ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು ದಾರಿ ಹತ್ತಾರು | 110 ಹಳ್ಳಿಗಳಿಗೆ ‘ಕಾವೇರಿ’ ಕನವರಿಕೆ

ಕಾವೇರಿ ಐದನೇ ಹಂತದ ಯೋಜನೆ l ₹5,500 ಕೋಟಿ ಮೊತ್ತದ ಯೋಜನೆ l ಪ್ರಗತಿಯಲ್ಲಿ ಸಂಸ್ಕರಣಾ ಘಟಕ, ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ
Last Updated 14 ಫೆಬ್ರುವರಿ 2022, 20:25 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಗೆ 110 ಹಳ್ಳಿಗಳ ಸೇರ್ಪಡೆಯಾಗಿ 14 ವರ್ಷಗಳೇ ಕಳೆದಿವೆ. ಇನ್ನೂ ಬಹುತೇಕ ಗ್ರಾಮಗಳ ನಿವಾಸಿಗಳಿಗೆ ಕಾವೇರಿ ನೀರು ಪೂರೈಸಲು ಸಾಧ್ಯವಾಗಿಲ್ಲ. ಕಾಮಗಾರಿ ವಿಳಂಬವಾಗುತ್ತಿದೆ ಎನ್ನುವ ದೂರುಗಳಿವೆ. ಈ ನಡುವೆ ಜಲ ಮಂಡಳಿಯು ಕಾವೇರಿ ಐದನೇ ಹಂತದಲ್ಲಿ ಈ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಗಡುವಿನೊಳಗೆ ಪೂರ್ಣಗೊಳಿಸಲು ಪ್ರಯತ್ನ ನಡೆಸುತ್ತಿದೆ.

ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ಬ್ಯಾಟರಾಯನಪುರ ವಲಯಗಳಿಗೆ ಕುಡಿಯುವ ನೀರು ಪೂರೈಸಲು ಈ ಯೋಜನೆ ರೂಪಿಸಲಾಗಿದೆ. ಸುಮಾರು 50 ಲಕ್ಷ ನಿವಾಸಿಗಳಿಗೆ ದಿನಕ್ಕೆ 7.55 ಕೋಟಿ ಲೀಟರ್‌ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಒದಗಿಸಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯ (ಜೈಕಾ) ಸಹಯೋಗದೊಂದಿಗೆ ಒಟ್ಟು ₹5,500 ಕೋಟಿ ಮೊತ್ತದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು ಮೊತ್ತದಲ್ಲಿ ಶೇ 84ರಷ್ಟನ್ನು ಜೈಕಾ ಸಾಲ ನೀಡಿದೆ. ಉಳಿದಶೇ 8ರಷ್ಟು ಮೊತ್ತವನ್ನು ಜಲಮಂಡಳಿ ಮತ್ತು ಶೇ 8ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ.2018ರ ಜನವರಿ 24ರಂದು ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಯೋಜನೆಯನ್ನು2023ರಲ್ಲಿ ಪೂರ್ಣಗೊಳಿಸಬೇಕು ಎಂಬ ಗಡುವು ವಿಧಿಸಲಾಗಿದೆ. ಆದರೆ, ನಿಗದಿಪಡಿಸಿದ ಅವಧಿಯಲ್ಲೇ ಯೋಜನೆ ಪೂರ್ಣಗೊಳ್ಳುವುದು ಅನುಮಾನ.

ಈ ಯೋಜನೆಗೆ ಪ್ರಸಕ್ತ ವರ್ಷದ ಜನವರಿ ಅಂತ್ಯದವರೆಗೆ ಜಲಮಂಡಳಿಯು ₹1,617 ಕೋಟಿ (ಶೇ 32.73) ವೆಚ್ಚ ಮಾಡಿದ್ದು, ಶೇ 37.62 ಭೌತಿಕ ಪ್ರಗತಿಯನ್ನಷ್ಟೇ ಸಾಧಿಸಿದೆ. 2019ರ ಜನವರಿಯಿಂದಲೇ ಈ ಯೋಜನೆಯ ನಿರ್ವಹಣೆಗೆ ಸಲಹಾಸಂಸ್ಥೆಗಳನ್ನು (ಪಿಎಂಸಿ) ನೇಮಿಸಲಾಗಿದೆ. ಓರಿಯಂಟಲ್‌ ಕನ್ಸಲ್ಟಂಟ್‌ ಗ್ಲೋಬಲ್‌ ಜಪಾನ್‌, ಎನ್‌ಜೆಎಸ್‌ ಎಂಜಿನಿಯರ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಟಾಟಾ ಕನ್ಸ್‌ಲ್ಟಿಂಗ್‌ ಎಂಜಿನಿಯರ್ಸ್‌ ಮತ್ತು ಅಮೆರಿಕದ ಬ್ಲ್ಯಾಕ್‌ ಆ್ಯಂಡ್‌ ವೀಚ್‌ ಸಂಸ್ಥೆಗಳು ಇದರಲ್ಲಿ ಸೇರಿವೆ.

2021ರ ಮಾರ್ಚ್‌ ವೇಳೆಗೆ ₹ 450 ಕೋಟಿ ಮೊತ್ತದವರೆಗಿನ ಕಾಮಗಾರಿ ಪೂರ್ಣಗೊಂಡಿರಬೇಕು ಎಂದು ಜೈಕಾ ಗಡುವು ನೀಡಿತ್ತು. ಆಗ ತ್ವರಿತಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗಳಿಂದಾಗಿ ಜೈಕಾ ಸೂಚಿಸಿದ್ದಕ್ಕಿಂತ ಶೇ 10ರಷ್ಟು ಹೆಚ್ಚು ಕಾಮಗಾರಿ ಪೂರ್ಣಗೊಂಡಿತ್ತು. ಹೀಗಾಗಿ, ₹530 ಕೋಟಿಯವರೆಗಿನ ಕಾಮಗಾರಿ ಮುಗಿದಿತ್ತು. ಬಳಿಕ, ಕೋವಿಡ್‌ ಮತ್ತಿತರ ಕಾರಣಗಳಿಂದ ಕೆಲ ಕಾಲ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತು. ಈ ಎಲ್ಲ ತೊಡಕುಗಳ ನಡುವೆ ಕೊಳವೆಮಾರ್ಗ ಅಳವಡಿಸುವುದು, ಪಂಪಿಂಗ್‌ ಸ್ಟೇಷನ್‌ ನಿರ್ಮಿಸುವುದು ಮತ್ತು ಕೊಳಚೆ ಸಂಸ್ಕರಣಾ ಘಟಕಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಜತೆಗೆ, ಪೈಪ್‌ಲೈನ್‌ ಅಳವಡಿಸಲು ಅಗೆದ ರಸ್ತೆಯಲ್ಲಿ ಡಾಂಬರೀಕರಣವನ್ನೂ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

‘2023ರ ಮಾರ್ಚ್‌ಗೆ ಪೂರ್ಣ’

2023ರ ಮಾರ್ಚ್‌ ವೇಳೆಗೆ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಪೂರ್ಣಗೊಳ್ಳಲಿದೆ ಎಂದು ಜಲಮಂಡಳಿಯ ಅಧ್ಯಕ್ಷ ಎನ್. ಜಯರಾಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌ ಕಾರಣಕ್ಕೆ ಕಾಮಗಾರಿ ಅನುಷ್ಠಾನ ಸ್ವಲ್ಪಮಟ್ಟಿಗೆ ವಿಳಂಬವಾಯಿತು. ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಆಸ್ಪತ್ರೆಗೆ ನೀಡಲಾಗುತ್ತಿತ್ತು. ಇದರಿಂದ, ಪೈಪ್‌ಲೈನ್‌ ಜೋಡಣೆ ಮತ್ತು ಇತರ ಕಾರ್ಯಗಳಿಗೆ ಆಮ್ಲಜನಕ ಸಿಲಿಂಡರ್‌ಗಳು ದೊರೆಯಲಿಲ್ಲ. ಇದೇ ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆಯೂ ಎದುರಾಯಿತು. ಹೀಗಾಗಿ, ಕೆಲಸ ವಿಳಂಬವಾಯಿತು. ಈಗ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ’ ಎಂದು ಅವರು ವಿವರಿಸಿದರು.

‘ಎತ್ತಿನಹೊಳೆ ಯೋಜನೆ ಅಡಿಯಲ್ಲಿ 1.5 ಟಿಎಂಸಿ ಅಡಿ ನೀರನ್ನು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಪೂರೈಸಲು ಉದ್ದೇಶಿಸಲಾಗಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ, ಜಲಾಶಯದಿಂದಲೂ ನೀರು ದೊರೆಯುತ್ತದೆ. ಓಜೋನೈಸೇಷನ್‌ ತಂತ್ರಜ್ಞಾನ ಬಳಸಿ ಈ ನೀರನ್ನು ಪಡೆಯಲಾಗುವುದು’ ಎಂದು ವಿವರಿಸಿದರು.

‘ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೆಪಿಟಿಸಿಎಲ್‌ ಸೇರಿದಂತೆ ಅಗತ್ಯ ಇರುವ ವಿವಿಧ ಇಲಾಖೆಗಳಿಂದಲೂ ಅನುಮೋದನೆ ಪಡೆದುಕೊಂಡು ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಅಗೆದ ರಸ್ತೆ ದುರಸ್ತಿಯಾಗದೆ ಜನರಿಗೆ ಸಮಸ್ಯೆ

ಕುಡಿಯುವ ನೀರು ಹಾಗೂ ಒಳಚರಂಡಿ ಅಳವಡಿಕೆ ಸಲುವಾಗಿ 110 ಹಳ್ಳಿಗಳ ವ್ಯಾಪ್ತಿಯ ರಸ್ತೆಗಳನ್ನು ಅಗೆಯಲಾಗಿದೆ. ವರ್ಷಗಳು ಕಳೆದ ಬಳಿಕವೂ ಈ ರಸ್ತೆಗಳನ್ನು ದುರಸ್ತಿಪಡಿಸಿಲ್ಲ. ಇದರಿಂದಾಗಿ ಸ್ಥಳೀಯ ನಿವಾಸಿಗಳು ನಿತ್ಯವೂ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೆಲವು ಕಡೆ ರಸ್ತೆ ಅಪಘಾತದಿಂದ ದ್ವಿಚಕ್ರ ವಾಹನ ಸವಾರರು ಗಾಯಗೊಂಡ ಪ್ರಕರಣಗಳೂ ನಡೆದಿವೆ. ಕೊಳವೆ ಅಳವಡಿಸಿದ ಪ್ರದೇಶಗಳಲ್ಲಿ ದೂಳಿನ ಸ್ನಾನ ಮಾಮೂಲಿ ಎಂಬಂತಾಗಿದೆ.

‘ಕಾವೇರಿ ಐದನೇ ಹಂತದ ಯೋಜನೆಯ ಅಡಿಯಲ್ಲಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಬಹುತೇಕ ಪೂರ್ಣಗೊಂಡಿವೆ. ಆದರೆ, ಪೈಪ್‌ಲೈನ್‌ ಕಾಮಗಾರಿಗಾಗಿ ಅಗೆಯಲಾದ ರಸ್ತೆಗಳನ್ನು ದುರಸ್ತಿಗೊಳಿಸದ ಕಾರಣ ಜನರಿಗೆ ತೊಂದರೆಯಾಗಿದೆ’ ಎಂದು ಶಾಸಕ ಆರ್. ಮಂಜುನಾಥ್ ದೂರಿದರು.

‘ಕ್ಷೇತ್ರದಲ್ಲಿರುವ 18–20 ಅಡಿ ಅಗಲದ ರಸ್ತೆಗಳಲ್ಲಿ ಬೆಸ್ಕಾಂ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ಕಾಮಗಾರಿ ಕೈಗೊಳ್ಳುತ್ತಿವೆ. ಇದರಿಂದ ಬಹಳಷ್ಟು ಸಮಸ್ಯೆಗಳಾಗಿವೆ. ದಾಸರಹಳ್ಳಿ ಕ್ಷೇತ್ರಕ್ಕೆ ಕೇವಲ ₹ 25 ಕೋಟಿ ಅನುದಾನ ನೀಡಲಾಗಿದೆ. ಇದು ಯಾವುದಕ್ಕೂ ಸಾಲದು. ಕನಿಷ್ಠ ₹150 ಕೋಟಿ ನೀಡುವಂತೆ ಪದೇ ಪದೇ ಕೋರಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆಯ ಪ್ರಮುಖ ಕಾಮಗಾರಿಗಳು

*ಟಿ.ಕೆ.ಹಳ್ಳಿಯಲ್ಲಿ 775 ಎಂಎಲ್‌ಡಿ ನೀರು ಸಂಸ್ಕರಣಾ ಘಟಕ ಮತ್ತು ಪಂಪಿಂಗ್‌ ಸ್ಟೇಷನ್ ನಿರ್ಮಿಸಲಾಗುತ್ತಿದ್ದು, ಇದುವರೆಗೆ₹185.07 ಕೋಟಿ ವೆಚ್ಚ

*ಹಾರೋಹಳ್ಳಿ, ತಾತಗುಣಿಯಲ್ಲೂ ಪಂಪಿಂಗ್‌ ಸ್ಟೇಷನ್‌ಗಳ ನಿರ್ಮಾಣ. ಇದುವರೆಗೆ ₹52.61 ಕೋಟಿ ವೆಚ್ಚ.

*ಟಿ.ಕೆ.ಹಳ್ಳಿಯಿಂದ ಹಾರೋಹಳ್ಳಿವರೆಗೆ 43.5 ಕಿ.ಮೀ. ಉದ್ದದ ನೀರು ಪೂರೈಕೆ ಮಾರ್ಗ ಕಲ್ಪಿಸಲಾಗುತ್ತಿದ್ದು, ಇದುವರೆಗೆ ₹513.73 ಕೋಟಿ ವೆಚ್ಚ ಮಾಡಲಾಗಿದೆ. ಇಲ್ಲಿಯವರೆಗೆ 27.55 ಕಿ.ಮೀ. ಪೈಪ್‌ಲೈನ್‌ ಅಳವಡಿಸಲಾಗಿದೆ.

*ಹಾರೋಹಳ್ಳಿಯಿಂದ ವಾಜರಹಳ್ಳಿವರೆಗಿನ 25.5 ಕಿ.ಮೀ. ಉದ್ದದ ನೀರು ಪೂರೈಕೆ ಮಾರ್ಗಕ್ಕೆ ಇದುವರೆಗೆ ₹229.58 ಕೋಟಿ ವೆಚ್ಚ ಮಾಡಲಾಗಿದೆ. ಇಲ್ಲಿಯವರೆಗೆ 11.40 ಕಿ.ಮೀ. ಪೈಪ್‌ಲೈನ್‌ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT