಟ್‌ಯೇತರ ವಲಯದಲ್ಲಿ ಬೇರೆ–ಬೇರೆ ದರ ನಿಗದಿ ಮಾಡಲಾಗುತ್ತಿದೆ. ಇದರಿಂದ ನಗರದ ಆಯಾ ಸ್ಥಳಗಳಲ್ಲಿ ಬೇರೆ–ಬೇರೆ ಬೆಲೆ ಇದೆ. ಇದಕ್ಕೆ ಸ್ಪಷ್ಟ ಮಾನದಂಡ ರೂಪಿಸಿ, ಏಕರೂಪದ ದರ ನಿಗದಿ ಮಾಡಬೇಕು.
* ಏಕರೂಪದ ದರ ನಿಗದಿಯಿಂದ ವಹಿವಾಟು ಸರಾಗವೂ, ಪಾರದರ್ಶಕವೂ ಆಗುತ್ತದೆ.
* ವಿಮಾನ ನಿಲ್ದಾಣಕ್ಕೆ ಮತ್ತು ಇತರೆ ಪ್ರಮುಖ ಬಡಾವಣೆಗಳಿಗೆ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಬೇಕು.
* ಗಡುವಿನೊಳಗೆ ಖರೀದಿದಾರರಿಗೆ ಮನೆಗಳನ್ನು ನೀಡದ ಡೆವಲಪರ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT