ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಣ್ಯ ಮೇಲ್ಸೇತುವೆ ಫಜೀತಿ: ತಪ್ಪದ ಗೋಳು

102-–103ನೇ ಪಿಲ್ಲರ್ ನಡುವೆ ಬಾಗಿರುವ ಕೇಬಲ್ l ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ
Last Updated 4 ಜುಲೈ 2022, 19:26 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ತುಮಕೂರು ರಸ್ತೆಯಲ್ಲಿರುವ ಪೀಣ್ಯ ಮೇಲ್ಸೇತುವೆಯಲ್ಲಿ (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಿ 6 ತಿಂಗಳಾಗಿದ್ದು, ಸರ್ವೀಸ್ ರಸ್ತೆ ಹಾಗೂ ಕೆಳ ರಸ್ತೆಯಲ್ಲಷ್ಟೇ ಅವು ಸಂಚರಿಸು ತ್ತಿರುವುದರಿಂದ ವಿಪರೀತ ದಟ್ಟಣೆಯಲ್ಲಿ ಸಿಲುಕಿ ಜನ ನಿತ್ಯ ಪರದಾಡುತ್ತಿದ್ದಾರೆ.

ಕೆನ್ನಮೆಟಲ್ ಜಂಕ್ಷನ್‌ನಿಂದ (ವಿಡಿಯಾ ವೃತ್ತ) ಗೊರಗುಂಟೆಪಾಳ್ಯ ವೃತ್ತದವರೆಗೆ 2010ರಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದ್ದು, ತುಮಕೂರು ರಸ್ತೆ ಹಾಗೂ ಹಾಸನ ರಸ್ತೆ ಮೂಲಕ 25ಕ್ಕೂ ಹೆಚ್ಚು ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ವಾಹನಗಳು ದಟ್ಟಣೆ ಸಮಸ್ಯೆಯಿಲ್ಲದೇ ಬೆಂಗಳೂರು ಪ್ರವೇಶಿಸುತ್ತಿದ್ದವು.

ನಾಗಸಂದ್ರ, ದಾಸರಹಳ್ಳಿ, 8ನೇ ಮೈಲಿ, ಜಾಲಹಳ್ಳಿ ವೃತ್ತ, ಪೀಣ್ಯ ಪೊಲೀಸ್ ಠಾಣೆ ವೃತ್ತ, ಎಸ್‌ಆರ್‌ಎಸ್ ಜಂಕ್ಷನ್‌ ವೃತ್ತದಲ್ಲಿ ವಿಪರೀತವಾಗಿದ್ದ ದಟ್ಟಣೆಗೂ ಮೇಲ್ಸೇತುವೆ ಪರಿಹಾರವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಮೂಲಕ ನಗರಕ್ಕೆ ಬರುವ ವಾಹನಗಳು ಮೇಲ್ಸೇತುವೆ ಮೂಲಕ ಸರಾಗವಾಗಿ ಗೊರಗುಂಟೆಪಾಳ್ಯಕ್ಕೆ ಬಂದು ಯಶವಂತಪುರ ಹಾಗೂ ರಾಜ್‌ಕುಮಾರ್ ಸಮಾಧಿ ರಸ್ತೆ (ಹೊರ ವರ್ತುಲ ರಸ್ತೆ), ಪಶ್ಚಿಮ ಕಾರ್ಡ್‌ ರಸ್ತೆ ಮೂಲಕ ನಿಗದಿತ ಸ್ಥಳಗಳಿಗೆ ಹೋಗುತ್ತಿದ್ದವು. ಅಂದಾಜಿನ ಪ್ರಕಾರ ನಿತ್ಯವೂ ಲಕ್ಷಕ್ಕೂ ಹೆಚ್ಚು ವಾಹನಗಳು ಮೇಲ್ಸೇತುವೆಯಲ್ಲಿ ಸಂಚರಿಸುತ್ತಿದ್ದವು.

‘ತುಮಕೂರು ರಸ್ತೆಯಲ್ಲಿ ಸಂಚಾರ ಸುಗಮವಾಗಿದೆ’ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದ ಸಮಯದಲ್ಲೇ 2022ರ ಜನವರಿಯಲ್ಲಿ ಮೇಲ್ಸೇತುವೆಯ 102–103ನೇ ಪಿಲ್ಲರ್ ಮಧ್ಯದಲ್ಲಿ ಕೇಬಲ್‌ಗಳು ಬಾಗಿ ಅಪಾಯದ ಮುನ್ಸೂಚನೆ ಸಿಕ್ಕಿತ್ತು. ಇದನ್ನು ಗಮನಿಸಿದ್ದ ಪೀಣ್ಯ ಸಂಚಾರ ಠಾಣೆ ಪೊಲೀಸರು, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಪತ್ರ ಬರೆದು ಎಚ್ಚರಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಎನ್‌ಎಚ್‌ಎಐ, ಮೇಲ್ಸೇತುವೆ ಪ್ರವೇಶವನ್ನು ಬಂದ್ ಮಾಡಿ, ಎಲ್ಲ ಪ್ರಕಾರದ ವಾಹನಗಳ ಸಂಚಾರವನ್ನು ನಿರ್ಬಂಧಿಸಿತ್ತು.

ಕಾರು, ದ್ವಿಚಕ್ರ ವಾಹನ, ಲಘು ಹಾಗೂ ಭಾರಿ ವಾಹನಗಳು ಮೇಲ್ಸೇತುವೆ ಬದಲು, ಸರ್ವೀಸ್ ರಸ್ತೆ ಹಾಗೂ ಕೆಳ ರಸ್ತೆಗಳಲ್ಲಿ ಸಂಚರಿಸಲಾರಂಭಿಸಿದ್ದವು. ಇದರಿಂದ ವಿಪರೀತ ದಟ್ಟಣೆ ಉಂಟಾಗಿ, ಕಿ.ಮೀ.ಗಟ್ಟಲೇ ವಾಹನಗಳು ನಿಂತಲೇ ನಿಲ್ಲಬೇಕಾಗಿತ್ತು. ಸ್ಥಳೀಯರಂತೂ ದಟ್ಟಣೆಯಿಂದ ಬೇಸತ್ತು, ಪೊಲೀಸ್ ಇಲಾಖೆ ಹಾಗೂ ಎನ್‌ಎಚ್‌ಎಐಗೆ ದೂರು ನೀಡಿ ಆಕ್ರೋಶ ಹೊರಹಾಕಿದ್ದರು. ತಜ್ಞರಿಂದ ಪರಿಶೀಲನೆ ನಡೆಸಿದ್ದ ಎನ್‌ಎಚ್‌ಎಐ, ಕಾರು, ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳಿಗೆ ಮೇಲ್ಸೇತುವೆಯಲ್ಲಿ ಸಂಚರಿಸಲು ಎರಡು ತಿಂಗಳ ಹಿಂದೆಯೇ ಅನುಮತಿ ನೀಡಿತ್ತು. ಆದರೆ, ಭಾರಿ ವಾಹನಗಳ (ಮಲ್ಟಿ ಆ್ಯಕ್ಸಲ್–ಆರ್ಟಿಕ್ಯುಲೇಟೆಡ್ ವಾಹನಗಳು, ಟ್ರಕ್‌–ಲಾರಿಗಳು, ಬಸ್‌ಗಳು) ಸಂಚಾರಕ್ಕೆ ಇದುವರೆಗೂ ಒಪ್ಪಿಗೆ ಸಿಕ್ಕಿಲ್ಲ.

ಭಾರಿ ವಾಹನಗಳೇ ಹೆಚ್ಚು: ‘ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ನಗರಕ್ಕೆ ಬರುವ ವಾಹನಗಳ ಪೈಕಿ, ಭಾರಿ ವಾಹನಗಳ ಸಂಖ್ಯೆಯೇ ಹೆಚ್ಚಿರುತ್ತದೆ. ಅದರಲ್ಲೂ ತುಮಕೂರು ರಸ್ತೆ ಮೂಲಕವೇ ಭಾರಿ ವಾಹನಗಳು ನಗರ ಪ್ರವೇಶಿಸುತ್ತಿವೆ. ಇಂಥ ವಾಹನಗಳು ಸರ್ವೀಸ್ ರಸ್ತೆ ಹಾಗೂ ಕೆಳ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮೇಲ್ಸೇತುವೆಯಲ್ಲಿರುವ ಸಮಸ್ಯೆ ಸರಿಪಡಿಸಿ, ಎಲ್ಲ ಪ್ರಕಾರದ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವಂತೆ ನಿರಂತರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳನ್ನು ಕೋರಲಾಗುತ್ತಿದೆ. ಆದರೆ, ಅವರಿಂದ ತ್ವರಿತ ಭರವಸೆ ಸಿಗುತ್ತಿಲ್ಲ. ಪರಿಶೀಲನೆ ಹೆಸರಿನಲ್ಲೇ 6 ತಿಂಗಳು ಕಳೆಯಿತು’ ಎಂದು ತಿಳಿಸಿದರು.

ತ್ರಿಸದಸ್ಯ ಸಮಿತಿಯಿಂದ ಪರಿಶೀಲನೆ: ‘ಮೇಲ್ಸೇತುವೆ ಸದೃಢತೆ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿದ್ದು, ಇದರ ಆಧಾರದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದೆ’ ಎಂದು ಎನ್‌ಎಚ್‌ಎಐ ಅಧಿಕಾರಿಯೊಬ್ಬರು ಹೇಳಿದರು.

‘ತಜ್ಞರಾದ ಚಂದ್ರಕಿಶನ್, ಮಹೇಶ್ ಟಂಡನ್ ಹಾಗೂ ಡಾ. ಶರ್ಮಾ ಅವರು ತ್ರಿಸದಸ್ಯ ಸಮಿತಿಯಲ್ಲಿದ್ದಾರೆ. ಮೇಲ್ಸೇತುವೆಯಲ್ಲಿ ಈಗಾಗಲೇ ಪರಿಶೀಲನೆ ನಡೆಸಿರುವ ತಂಡ, ಜುಲೈ 15ರಂದು ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ. ವರದಿ ಆಧರಿಸಿ, ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಕಬ್ಬಿಣದ ಕಮಾನಿಗೆ ಡಿಕ್ಕಿ: 10 ವಾಹನಗಳ ವಿರುದ್ಧ ಎಫ್‌ಐಆರ್’

‘ಭಾರಿ ವಾಹನಗಳ ಸಂಚಾರ ತಡೆಯಲು ಮೇಲ್ಸೇತುವೆ ಪ್ರವೇಶದಲ್ಲಿ ಕಬ್ಬಿಣದ ತಾತ್ಕಾಲಿಕ ಕಮಾನು ನಿರ್ಮಿಸಲಾಗಿದೆ. ಇಂಥ ಕಮಾನಿಗೆ ವಾಹನಗಳು ಡಿಕ್ಕಿ ಹೊಡೆಯುತ್ತಿದ್ದು,ಚಾಲಕರ ವಿರುದ್ಧ ಇದುವರೆಗೂ 10 ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೀಣ್ಯ ಸಂಚಾರ ಪೊಲೀಸರು ಹೇಳಿದರು.

‘ನಿರ್ಬಂಧವಿದ್ದರೂ ಕೆಲ ಚಾಲಕರು ಮೇಲ್ಸೇತುವೆಯಲ್ಲಿ ಸಂಚರಿಸಲು ಮುಂದಾಗುತ್ತಿದ್ದಾರೆ. ಕಬ್ಬಿಣದ ಕಮಾನಿಗೆ ಡಿಕ್ಕಿ ಹೊಡೆದು ಬೀಳುವಂತೆ ಮಾಡಿ, ವಾಹನಗಳನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾರೆ. ಇಂಥ ವರ್ತನೆಯಿಂದ ಪದೇ ಪದೇ ಕಮಾನಿನ ದುರಸ್ತಿ ಕೆಲಸ ನಡೆಯುತ್ತಿದೆ. ಆದರೆ, ಇತ್ತೀಚೆಗೆ ಮೇಲ್ಸೇತುವೆ ಪ್ರವೇಶದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರೇ ಭಾರಿ ವಾಹನಗಳು ಮೇಲ್ಸೇತುವೆಯಲ್ಲಿ ಸಂಚರಿಸದಂತೆ ತಡೆಯುತ್ತಿದ್ದಾರೆ’ ಎಂದು ತಿಳಿಸಿದರು.

‘ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ನಿತ್ಯವೂ ದಟ್ಟಣೆ ಉಂಟಾಗುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ ಬಿಳಿ ಸಮವಸ್ತ್ರವೆಲ್ಲ ಕಪ್ಪು ಬಣ್ಣದಿಂದ ಗಲೀಜಾಗುತ್ತಿದೆ’ ಎಂದೂ ಅಳಲು ತೋಡಿಕೊಂಡರು.

‘ದಟ್ಟಣೆ ಕಿರಿಕಿರಿ ತಪ್ಪಿಸಿ’

ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ಬಂದ್ ಆದಾಗಿನಿಂದ ಕೆಳ ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಸ್ಥಳೀಯರು ಕಿರಿಕಿರಿ ಅನುಭವಿಸುತ್ತಿದ್ದು, ಈ ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು.

- ಲಕ್ಷ್ಮೀನಾರಾಯಣ,ನಾಗಸಂದ್ರ ವಿಕಾಸನಗರ ನಿವಾಸಿ

‘ಐಕಿಯಾ ಮಳಿಗೆಯಿಂದಲೂ ದಟ್ಟಣೆ’

ನಾಗಸಂದ್ರ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡ ಜಾಗದಲ್ಲಿ ‘ಐಕಿಯಾ’ ಪೀಠೋಪಕರಣ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟದ ಬೃಹತ್ ಮಳಿಗೆ ಇದೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಮಳಿಗೆಗೆ ಸಾರ್ವಜನಿಕರು ಬಂದು ಹೋಗುತ್ತಿದ್ದು, ಇದರಿಂದಾಗಿ ನಾಗಸಂದ್ರ ಹಾಗೂ ಸುತ್ತಮುತ್ತ ಸ್ಥಳದಲ್ಲಿ ದಟ್ಟಣೆ ಉಂಟಾಗುತ್ತಿದೆ.

‘ಐಕಿಯಾ ಮಳಿಗೆ ಎದುರಿನ ರಸ್ತೆಯಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿರುತ್ತದೆ. ಇದೇ ರಸ್ತೆಯಲ್ಲೇ ಭಾರಿ ವಾಹನಗಳು ಸಂಚರಿಸುತ್ತಿವೆ. ಕೆಲ ವಾಹನಗಳು ಅಡ್ಡಾದಿಡ್ಡಿ ಓಡಾಡುತ್ತಿವೆ. ಇದರಿಂದಾಗಿ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ, ದಟ್ಟಣೆ ಕಂಡುಬರುತ್ತಿದೆ’ ಎಂದು ಸ್ಥಳೀಯ ನಿವಾಸಿಗಳು ದೂರಿದರು.

‘ಪತ್ರ ಬರೆದರೂ ಸಮಸ್ಯೆ ಬಗೆಹರಿಸದ ಸರ್ಕಾರ’

‘ಪೀಣ್ಯ ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ನಿರ್ಬಂಧದಿಂದ ಸ್ಥಳೀಯರಿಗೆ ಹೆಚ್ಚು ತೊಂದರೆಯಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದರೂ, ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಆರ್. ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

‘ಸಾಮಾನ್ಯ ದಿನಗಳಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ. ವಾರಾಂತ್ಯದಲ್ಲಂತೂ ಕಿ.ಮೀ.ಗಟ್ಟಲೇ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಿವೆ. ಆರು ತಿಂಗಳಿನಿಂದ ಸ್ಥಳೀಯರು ರೋಸಿಹೋಗಿದ್ದಾರೆ. ಇದರ ನಡುವೆಯೇ ಐಕಿಯಾ ಮಳಿಗೆ ಆರಂಭಗೊಂಡಿದ್ದು, ದಟ್ಟಣೆ ಮತ್ತಷ್ಟು ಹೆಚ್ಚಿದೆ. ಸಮಸ್ಯೆ ಬಗೆಹರಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಮುಖ್ಯಮಂತ್ರಿ, ಎನ್‌ಎಚ್‌ಎಐ ಅಧಿಕಾರಿಗಳು, ಕಮಿಷನರ್ ಹಾಗೂ ಇತರರಿಗೆ ಪತ್ರ ಬರೆಯಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT