ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಯುತ ಬೆಂಗಳೂರು ನಗರ: ಬದಲಾವಣೆಯ ಹೆಜ್ಜೆಗೆ ಸಜ್ಜಾಗಲು ಸಕಾಲ

Last Updated 25 ಏಪ್ರಿಲ್ 2021, 21:51 IST
ಅಕ್ಷರ ಗಾತ್ರ

ಬೆಂಗಳೂರು: ಗುಣಮಟ್ಟದ ಆರೋಗ್ಯಸೇವೆಗೆ ಹೆಸರಾಗಿದ್ದ ಹಾಗೂ ಆರೋಗ್ಯ ಪ್ರವಾಸೋದ್ಯಮಕ್ಕಾಗಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದ ಬೆಂಗಳೂರು ಈಗ ಆಮ್ಲಜನಕ ಸಿಗದೆ ಸಾಯುವವರ ಸಂಖ್ಯೆಯ ಕಾರಣಕ್ಕಾಗಿ ಏಕಾಏಕಿ ಕುಖ್ಯಾತಿ ಪಡೆದಿದೆ. ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ (1,80,542) ಕೊರೋನ ಸೊಂಕಿತರು ಇರುವ ನಗರ ಬೆಂಗಳೂರು.

ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ, ದೇಶದ ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಗೆ ‍ಪಡೆದ ಈ ನಗರದಲ್ಲಿ ಕೋವಿಡ್‌ ರೋಗಿಗಳು ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ತೀವ್ರ ನಿಗಾ ಘಟಕದ (ಐಸಿಯು), ವೆಂಟಿಲೇಟರ್‌ ಸೌಕರ್ಯಗಳಿರುವ ಹಾಸಿಗೆಗಳ ಅಲಭ್ಯತೆಯಿಂದ ಪಡಿಪಾಟಲು ಅನುಭವಿಸುವ ಕರಾಳ ಸನ್ನಿವೇಶ ಸೃಷ್ಟಿಯಾಗಿದ್ದಾದರೂ ಹೇಗೆ?

ಆಧುನಿಕ ಆರೋಗ್ಯ ಸೇವೆಯ ಅವಶ್ಯಕತೆ ಮನಗಂಡು ನಮ್ಮ ಪೂರ್ವಜರು 1987ರಲ್ಲೇ ವಿಕ್ಟೋರಿಯಾ ಆಸ್ಪತ್ರೆಗೆ ಅಡಿಗಲ್ಲು ಹಾಕಿಸಿದ್ದರು. 1901ರಲ್ಲಿ ಈ ಆಸ್ಪತ್ರೆಸಾರ್ವಜನಿಕ ಸೇವೆಗೆ ಲಭ್ಯವಾಗಿತ್ತು. ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆ ಸ್ಥಾಪನೆಯಾಗಿದ್ದು 1916ರಲ್ಲಿ. ನೂರು ವರ್ಷಗಳ ಹಿಂದೆಯೇ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದ ಬೆಂಗಳೂರು ಎಡವಿದ್ದೆಲ್ಲಿ ಎಂಬುದು ಯಕ್ಷಪ್ರಶ್ನೆ.

2013ರ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ವರದಿ ಬೆಂಗಳೂರು ಸೇರಿದಂತೆ ರಾಷ್ಟ್ರದ ಪ್ರಮುಖ ಮಹಾನಗರಗಳಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಬೆಳಕು ಚೆಲ್ಲಿತ್ತು. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವೇ ರೂಪಿಸಿದ್ದ ಈ ವರದಿಯ ಶಿಫಾರಸುಗಳು ಜಾರಿಯಾಗಿದ್ದೇ ಆದರೆ, ಜನರು ಈಗ ಜೀವ ಉಳಿಸಿಕೊಳ್ಳಲು ಖಾಸಗಿ ಆಸ್ಪತ್ರೆಯಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಸೋಂಕು ತಗುಲಿದ ಬಳಿಕ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವುದು ನಂತರದ ಮಾತು. ಆದರೆ, ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡಾಗ ಸೋಂಕಿತರನ್ನು ಪ್ರತ್ಯೇಕಿಸಿ, ಅವರ ಜೊತೆ ನೇರ ಮತ್ತು ಪರೋಕ್ಷ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಿ ಪ್ರತ್ಯೇಕ ವಾಸಕ್ಕೆ ಒಳಪಡಿಸುವ ಕಾರ್ಯದ ವೈಫಲ್ಯ ಸೋಂಕು ಹಬ್ಬುವಿಕೆಗೆ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು. ತಳ ಹಂತದಲ್ಲಿ ನಡೆಯುವ ಈ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸಲು ನೆರವಿಗೆ ಬರುವುದು ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ).

ಈ ಮಹಾನಗರದಲ್ಲಿ ವಾರ್ಡ್‌ಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ ಎಂಬುದು ಅರಗಿಸಿಕೊಳ್ಳಲು ಕಷ್ಟವಾದರೂ, ವಾಸ್ತವ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಪ್ರಕಾರ ಪ್ರತಿ 50 ಸಾವಿರ ಜನಸಂಖ್ಯೆಗೆ ಒಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು. 1.25 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿಗೆ ಕನಿಷ್ಟ ಪಕ್ಷ 225 ಪ್ರಾಥಮಿಕ ಆರೋಗ್ಯ ಕೇಂದ್ರಗಳಾದರೂ ಇರಬೇಕಿತ್ತು. ಆದರೆ, ಇದರ ಅರ್ಧದಷ್ಟು ಪಿಎಚ್‌ಸಿಗಳು ಮಾತ್ರ ನಗರದಲ್ಲಿವೆ.

ಕಳೆದ ವರ್ಷ ಕೋವಿಡ್‌ ಹರಡುವಿಕೆ ವ್ಯಾಪಕವಾಗಿದ್ದಾಗ ನಗರದ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ಬಿಬಿಎಂಪಿ ಪರಾಮರ್ಶೆ ನಡೆಸಿತ್ತು. ಒಟ್ಟು 198 ವಾರ್ಡ್‌ಗಳಲ್ಲಿ ಬಿಬಿಎಂಪಿ ಅಧೀನದಲ್ಲಿ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಮಾತ್ರ ಕಾರ್ಯನಿರ್ವಹಿಸುತ್ತಿದ್ದುದು ಹಾಗೂ 65 ವಾರ್ಡ್‌ಗಳಲ್ಲಿ ಪಿಎಚ್‌ಸಿಗಳೇ ಇಲ್ಲದಿದ್ದುದು ಗಮನಕ್ಕೆ ಬಂದಿತ್ತು. ಪಿಎಚ್‌ಸಿಗಳಿಲ್ಲದ ವಾರ್ಡ್‌ಗಳಲ್ಲಿ ಪಕ್ಕದ ವಾರ್ಡ್‌ಗಳ ಪಿಎಚ್‌ಸಿಗಳ ಸಿಬ್ಬಂದಿಯ ನೆರವಿನಿಂದ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಾಗಿತ್ತು. ಈ ಕೊರತೆಯೇ ಕೋವಿಡ್‌ ನಿಯಂತ್ರಣದ ಮೇಲೂ ಪರಿಣಾಮ ಬೀರಿದೆ.

ಹೊರ ವಲಯದ ವಾರ್ಡ್‌ಗಳಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (ಎನ್‌ಯುಎಚ್‌ಎಂ) ಅಡಿಯ 35 ಪಿಎಚ್‌ಸಿಗಳು, ಎನ್‌ಯುಎಚ್‌ಎಂ ವ್ಯಾಪ್ತಿಗೆ ಬಾರದ 14 ಪಿಎಚ್‌ಸಿಗಳು ಹಾಗೂ ಎರಡು ಸಮುದಾಯ ಆರೋಗ್ಯ ಕೇಂದ್ರಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದವು. ಅವುಗಳ ಸಿಬ್ಬಂದಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದರು. ಈ ಆರೋಗ್ಯ ಕೇಂದ್ರಗಳನ್ನು ಹಾಗೂ ಅವುಗಳ ಸಿಬ್ಬಂದಿಯನ್ನೂ ಬಿಬಿಎಂಪಿ ತೆಕ್ಕೆಗೆ ಸೇರಿಸಿಕೊಳ್ಳಲಾಗಿದೆ. ಹಾಗಾಗಿ ಪ್ರಸ್ತುತ ನಗರದಲ್ಲಿ 141 ಪಿಎಚ್‌ಸಿಗಳು ಬಿಬಿಎಂಪಿ ಅಧೀನದಲ್ಲಿವೆ. 57 ವಾರ್ಡ್‌ಗಳಲ್ಲಿ ಈಗಲೂ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಹಾಗಾಗಿಯೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಹಾಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಪಿಎಚ್‌ಸಿಗಳಿಗೆ ಬಂದ ಜನ ಗುಂಪುಗೂಡುತ್ತಿರುವ ದೃಶ್ಯಗಳು ನಗರದಲ್ಲಿ ಮಾಮೂಲಿ ಎಂಬಂತಾಗಿವೆ.

ಪ್ರಾಥಮಿಕ ಆರೋಗ್ಯ ಕೊರತೆ ನೀಗಿಸಲು ಈ 57 ವಾರ್ಡ್‌ಗಳಿಗೂ ಪಿಎಚ್‌ಸಿಗಳನ್ನು ಮಂಜೂರು ಮಾಡಬೇಕು ಎಂದು ಬಿಬಿಎಂಪಿ 2020ರ ಜು.29ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರತಿ ಪಿಎಚ್‌ಸಿಯ ಸಿಬ್ಬಂದಿಯ ವೇತನ, ಕಟ್ಟಡದ ಬಾಡಿಗೆ, ಪೀಠೋಪಕರಣ, ಕಚೇರಿ ವೆಚ್ಚ, ಔಷಧಿ ಮತ್ತು ರಿ–ಏಜೆಂಟ್‌ಗಳಿಗಾಗಿ ವರ್ಷಕ್ಕೆ ತಲಾ ₹ 40.25 ಲಕ್ಷ ಬೇಕಾಗುತ್ತದೆ. 57 ಪಿಎಚ್‌ಸಿಗಳ ನಿರ್ವಹಣೆಗೆ ವರ್ಷಕ್ಕೆ ₹ 22.94 ಕೋಟಿ ಬೇಕಾಗುತ್ತದೆ, ಇಷ್ಟು ಅನುದಾನವನ್ನು ಬಜೆಟ್‌ನಲ್ಲಿ ಬಿಡುಗಡೆ ಮಾಡುವಂತೆ ಕೋರಿಕೆ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ 2021–22ನ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿಯ 57 ವಾರ್ಡ್‌ಗಳಲ್ಲಿ ಆರೋಗ್ಯ ಇಲಾಖೆ ಮೂಲಕ ಜನಾರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಕೇವಲ ₹ 10 ಕೋಟಿ ಅನುದಾನ ನಿಗದಿಪಡಿಸಿದೆ.

ಕೊರೊನಾ ನಿಯಂತ್ರಣ ಕೈಮೀರಿದೆ. ತಳ ಹಂತದ ಆರೋಗ್ಯ ಸೇವೆಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಭವಿಷ್ಯದಲ್ಲೂ ಇಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯುವುದು ಸವಾಲಾಗಿಯೇ ಉಳಿಯಲಿದೆ. ಹಾಗಾಗಿ ಆರೋಗ್ಯ ಮೂಲಸೌಕರ್ಯ ಬಲಪಡಿಸುವತ್ತ ಸರ್ಕಾರ ಹಾಗೂ ಬಿಬಿಎಂಪಿ ಸೇರಿ ಹೆಜ್ಜೆ ಇಡಬೇಕಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ತುರ್ತಾಗಿ ಆಗಬೇಕಾದುದೇನು?
‘ಆರೋಗ್ಯ ಸೇವೆ ಬಲಪಡಿಸಬೇಕಾದರೆ ಬಿಬಿಎಂಪಿ ವ್ಯಾಪ್ತಿಯಲ್ಲೂ ಪ್ರತಿ 50 ಸಾವಿರ ಜನಸಂಖ್ಯೆಗೆ ಒಂದು ಪಿಎಚ್‌ಸಿ ಹೊಂದಬೇಕಿದೆ. ಕೊವಿಡ್‌ ನಿರ್ವಹಣೆಗೆ ಸರ್ಕಾರ ಕಳೆದವಾರ ₹ 300 ಕೋಟಿ ಬಿಡುಗಡೆ ಮಾಡಿದೆ. 2021–22ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಕ್ಲಿನಿಕಲ್‌ ವಿಭಾಗಕ್ಕೆ ₹ 337 ಕೋಟಿ ಮೀಸಲಿಡಲಾಗಿದೆ. ಕೋವಿಡ್‌ ಹರಡುವಿಕೆ ಈಗಾಗಲೇ ಕೈಮೀರಿರುವುದರಿಂದ ಈ ಅನುದಾನ ಸೋಂಕಿತರ ಚಿಕಿತ್ಸೆ ಹಾಗೂ ಸೋಂಕು ನಿಯಂತ್ರಣಕ ಕಾರ್ಯಕ್ಕೆ ಬೇಕಾಗಬಹುದು. ತದನಂತರವಾದರೂ ಬೇರೆ ಕಾಮಗಾರಿಗಳನ್ನು ಬದಿಗಿಟ್ಟು ಸಮರೋಪಾದಿಯಲ್ಲಿ ಆರೋಗ್ಯ ಮೂಲಸೌಕರ್ಯ ವರ್ಧನೆಗೆ ಬಿಬಿಎಂಪಿ ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿ ಒಬ್ಬರು ಒತ್ತಾಯಿಸಿದರು.

‘ಪ್ರಾಥಮಿಕ ಹಂತದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಬಲು ಮುಖ್ಯ’
ಸಾಂಕ್ರಾಮಿಕ ರೋಗಗ ಹತ್ತಿಕ್ಕಬೇಕಾದರೆ ಸೋಂಕು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ, ನಗರದಿಂದ ಇನ್ನೊಂದು ನಗರಕ್ಕೆ ಹರಡುವುದನ್ನು ತಡೆಯಬೇಕು. ಇದಕ್ಕೆ ಪ್ರಾಥಮಿಕ ಹಂತದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಬಲು ಮುಖ್ಯ. ಕೋವಿಡ್‌ ಪರೀಕ್ಷೆ, ಸೊಂಕಿತರ ಸಂಪರ್ಕ ಹೊಂದಿದವರ ಪತ್ತೆ ಮಾಡಿ ಅವರನ್ನು ಪ್ರತ್ಯೇಕಿಸುವ ಕಾರ್ಯ ಸಮರ್ಪಕವಾಗಿ ನಡೆಯಬೇಕು. ಜನರಲ್ಲಿ ಆರೋಗ್ಯ ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸಬೇಕು. ತೈವಾನ್‌, ದಕ್ಷಿಣ ಕೊರಿಯಾದಂತಹ ದೇಶಗಳು ಇದನ್ನು ಚೆನ್ನಾಗಿ ನಿರ್ವಹಿಸಿವೆ.

ಲಾಕ್‌ಡೌನ್‌ ಜಾರಿಗೊಳಿಸಿದರೆ ಸಾಲದು, ರೋಗಿಯು ಚಿಕಿತ್ಸೆಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುವ ಅಗತ್ಯ ಬೀಳಬಾರದು. ರೋಗಿಗಳಿರುವ ಸ್ಥಳಕ್ಕೇ ವೈದ್ಯರನ್ನು ಕಳುಹಿಸುವ ಹಾಗೂ ವೈದ್ಯಕೀಯ ಸೌಲಭ್ಯ ತಲುಪಿಸುವ ಮೂಲಕ ಮೂಲಕ ಚೀನಾ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಿತು.

ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಹಿಂದಿನ ಅನುಭವಗಳು ನಮ್ಮ ಮುಂದಿವೆ. ಈ ಬಗ್ಗೆ ಅಧ್ಯಯನಗಳು ನಡೆದಿವೆ. ಅವುಗಳ ಆಧಾರದಲ್ಲಿ ನಾವು ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ. ವೈದ್ಯರ ಹಾಗೂ ಇತರ ವೈದ್ಯಕೀಯ ಸಿಬ್ಬಂದಿ, ಶುಷ್ರೂಷಕರ ಗುಣಮಟ್ಟದಲ್ಲೂ ಸುಧಾರಣೆ ಆಗಬೇಕು. ಸಾಂಕ್ರಮಿಕ ರೋಗಗಳಿಲ್ಲದ ಕಾಲದಲ್ಲೇ ಇದಕ್ಕೆ ಸಿದ್ಧತೆ ನಡೆಸಬೇಕು. ಪ್ರಾಥಮಿಕ ಆರೋಗ್ಯ ಸೇವೆ ಸರ್ಕಾರದ ಜವಾಬ್ದಾರಿ. ಇದಕ್ಕೆ ಸಾಕಷ್ಟು ಅನುದಾನವನ್ನು ಸರ್ಕಾರ ಒದಗಿಸಬೇಕು.
-ಡಾ.ಗುಣಶೇಖರ್‌ ವುಪ್ಪಲಪತಿ,ಜಿವಿಜಿ ಇನ್‌ವಿವೊ ಆಸ್ಪತ್ರೆ, ಜೆ.ಪಿ.ನಗರ

‘ಸಾಂಕ್ರಾಮಿಕ ನಿರ್ವಹಣೆಗೆ ಸನ್ನದ್ಧತೆ ಅಗತ್ಯ’
ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳನ್ನು ನಿರ್ವಹಣೆ ಮಾಡುವುದಕ್ಕೆ ಸಾಕಷ್ಟು ಮುಂದಾಲೋಚನೆ ಹಾಗೂ ಸನ್ನದ್ಧತೆ ಅಗತ್ಯವಿದೆ. ಕೋವಿಡ್ ಮೊದಲ ಅಲೆಯಲ್ಲಿ ನಮ್ಮ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆಯ ಲೋಪಗಳು ಬಹಿರಂಗವಾದವು. ಅದನ್ನು ಮೆಟ್ಟಿ ನಿಂತು ಮೂಲಸೌಕರ್ಯ ರೂಪಿಸುವಲ್ಲಿ ಸೋತಿದ್ದೇವೆ.

ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ (ಐಸಿಯು) ಹಾಗೂ ಆಮ್ಲಜನಕ ಪೂರಣ ವ್ಯವಸ್ಥೆ ಹೊಂದುವುದಕ್ಕೆ ದುಬಾರಿ ವೆಚ್ಚವಾಗುತ್ತದೆ. ಅವುಗಳ ನಿರ್ವಹಣೆಯೂ ದುಬಾರಿ. ಐಸಿಯು ನಿರ್ವಹಣೆಗೆ ಪ್ರತ್ಯೇಕ ವೈದ್ಯರು ಹಾಗೂ ಶುಶ್ರೂಷಕಿಯರನ್ನು ನೇಮಿಸಿ ಕೊಳ್ಳಬೇಕಾಗುತ್ತದೆ. ಅವರಿಗೆ ವರ್ಷ ಪೂರ್ತಿ ವೇತನ ನೀಡಬೇಕಾಗುತ್ತದೆ. ರೋಗಿಗಳ ಸಂಖ್ಯೆ ಕಡಿಮೆ ಇರುವಾಗಿ ಖಾಸಗಿ ಆಸ್ಪತ್ರೆಗಳು ಅವುಗಳನ್ನು ನಿರ್ವಹಿಸುವುದು ಭಾರಿ ಕಷ್ಟ. ಅವುಗಳ ಪರಿಕರಗಳ ನಿರ್ವಹಣೆಯಲ್ಲಿ ವ್ಯತ್ಯಾಸವಾದರೆ ರೋಗಿಗೆ ದ್ವಿತೀಯ ಹಂತ ಸೋಂಕು ತಗಲುವ ಅಪಾಯವಿದೆ.

ಕೋವಿಡ್‌ ವ್ಯಾಪಿಸಿರುವುದರಿಂದ ಎದುರಾದ ಪರಿಸ್ಥಿತಿ ಎಲ್ಲ ಆಸ್ಪತ್ರೆಗಳು ಐಸಿಯು ಹೊಂದಬೇಕದ ಮಹತ್ವನ್ನು ತೋರಿಸಿಕೊಟ್ಟಿದೆ. ಆಸ್ಪತ್ರೆಗಳು ಕಡ್ಡಾಯವಾಗಿ ಐಸಿಯು ಹೊಂದುವ ಬಗ್ಗೆ ಸರ್ಕಾರ ಸೂಕ್ತ ನೀತಿ ರೂಪಿಸಬೇಕು.
-ಡಾ.ಸೂರಿರಾಜು ವಿ.ರೀಗಲ್‌ ಆಸ್ಪತ್ರೆ ಥಣಿಸಂದ್ರ

‘ವಿಧಾನಸಭಾ ಕ್ಷೇತ್ರಕ್ಕೊಂದು ಸರ್ಕಾರಿ ಆಸ್ಪತ್ರೆ ಬೇಕು’
‘ನಗರದಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಖಾಸಗಿ ಆಸ್ಪತ್ರೆಗಳು. ಮೂರು– ನಾಲ್ಕು ದಶಕಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇತ್ತೀಚೆಗಂತೂ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿದೆ. ಒಂದು ದಶಕದ ಈಚೆಗಂತೂ ಯಾವುದೇ ದೊಡ್ಡ ಪ್ರಮಾಣದ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿಲ್ಲ. ಈಗಲೂ ಬಡವರು ಅವಲಂಬಿಸಿರುವುದ ನೂರು ವರ್ಷಗಳ ಹಿಂದೆ ನಿರ್ಮಾಣವಾದ ವಿಕ್ಟೋರಿಯಾ, ಬೌರಿಂಗ್‌, ಲೇಡಿ ಕರ್ಜನ್‌ ಆಸ್ಪತ್ರೆಗಳನ್ನು. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಕನಿಷ್ಟ 100 ಹಾಸಿಗೆ ಸಾಮರ್ಥ್ಯದ ಒಂದು ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಬೇಕಾದ ಅಗತ್ಯ ತುಂಬಾ ಇದೆ’ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT