ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್ ಬೆಂಗಳೂರು: ಕಣ್ಮರೆಯಾಗುತ್ತಿವೆ ಕಾಯ್ದಿಟ್ಟ ಜಮೀನುಗಳು

ಮುಫತ್‌ ಕಾವಲ್‌ ಜಮೀನಿಗೆ ತರಾತುರಿಯಲ್ಲಿ ದಾಖಲೆ ಪತ್ರ l ಕಂದಾಯ ಅಧಿಕಾರಿಗಳ ಕೈಚಳಕ
Last Updated 21 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾಯ್ದಿಟ್ಟ ಜಮೀನುಗಳನ್ನು ಸರ್ಕಾರ ಒಂದೊಂದಾಗಿ ಕಳೆದುಕೊಳ್ಳುತ್ತಿದೆ. ಸಾರ್ವಜನಿಕ ಉದ್ದೇಶಗಳ ಬಳಕೆ‌ಗಾಗಿ ಸರ್ಕಾರಿ ಜಮೀನು ಲಭ್ಯವಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಭೂಮಂಜೂರಾತಿಯ ಕುರಿತ ಸಮಂಜಸ ದಾಖಲಾತಿಗಳು ಇಲ್ಲದಿದ್ದರೂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೆ ನಂಬರ್‌ 63ರಲ್ಲಿರುವ ಮುಫತ್‌ ಕಾವಲ್‌ ಜಮೀನಿಗೆ ಸೂಕ್ತ ದಾಖಲೆ ಪತ್ರ ಮಾಡಿಕೊಟ್ಟಿರುವ ಆರೋಪ ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ.

ಹುಳಿಮಾವು ಗ್ರಾಮದ ಸರ್ವೇ ನಂಬರ್‌ 63ರಲ್ಲಿ 12 ಎಕರೆ 10 ಗುಂಟೆಗಳಷ್ಟು ಮುಫತ್‌ ಕಾವಲ್‌ ಜಮೀನು ಇದೆ. ಸರ್ಕಾರದ ಆದೇಶವಿಲ್ಲದೇ ಖಾಸಗಿಯವರಿಗೆ ಮುಫತ್‌ ಕಾವಲ್‌ ಜಮೀನು ಮಂಜೂರು ಮಾಡುವಂತಿಲ್ಲ. ಆದರೆ, ಮಂಜೂರಾತಿಗೆ ಸಂಬಂಧಿಸಿದ ದಾಖಲೆಗಳೇ ಇಲ್ಲದಿದ್ದರೂ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಯಾಗಿದ್ದ ಎಂ.ಜಿ.ಶಿವಣ್ಣ ಅವರು ಪಹಣಿ ಕಾಲಂ 9ರಲ್ಲಿ 1 ಎಕರೆ 20 ಗುಂಟೆ ಜಮೀನನ್ನು ತೋಟಿ ಯಲ್ಲಪ್ಪ ಬಿನ್‌ ವೆಂಕಟಪ್ಪ ಅವರ ಹೆಸರಿಗೆ ನಮೂದಿಸುವಂತೆ ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ ಅವರಿಗೆ ಸೂಚಿಸಿ 2021ರ ಮಾ 18ರಂದು ಆದೇಶ ಮಾಡಿದ್ದಾರೆ. ನಿಯಮಬಾಹಿರವಾಗಿ ಜಾಗ ಮಂಜೂರು ಮಾಡಿದ ಶಿವಣ್ಣ ವಿರುದ್ಧ ಕಂದಾಯ ಇಲಾಖೆ ಇಲ್ಲಿಯವರೆಗೆ ಯಾವುದೇ ಶಿಸ್ತುಕ್ರಮ ಕೈಗೊಂಡಿಲ್ಲ. ಅವರನ್ನು ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಯಾಗಿ ಇತ್ತೀಚೆಗೆ ವರ್ಗಾವಣೆ ಮಾಡಿದೆ.

ಈ ಪ್ರದೇಶದಲ್ಲಿ ಪ್ರತಿ ಚದರ ಅಡಿಗೆ ₹ 24 ಸಾವಿರದಷ್ಟು ದರ ಇದೆ. 1 ಎಕರೆ 20 ಗುಂಟೆ ಜಾಗವು ₹ 150 ಕೋಟಿಗೂ ಅಧಿಕ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಮುಫತ್‌ ಕಾವಲ್‌ ಜಮೀನು ಕೂಡಾ ಗೋಮಾಳದಂತೆಯೇ ಕಾಯ್ದಿಟ್ಟ ಜಮೀನು. ಇದನ್ನು ಬೇಕಾಬಿಟ್ಟಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗದು ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಮುಫತ್‌ ಕಾವಲ್‌ ಜಮೀನು ತೋಟಿ ಯಲ್ಲಪ್ಪ ಅವರಿಗೆ 1957ರ ಜೂನ್‌ 27ರಂದು ಮಂಜೂರಾಗಿತ್ತು. ಅದನ್ನು ಪಹಣಿಯಲ್ಲಿ ದಾಖಲಿಸುವಂತೆ ಆದೇಶ ಕೋರಿ ಬೆಂಗಳೂರು ದಕ್ಷಿಣ ವಿಶೇಷ ತಹಶೀಲ್ದಾರ್‌ ಅವರು 2021ರ ಫೆ.10ರಂದು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ದಾಖಲೆ ರೂಪದಲ್ಲಿ ಕೈಬರಹದ ಪಹಣಿಯ ದೃಢೀಕೃತ ದಾಖಲೆ, ದರಖಾಸ್ತು ಕಡತದ ಪ್ರತಿ, ಎಂ.ಆರ್‌.ನ ಜೆರಾಕ್ಸ್‌ ದಾಖಲೆಗಳನ್ನು ಒದಗಿಸಿದ್ದರು. ಇದನ್ನು 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 136 (2) ಅಡಿ ಮೇಲ್ಮನವಿ ಪ್ರಕರಣ ಎಂದು ಪರಿಗಣಿಸಿ ಉಪವಿಭಾಗಾಧಿಕಾರಿಯವರು ವಿಚಾರಣೆ ನಡೆಸಿದ್ದರು.

ಹುಳಿಮಾವು ಗ್ರಾಮದ ಸರ್ವೆ ನಂಬರ್‌ 63ರ 1ಎಕರೆ 20 ಗುಂಟೆ ಜಮೀನಿಗೆ 1995ರ ಮಾ 07ರಂದು ಕಂದಾಯ ಕಟ್ಟಿದ ಪಟ್ಟಾ ಪುಸ್ತಕವನ್ನು ಹಾಜರುಪಡಿಸಲಾಗಿದೆ. ದರಖಾಸ್ತು ಕಡತದಲ್ಲಿ ಹಾಗೂ ಎಂ.ಆರ್‌.ನಲ್ಲಿ ತೋಟಿ ಯಲ್ಲಪ್ಪ ಅವರಿಗೆ 1 ಎಕರೆ 20 ಗುಂಟೆ ಜಮೀನು ಮಂಜೂರಾಗಿರುವುದು ಕಂಡುಬಂದಿದೆ. ಆದರೆ, ಕೈಬರಹದ ಪಹಣಿಯಲ್ಲಿ ಎಂ.ಆರ್‌.ಸಂಖ್ಯೆಯನ್ನು ದಾಖಲಿಸದೆ ಮಂಜೂರಾದವರ ಹೆಸರನ್ನು ಮಾತ್ರ ದಾಖಲಿಸಲಾಗಿತ್ತು.

2020–21ನೇ ಸಾಲಿನ ಪಹಣಿ ದಾಖಲೆ ಪ್ರಕಾರ ಹುಳಿಮಾವು ಗ್ರಾಮದ ಸರ್ವೆ ನಂಬರ್‌ 63ರಲ್ಲಿ 12 ಎಕರೆ ಜಮೀನಿನಲ್ಲಿ 8 ಎಕರೆ ಮಾತ್ರ ಮುಫತ್‌ ಕಾವಲ್‌ ಜಮೀನು ಉಳಿದಿದೆ. ಇಲ್ಲಿ ಸುಶೀಲ ಎನ್‌.ರೆಡ್ಡಿ ಅವರಿಗೆ 3 ಎಕರೆ 13 ಗುಂಟೆ ಮತ್ತು ಬಿಲ್ಲವ ಅಸೋಸಿಯೇಷನ್‌ಗೆ 1 ಎಕರೆ ಜಮೀನು ಮಂಜೂರಾಗಿದೆ. 20 ಗುಂಟೆ ಜಮೀನು ರಸ್ತೆಗಾಗಿ ಜಿಲ್ಲಾಧಿಕಾರಿಯವರು ಕಾಯ್ದಿರಿಸಿರುವುದು ಪಹಣಿಯ ಕಾಲಂ 11ರಲ್ಲಿ ನಮೂದಾಗಿದೆ. 8 ಎಕರೆ ಮುಫತ್‌ ಕಾವಲ್‌ ಜಮೀನಿನಲ್ಲಿ 1 ಎಕರೆ 20 ಗುಂಟೆ ಜಮೀನನ್ನು ತೋಟಿ ಯಲ್ಲಪ್ಪ ಅವರ ಹೆಸರಿಗೆ ಪಹಣಿಯ ಕಾಲಂ 9ರಲ್ಲಿ ಉಲ್ಲೇಖಿಸುವುದು ಸೂಕ್ತ ಎಂದು ಆದೇಶದಲ್ಲಿ ಉಪವಿಭಾಗಾಧಿಕಾರಿಯವರು ತಿಳಿಸಿದ್ದರು.

ಸರ್ಕಾರಿ ಭೂಮಿ ಒತ್ತುವರಿ ಪತ್ತೆಗಾಗಿ ರಚಿಸಲಾಗಿರುವ ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದ ಸಮಿತಿಯ ಸಭೆಯಲ್ಲಿ ಈ ಅಕ್ರಮದ ಬಗ್ಗೆ ಪ್ರಸ್ತಾಪವಾಗಿದೆ. ‘ಭೂ ಮಂಜೂರಾತಿ ಬಗ್ಗೆ ಸಮರ್ಪಕ ದಾಖಲೆಗಳು ಇಲ್ಲದಿದ್ದರೂ, ಖಾಸಗಿ ವ್ಯಕ್ತಿಯ ಹೆಸರಿಗೆ 2021ರಲ್ಲಿ ಖಾತೆ ಮಾಡಲಾಗಿದೆ. ಆ ವ್ಯಕ್ತಿ 1997ರಲ್ಲೇ ಮೃತಪಟ್ಟಿದ್ದಾರೆ. ಹಾಗಿದ್ದರೂ, ಅವರ ಹೆಸರಿಗೆ ಮಂಜೂರು ಮಾಡಿದ್ದು ಹೇಗೆ’ ಎಂದು ಸಮಿತಿಯ ಸದಸ್ಯರು ಕಂದಾಯ ಇಲಾಖೆಯ ಪ್ರಶ್ನಿಸಿದ್ದಾರೆ.

ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಪ್ರಕರಣದ ಬಗ್ಗೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಅವರಿಂದ ವರದಿ ಕೇಳಿದ್ದರು. ಮೂಲಮಂಜೂರಾತಿ ದಾಖಲೆಗಳು ಹಾಗೂ ಖಾತೆ ಮಾಡಿರುವ ಆದೇಶ ಪ್ರತಿಗಳನ್ನು ಒಳಗೊಂಡ ಕಡತದ ಜೊತೆ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದ್ದರು.

‘ಹುಳಿಮಾವು ಗ್ರಾಮದ ಸರ್ವೇ ನಂಬರ್‌ 63ರಲ್ಲಿ ತೋಟಿ ಯಲ್ಲಪ್ಪ ಅವರಿಗೆ ಜಾಗ ಮಂಜೂರಾದ ದಾಖಲೆಗಳನ್ನು ಪರಿಶೀಲಿಸಲಾಗಿದೆ. 1983–84ರಿಂದ 1987–88 ಮತ್ತು 1994–95ನೇ ಸಾಲಿನವರೆಗೆ ಕೈಬರಹದ ಪಹಣಿಗಳು ಲಭ್ಯ ಇವೆ. ಬೇರೆ ಯಾವುದೇ ಮಂಜೂರಿ ದಾಖಲೆಗಳು ಲಭ್ಯ ಇಲ್ಲ’ ಎಂದು ಜಿಲ್ಲಾಧಿಕಾರಿಯವರು ವರದಿಯಲ್ಲಿ ತಿಳಿಸಿದ್ದಾರೆ.

ಎ.ಟಿ.ರಾಮಸ್ವಾಮಿ
ಎ.ಟಿ.ರಾಮಸ್ವಾಮಿ

‘ನಕಲಿ ದಾಖಲೆ ಸೃಷ್ಟಿಸಿ ಭೂ ಅಕ್ರಮ’

‘ನಕಲಿ ದಾಖಲೆ ಸೃಷ್ಟಿಸಿ ಈ ಭೂ ಅಕ್ರಮ ನಡೆಸಲಾಗಿದೆ. ಉಪವಿಭಾಗಾಧಿಕಾರಿಯವರು ನಿಯಮಬಾಹಿರವಾಗಿ ಜಾಗ ಪರಭಾರೆ ಮಾಡಿದ್ದಾರೆ. ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ, ಇಂತಹ ಅಕ್ರಮಗಳನ್ನು ನಡೆಸಲು ಇನ್ನಷ್ಟು ಉತ್ತೇಜನ ನೀಡಿದಂತೆ ಆಗುತ್ತಿದೆ’ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.

‘24 ವರ್ಷಗಳ ಹಿಂದೆ ಮೃತಪಟ್ಟ ಹೆಸರಿಗೆ ಜಾಗ ಮಂಜೂರು ಮಾಡಲಾಗಿದೆ. ಕೈಬರಹದ ಪಹಣಿಯ ನೈಜತೆ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲನೆ ಮಾಡಿಸಬೇಕಿತ್ತು. ಅದು ಬಿಟ್ಟು ತರಾತುರಿಯಲ್ಲಿ ಆದೇಶ ಹೊರಡಿಸುವ ಅಗತ್ಯ ಏನಿತ್ತು’ ಎಂದು ಅವರು ಪ್ರಶ್ನಿಸಿದರು.

ಜಮೀನಿನ ಪ್ರಸ್ತುತ ಸ್ಥಿತಿ

ಹುಳಿಮಾವು ಗ್ರಾಮದ ಸರ್ವೆ ನಂಬರ್‌ 63ರಲ್ಲಿ 5 ಎಕರೆ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದು ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ವರದಿಯಲ್ಲಿ ತಿಳಿಸಲಾಗಿತ್ತು. ಇದರಲ್ಲಿ ಬ್ಲಾಕ್‌–1ರಲ್ಲಿ 3 ಎಕರೆ 22 ಗುಂಟೆ, ಬ್ಲಾಕ್‌–2ರಲ್ಲಿ 22 ಗುಂಟೆ, ಜುಮ್ಲಾ 4 ಎಕರೆ 04 ಗುಂಟೆ, ಸರ್ವೆ ನಂಬರ್‌ 49ರ ಮುಫತ್‌ ಕಾವಲ್‌ನಲ್ಲಿ ಈ ಹಿಂದೆ ಇಸ್ಲಾಮಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅವರು ಒತ್ತುವರಿ ಮಾಡಿಕೊಂಡಿದ್ದರು. ಅದನ್ನು ತೆರವುಗೊಳಿಸಲಾಗಿತ್ತು. ಈ ಪ್ರದೇಶ ಈಗ ಖಾಲಿ ಇದ್ದು, ಸರ್ಕಾರದ ಸುಪರ್ದಿಯಲ್ಲಿದೆ ಎಂದು ಜಿಲ್ಲಾಧಿಕಾರಿಯವರು ಪತ್ರದಲ್ಲಿ ತಿಳಿಸಿದ್ದಾರೆ.

ಮೋಜಣಿದಾರರು ಸಲ್ಲಿಸಿರುವ ನಕ್ಷೆ ಪ್ರಕಾರ ಬ್ಲಾಕ್‌ 3ರಲ್ಲಿ 15 ಗುಂಟೆ, ಸರ್ವೆ ನಂಬರ್‌ 63ರಲ್ಲಿ 4 ಎಕರೆ 4 ಗುಂಟೆ, ಸರ್ವೆ ನಂಬರ್ 49ರಲ್ಲಿ 15 ಗುಂಟೆ ಸೇರಿ ಒಟ್ಟು 4 ಎಕರೆ 19 ಗುಂಟೆ ಜಮೀನನ್ನು ರಾಜ್ಯ ಗುಪ್ತವಾರ್ತೆ ಘಟಕದ ತರಬೇತಿ ಅಕಾಡೆಮಿ ಸ್ಥಾಪನೆಗೆ ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

36 ದಿನಗಳಲ್ಲೇ ವಿಚಾರಣೆ ಪೂರ್ಣ!

ತೋಟಿ ಯಲ್ಲಪ್ಪ ಅವರ ಹೆಸರನ್ನು ಪಹಣಿಯಲ್ಲಿ ದಾಖಲಿಸುವಂತೆ ಆದೇಶ ಕೋರಿ ಬೆಂಗಳೂರು ದಕ್ಷಿಣ ವಿಶೇಷ ತಹಶೀಲ್ದಾರ್‌ ಅವರು 2021ರ ಫೆ.10ರಂದು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 136 (2) ಅಡಿ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿಯವರು 2021ರ ಮಾರ್ಚ್‌ 18ರಂದು ಈ ಕುರಿತ ಆದೇಶ ನೀಡಿದ್ದಾರೆ. ಈ ಸೆಕ್ಷನ್‌ ಅಡಿಯ ಪ್ರಕರಣಗಳ ವಿಚಾರಣೆ ವರ್ಷಾನುಗಟ್ಟಲೆ ಮುಂದುವರಿಯುವುದೂ ಇದೆ. ಆದರೆ, ಈ ಪ್ರಕರಣದಲ್ಲಿ ಕೇವಲ 36 ದಿನಗಳಲ್ಲೇ ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನೂ ನೀಡಲಾಗಿದೆ! ಕಲಂ 136 ಅಡಿ ವಿಚಾರಣೆ ನಡೆಸುವುದು ಅಧಿಕಾರ ಇರುವುದು ವಿಶೇಷ ಜಿಲ್ಲಾಧಿಕಾರಿ ಅವರಿಗೆ. ಈ ಪ್ರಕರಣದಲ್ಲಿ ಉಪವಿಭಾಗಾಧಿಕಾರಿಯವರೇ ವಿಚಾರಣೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

64 ವರ್ಷಗಳ ಬಳಿಕ ನೋಂದಣಿ!

ಉಪವಿಭಾಗಾಧಿಕಾರಿ ಅವರು ಭೂದಾಖಲೆ ಮಾಡಿಸಿಕೊಡಲು ಪರಿಗಣಿಸಿದ ದಾಖಲೆಗಳ ಪ್ರಕಾರ ಈ ಮುಫತ್‌ ಕಾವಲ್‌ ಜಮೀನು ತೋಟಿ ಯಲ್ಲಪ್ಪ ಅವರಿಗೆ ಮಂಜೂರಾಗಿದ್ದು 1957ರ ಜೂನ್‌ 27ರಂದು. ಆದರೆ, ಈ ಬಗ್ಗೆ ಪಹಣಿ ದಾಖಲೆಗಳಲ್ಲಿ ಅವರ ಹೆಸರು ನಮೂದಿಸುವ ಪ್ರಕ್ರಿಯೆ 64 ವರ್ಷಗಳ ಬಳಿಕ ನಡೆದಿದೆ.

ನಡೆಯದ ಗಡಿ ಗುರುತು ಸರ್ವೆ

ಹುಳಿಮಾವು ಗ್ರಾಮದ ಸರ್ವೆ ನಂಬರ್‌ 63ರ ಗಡಿ ಕುರುಹುಗಳು ಇಲ್ಲದ ಕಾರಣ ಇಲ್ಲಿ ಜಮೀನು ಒತ್ತುವರಿಯಾಗಿದೆ. ಈ ಬಗ್ಗೆ ಅಳತೆ ಮಾಡಿ ವರದಿ ನೀಡುವಂತೆ ತಹಶೀಲ್ದಾರ್‌ ಅವರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ 2021ರ ಡಿ. 16ರಂದು, 2022ರ ಜ.4ರಂದು ಹಾಗೂ ಜ.13ರಂದು ಪತ್ರ ಬರೆದಿದ್ದರು. ಆದರೆ, ಇನ್ನೂ ಮೋಜಣಿ ನಡೆದಿಲ್ಲ. ತಕ್ಷಣವೇ ಅಳೆತ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT