ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್‌ ಬೆಂಗಳೂರು | ಕಂದಾಯ ಸಚಿವರ ಕ್ಷೇತ್ರದಲ್ಲೇ ಕೆರೆ ಕಣ್ಮರೆ

ಒತ್ತುವರಿ ತೆರವು– ಜಾಣ ಮರೆವು l ಸುತ್ತೋಲೆ ಹೊರಡಿಸಿ 8 ತಿಂಗಳ ಬಳಿಕವೂ ತೆರವಿಗೆ ಕ್ರಮ ಇಲ್ಲ l ಹೈಕೋರ್ಟ್‌ ಆದೇಶಕ್ಕೂ ಕಿಮ್ಮತ್ತಿಲ್ಲ
Last Updated 14 ಮಾರ್ಚ್ 2022, 21:46 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆ–ಕಾಲುವೆಗಳ ಜಾಗಗಳು ಭೂಗಳ್ಳರ ಪಾಲಾಗುತ್ತಿರುವ ಬಗ್ಗೆ ಹಸಿರು ನ್ಯಾಯಮಂಡಳಿ ಹಾಗೂ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದೆ. ಆದರೆ, ರಾಜ್ಯದ ಕಂದಾಯ ಸಚಿವ ಆರ್‌.ಅಶೋಕ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದಲ್ಲೇ ಈ ಸುತ್ತೋಲೆಯನ್ವಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯಲ್ಲಿರುವ ಚಿಕ್ಕಕಲ್ಲಸಂದ್ರ ಕೆರೆ 12 ಎಕರೆ 26 ಗುಂಟೆ ವಿಸ್ತೀರ್ಣವನ್ನು ಹೊಂದಿದೆ. ಒಂದು ಕಾಲದಲ್ಲಿ ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿದ್ದ ಕೆರೆ ಇದು. ಈಗ ಈ ಜಾಗಕ್ಕೆ ಭೇಟಿ ನೀಡಿದರೆ ಇಲ್ಲಿ ಕೆರೆ ಇತ್ತು ಎಂಬ ಸಣ್ಣ ಸುಳಿವು ಇಲ್ಲದ ರೀತಿ ಇದು ಒತ್ತುವರಿಯಾಗಿದೆ. ಈ ಕೆರೆ ಮಾತ್ರವಲ್ಲ, ಇದನ್ನು ಸಂಪರ್ಕಿಸುವ ರಾಜಕಾಲುವೆಗಳೂ ಒತ್ತುವರಿಯಾಗಿವೆ. ಕೆರೆಯ ಬಹುಪಾಲು ಒತ್ತುವರಿಯಾಗಿದ್ದರೂ, ಅದರ ತೆರವಿಗೆ ಜಾಣ ಮರೆವು ಪ್ರದರ್ಶಿಸಲಾಗುತ್ತಿದೆ. ಇಲ್ಲಿ ಕೆರೆ ಒತ್ತುವರಿ ಮಾಡಿರುವವರಲ್ಲಿ ಪ್ರಭಾವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಧಿಕಾರಿಗಳೂ ತೆರವು ಕಾರ್ಯಕ್ಕೆ ಕೈಹಾಕುವ ಧೈರ್ಯ ತೋರುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯ ನಿವಾಸಿಗಳು.

ಕೆರೆ ಇದ್ದ ಪ್ರದೇಶದಲ್ಲಿ ನರ್ಸರಿ, ದೇವಸ್ಥಾನ, ಮನೆಗಳು ಹಾಗೂ ಬಂಗಲೆಗಳು ನಿರ್ಮಾಣವಾಗಿವೆ. 12 ಎಕರೆ 26 ಗುಂಟೆ ವಿಸ್ತೀರ್ಣದ ಈ ಕೆರೆಯಲ್ಲಿ ಒಟ್ಟು 7 ಎಕರೆ 20 ಗುಂಟೆ ಜಮೀನು ಒತ್ತುವರಿಯಾಗಿದೆ. ಕಂದಾಯ ಇಲಾಖೆಯೇ ನಡೆಸಿರುವ ಸರ್ವೇ ಪ್ರಕಾರ ಇದರಲ್ಲಿ ಈಗ ಉಳಿದಿರುವ ಖಾಲಿ ಖುಲ್ಲಾ ಪ್ರದೇಶ 5 ಎಕರೆ 06 ಗುಂಟೆಗಳು ಮಾತ್ರ. ಅಚ್ಚರಿ ಎಂದರೆ, ಮನೆ ಹಾಗೂ ಇತರ ಕಟ್ಟಡ ನಿರ್ಮಾಣಕ್ಕಾಗಿ 4 ಎಕರೆ 27 ಗುಂಟೆಗಳಷ್ಟು ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಬಿಎಂಟಿಸಿ ಬಸ್‌ ನಿಲ್ದಾಣ ನಿರ್ಮಾಣವಾಗಿರುವುದು ಕೂಡಾ ಕೆರೆಯ ಜಾಗದಲ್ಲೇ ಎಂದು ಕಂದಾಯ ಇಲಾಖೆಯ ದಾಖಲೆಗಳು ದೃಢಪಡಿಸಿವೆ. ಬಿಬಿಎಂಪಿಯೂ ಇಲ್ಲಿ ಕೆರೆಯ ಜಾಗದಲ್ಲೇ ರಸ್ತೆಗಳನ್ನು ನಿರ್ಮಿಸಿದೆ.

ಕೆರೆ– ಕಾಲುವೆಗಳ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿ ಎಂಟು ತಿಂಗಳುಗಳೇ ಕಳೆದಿವೆ. ಚಿಕ್ಕಕಲ್ಲಸಂದ್ರ ಕೆರೆ ಒತ್ತುವರಿ ತೆರವುಗೊಳಿಸುವ ಯಾವುದೇ ಪ್ರಯತ್ನಗಳೂ ಆ ಬಳಿಕ ನಡೆದಿಲ್ಲ.

ಆದೇಶಕ್ಕೂ ಹೈಕೋರ್ಟ್‌ ಕಿಮ್ಮತ್ತಿಲ್ಲ: ಚಿಕ್ಕಕಲ್ಲಸಂದ್ರ ಕೆರೆಯ ಒತ್ತುವರಿ ತೆರವಿಗೆ ಕಂದಾಯ ಇಲಾಖೆ ನೋಟಿಸ್‌ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿಗಳನ್ನು (ನ.54377/2014 ಹಾಗೂ 51798) ವಿಲೇವಾರಿ ಮಾಡಿ 2021ರ ಫೆ 16ರಂದು ಹೈಕೋರ್ಟ್‌ ಆದೇಶ ಹೊರಡಿಸಿದೆ. ‘ಅರ್ಜಿದಾರರಿಗೆ ಸೂಕ್ತ ದಾಖಲೆಗಳೊಂದಿಗೆ ಮುಂಚಿತವಾಗಿ ನೋಟಿಸ್‌ ಜಾರಿಗೊಳಿಸಿ, ಅವರ ಅಹವಾಲು ಹೇಳಿಕೊಳ್ಳುವುದಕ್ಕೆ ಕಾಲಾವಕಾಶ ನೀಡಿ, ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕು. ಈ ಇಡೀ ಪ್ರಕ್ರಿಯೆಯನ್ನು, ಈ ಆದೇಶದ ಪ್ರತಿ ತಲುಪಿದ ಆರು ತಿಂಗಳ ಒಳಗೆ ಪೂರ್ಣಗೊಳಿಸಬೇಕು’ ಎಂದು ನಿರ್ದೇಶಿಸಿದೆ. ಇದಾಗಿ ವರ್ಷ ಕಳೆದರೂ ಕಂದಾಯ ಇಲಾಖೆ ಒತ್ತುವರಿ ತೆರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಕೆರೆಯ ಒತ್ತುವರಿ ತೆರವಿಗೆ ಒತ್ತಾಯಿಸಿ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್‌.ಎಸ್‌.ದೊರೆಸ್ವಾಮಿ ಅವರು ಲೋಕಾಯುಕ್ತರಿಗೆ ಈ ಹಿಂದೆಯೇ ದೂರು ನೀಡಿದ್ದು, ಈ ಕುರಿತ ವಿಚಾರಣೆ ಸಲುವಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್‌ ಅವರು ಒತ್ತುವರಿ ವಿವರಗಳನ್ನು ಲೋಕಾಯುಕ್ತ ಇಲಾಖೆಗೆ 2021ರ ಸೆ 6ರಂದು ಸಲ್ಲಿಸಿದ್ದರು. ‘ಒತ್ತುವರಿದಾರರ ಪಟ್ಟಿ ತಯಾರಿಸಬೇಕಿದೆ. 1964ರ ಭೂಕಂದಾಯ ಕಾಯ್ದೆ ಕಲಂ 39ರ ಅಡಿ ಒತ್ತುವರಿದಾರರಿಗೆ ನೋಟಿಸ್‌ ಜಾರಿ ಮಾಡಿ ಉತ್ತರ ಪಡೆಯಬೇಕಿದೆ. ನಿಯಾಮಾನುಸಾರ ವಿಚಾರಣೆ ನಡೆಸಿ ಆದೇಶ ಹೊರಡಿಸಬೇಕಿದೆ. ಇದಕ್ಕೆ ಗರಿಷ್ಠ ಕಾಲಾವಕಾಶ ನೀಡಬೇಕು’ ಎಂದು ಅವರು ಕೋರಿದ್ದರು.

ಚಿಕ್ಕಕಲ್ಲಸಂದ್ರ ಕೆರೆ ಒತ್ತುವರಿ ವಿವರ
ಬಿಎಂಟಿಸಿ ಬಸ್‌ನಿಲ್ದಾಣಕ್ಕೆ
;0–16
ಖಾಸಗಿ ಕಟ್ಟಡಗಳು ಮತ್ತು ಮನೆಗಳ ನಿರ್ಮಾಣಕ್ಕೆ;4–27
ಹಳ್ಳ ಮತ್ತು ರಸ್ತೆಗಳಿಗೆ;1–34
ನರ್ಸರಿ ಪ್ರದೇಶ; 0–33
ಖಾಲಿ ಪ್ರದೇಶ;5–06
ಒಟ್ಟು; 12–26

64 ವರ್ಷ ಹಳೆಯನಕ್ಷೆಯಲ್ಲಿ ಕೆರೆ ವಿವರ
ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ 64 ವರ್ಷಗಳ ಹಿಂದೆ (1958ರಲ್ಲಿ) ನಡೆಸಿದ್ದ ರಿ–ಸರ್ವೇ ನಕ್ಷೆಯಲ್ಲಿ ಈ ಕೆರೆಯ ವಿವರಗಳನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ. ಅದರ ಪ್ರಕಾರ ಗ್ರಾಮದ ಸರ್ವೆ 76ರಲ್ಲಿ ಕೆರೆ ಇರುವುದನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.

ಗ್ರಾಮ ಲೆಕ್ಕಾಧಿಕಾರಿ ಕಚೇರಿಯ ದಾಖಲೆಯೊಂದರ ಪ್ರಕಾರ ಮಳೆಗಾಲದಲ್ಲಿ ತುಂಬುತ್ತಿದ್ದ ಈ ಕೆರೆಯ ನೀರು ತೂಬಿನ ಮೂಲಕ ಮುಂದಿನ ಜನವರಿ– ಫೆಬ್ರುವರಿವರೆಗೂ ಹರಿಯುತ್ತಿತ್ತು. ಕೆರೆಯ ಕೆಳಗಿನ ಜಮೀನುಗಳಿಗೆ ಸುಮಾರು ಮೂರು ತಿಂಗಳು ಸಾಕಾಗುತ್ತಿತ್ತು. ಈ ಕೆರೆಯ ಏರಿಯನ್ನು ಕಲ್ಲು ಮಣ್ಣಿನಿಂದ ಕಟ್ಟಲಾಗಿದೆ. ಕೆರೆಯ ತೂಬಿಗೆ ಗಾರೆ ಮಾಡಲಾಗಿದೆ. ಕೆರೆಯ ಕೋಡಿ ಉತ್ತರ ದಿಕ್ಕಿನಲ್ಲಿದೆ. ಈ ಕೆರೆಯನ್ನು ಯಾರು ಕಟ್ಟಿಸಿದರು ಎಂದು ಗೊತ್ತಿಲ್ಲ ಎಂದು ಈ ದಾಖಲೆಯಲ್ಲಿ ಹೇಳಲಾಗಿದೆ.

‘ಕೆರೆ ಒತ್ತುವರಿ ತೆರವಿಗೆ ಆದ್ಯತೆ ಮೇರೆಗೆ ಕ್ರಮ’
‘ನಗರದಲ್ಲಿ ಇದುವರೆಗೆ 205 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಕೆರೆ ಕುಂಟೆ ಕಾಲುವೆಯ ಜಲಕಾಯಗಳ ಒತ್ತುವರಿಗೆ ಸಂಬಂಧಿಸಿದ ರಿಟ್‌ ಅರ್ಜಿ 38401 ಸಂಬಂಧ ಆದೇಶ ನೀಡಿರುವ ಹೈಕೋರ್ಟ್‌ ಜಲಕಾಯಗಳ ಸರ್ವೆ ಮಾಡಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಸರ್ಕಾರದ ಆದೇಶ ಇರಲಿ, ಇಲ್ಲದೆಯೇ ಇರಲಿ. ಕೆರೆ– ಕಾಲುವೆಗಳು ಮುಂದಿನ ಪೀಳಿಗೆಗೆ ಉಳಿಸಬೇಕಾದ ಪ್ರದೇಶಗಳು. ಹಾಗಾಗಿ ಅವುಗಳ ಒತ್ತುವರಿ ತೆರವನ್ನು ಆದ್ಯತೆ ಮೇರೆಗೆ ನಡೆಸಲಿದ್ದೇವೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಜೆ.ಮಂಜುನಾಥ್‌.

‘ಕೆಲವು ಕೆರೆಗಳು ಮೂಲ ಗುಣಲಕ್ಷಣ ಕಳೆದುಕೊಂಡಿವೆ. ಅಲ್ಲಿ, ಏನೂ ಅಭಿವೃದ್ಧಿ ಆಗಿಲ್ಲದಿದ್ದರೆ, ಪುನಃಶ್ಚೇತನ ಮಾಡಬಹುದು. ದಶಕಗಳ ಹಿಂದೆ ಬಡಾವಣೆ ನಿರ್ಮಾಣವಾಗಿದ್ದರೆ, ಅನ್ಯ ಉದ್ದೇಶಕ್ಕೆ ಅದು ಬಳಕೆ ಆಗಿದ್ದರೆ ನೋಡಿಕೊಂಡು ಕ್ರಮಕೈಗೊಳ್ಳಬೇಕು. 20– 30 ವರ್ಷಗಳ ಹಿಂದೆಯೇ ಕಟ್ಟಡಗಳು ನಿರ್ಮಾಣವಾಗಿದ್ದರೆ ಅದನ್ನು ಒಡೆದು ಕೆಡವಲು ಆಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

‘ಒತ್ತುವರಿ ಜಾಗದಲ್ಲಿ ಬಡಾವಣೆ, ಸಾರ್ವಜನಿಕ ರಸ್ತೆ, ಹಾಸ್ಟೆಲ್‌ ಆಸ್ಪತ್ರೆ, ಶಾಲೆಗಳಿದ್ದರೆ, ಅವುಗಳನ್ನು ಬಿಟ್ಟು ಖಾಸಗಿ ಒತ್ತುವರಿ ನಿರ್ದಾಕ್ಷಿಣ್ಯವಾಗಿ ತೆರವು ಮಾಡುತ್ತೇವೆ. ಖಾಸಗಿ ಒತ್ತುವರಿಯಲ್ಲಿ ಮೂರು ರೀತಿ ಇದೆ. ಕೃಷಿಗಾಗಿ ಒತ್ತುವರಿ ಮಾಡಿದ್ದರೆ, ಶೆಡ್‌ ನಿರ್ಮಿಸಿದ್ದರೆ ಸುಲಭವಾಗಿ ತೆರವುಗೊಳಿಸಬಹುದು. ಒತ್ತುವರಿ ಜಾಗದಲ್ಲಿ ಗಟ್ಟಿಮುಟ್ಟಾದ ಮನೆ ಕಟ್ಟಿಕೊಂಡು ವಾಸವಾಗಿದ್ದರೆ, ನೋಟಿಸ್‌ ಜಾರಿ ಜಾಡಿ, ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ಬಗ್ಗೆ ಹೈಕೋರ್ಟ್‌ಗೂ ಮನವರಿಕೆ ಮಾಡಿ ಮುಂದುವರಿಯಬೇಕಾಗುತ್ತದೆ’ ಎಂದರು.

ಯಾವುದೇ ಸ್ಥಿತಿಯಲ್ಲಿದ್ದರೂ ಒತ್ತುವರಿ ತೆರವು: ಕಂದಾಯ ಇಲಾಖೆ
‘ಕಂದಾಯ ದಾಖಲೆಗಳಲ್ಲಿ ಹೇಳಲಾದ ಸರ್ಕಾರಿ ಕೆರೆ ಮತ್ತು ಅದರ ಜಲಾನಯನ ಪ್ರದೇಶ, ರಾಜಕಾಲುವೆಯ ಮುಖ್ಯ ಒಳಹರಿವು ಒಡ್ಡುಗಳನ್ನು, ಕಾಲುವೆಗಳನ್ನು ಹೊರಹರಿವುಗಳನ್ನು, ಹೊರ ಹರಿವು ಕಾಲುವೆಗಳು ಮೂಲಸ್ವರೂಪ ಕಳೆದುಕೊಂಡಿವೆ ಎಂಬ ಕಾರಣಕ್ಕೆ ಇವುಗಳನ್ನು ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಇಂತಹ ಜಲಕಾಯಗಳು ಇತರ ಉದ್ದೇಶಗಳಿಗೆ ಬಳಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೆರೆ ಪ್ರದೇಶ ಪುನರುಜ್ಜೀವನಕ್ಕೆ ಅವಶ್ಯಕ ಕ್ರಮ ಕೈಗೊಂಡು ಅವುಗಳನ್ನು ಸಂರಕ್ಷಿಸಬೇಕು’ ಎಂದು ಕಂದಾಯ ಇಲಾಖೆಯು 2021ರ ಜೂನ್‌ 14ರಂದು ಸುತ್ತೋಲೆ ಹೊರಡಿಸಿದೆ.

ಈ ಆದೇಶ ಪ್ರಕಟವಾಗಿ ಒಂಬತ್ತು ತಿಂಗಳುಗಳೇ ಉರುಳಿವೆ. ಆದರೆ, ನಗರದಲ್ಲಿ ಬೆರಳೆಣಿಕೆಯ ಕಡೆ ಕೆರೆ ಕಾಲುವೆಗಳ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಕಂದಾಯ ಸಚಿವ ಆರ್‌.ಅಶೋಕ ಅವರು ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದ ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.

‘ಒತ್ತುವರಿದಾರರಲ್ಲಿ ಪ್ರಭಾವಿಗಳೇ ಹೆಚ್ಚು’
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್ ಕಚೇರಿಗೆ ಚಿಕ್ಕಕಲ್ಲಸಂದ್ರ ಕೆರೆಯ ಒತ್ತುವರಿ ಕುರಿತು 2006ರಿಂದಲೇ ಮಾಹಿತಿ ಇತ್ತು ಎನ್ನುತ್ತವೆ ‘ಪ್ರಜಾವಾಣಿ’ಗೆ ಲಭ್ಯವಾದ ದಾಖಲೆಗಳು. 2006ರಲ್ಲೇ 48 ಮಂದಿ ಒತ್ತುವರಿದಾರರ ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ, ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಕಾರಣ 2014ರ ವೇಳೆಗೆ ಒತ್ತುವರಿದಾರರ ಸಂಖ್ಯೆ 90ಕ್ಕೆ ಹೆಚ್ಚಳವಾಗಿತ್ತು. ಯಾರು ಯಾವ ಉದ್ದೇಶಕ್ಕೆ ಎಷ್ಟು ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬುದನ್ನು ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳು 2014ರಲ್ಲೇ ಸಿದ್ಧಪಡಿಸಿದ ಪಟ್ಟಿಯಲ್ಲಿ ದಾಖಲಿಸಲಾಗಿತ್ತು. ಈ ಪಟ್ಟಿಯಲ್ಲಿ ಕಣ್ಣಾಡಿಸಿದಾಗ, ಅವುಗಳಲ್ಲಿ ಬಂಗಲೆಗಳು, ಆರ್‌ಸಿಸಿ ಮನೆಗಳ ಸಂಖ್ಯೆಯೇ ಹೆಚ್ಚು ಇದೆ. ಇಲ್ಲಿನ ಒತ್ತುವರಿದಾರರಲ್ಲಿ ಪ್ರಭಾವಿಗಳೇ ಹೆಚ್ಚು ಇರುವುದನ್ನು ಇದು ಪುಷ್ಟೀಕರಿಸುತ್ತಿದೆ.

ಒತ್ತುವರಿದಾರರ ಪಟ್ಟಿ ಸಿದ್ಧವಾಗಿದ್ದರೂ, ಹೈಕೋರ್ಟ್‌ ಆದೇಶವಿದ್ದರೂ ಇನ್ನೂ ತೆರವು ಪ್ರಕ್ರಿಯೆ ನಡೆಯದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ರಾಮಲಕ್ಷ್ಮಣ್‌, ‘ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲೂ ಪ್ರತಿ ಶನಿವಾರ ಕೆರೆಗಳು ಹಾಗೂ ಇತರ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಲೇ ಇದ್ದೇವೆ. ಆದರೆ, ಚಿಕ್ಕಕಲ್ಲಸಂದ್ರ ಕೆರೆಯ ಒತ್ತುವರಿ ಸಂಬಂಧ ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಹಾಗಾಗಿ ತೆರವು ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ’ ಎಂದರು.

‘ಪ್ರಜಾವಾಣಿ’ ವರದಿ ಆಧರಿಸಿತೆರವಾಗಿತ್ತು ಒತ್ತುವರಿ
ಚಿಕ್ಕಕಲ್ಲಸಂದ್ರ ಕೆರೆ ಒತ್ತುವರಿ ಕುರಿತು ‘ಪ್ರಜಾವಾಣಿ’ಯು 2014ರ ಆ.21ರ ಸಂಚಿಕೆಯಲ್ಲಿ ‘ಭೂದಾಹ ತಣಿಸಲು ಕೆರೆ ಆಪೋಶನ’ ಎಂಬ ವಿಶೇಷ ವರದಿ ಪ್ರಕಟಿಸಿತ್ತು. ಒತ್ತುವರಿಯ ಕುರಿತ ಸಮಗ್ರ ವಿವರಗಳಿದ್ದ ಈ ವಿಶೇಷ ವರದಿಯನ್ನು ಆಧರಿಸಿ ಅಂದಿನ ಜಿಲ್ಲಾಡಳಿತ 2014ರ ನವೆಂಬರ್‌ 7ರಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತ್ತು. ಆಗಿನ ಜಿಲ್ಲಾಧಿಕಾರಿ ವಿ.ಶಂಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌.ವೆಂಕಟಾಚಲಪತಿ, ಉಪವಿಭಾಗಾಧಿಕಾರಿ
ಎಲ್‌.ಸಿ.ನಾಗರಾಜ್‌ ಹಾಗೂ ತಹಶೀಲ್ದಾರ್‌ ಬಿ.ಆರ್‌.ದಯಾನಂದ್‌ ನೇತೃತ್ವದಲ್ಲಿ ತೆರವುಗೊಳಿಸಲಾಗಿತ್ತು.

ಇಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಶೆಡ್‌ಗಳನ್ನು, ಆವರಣ ಗೋಡೆಗಳನ್ನು ಹಾಗೂ ಗೋದಾಮನ್ನು 10 ಜೆಸಿಬಿ ಬಳಸಿ ಒಡೆದು ಹಾಕಲಾಗಿತ್ತು. ಬಳಿಕ ಕೆರೆ ಮತ್ತೆ ಒತ್ತುವರಿಯಾಗಿದೆ. ಈ ಬಗ್ಗೆ ಸಾರ್ವಜನಿಕರು ಮತ್ತೆ ದೂರು ನೀಡಿದ್ದರೂ ಕಂದಾಯ ಇಲಾಖೆಯಾಗಲೀ ಈ ಕೆರೆಯ ನಿರ್ವಹಣೆಯ ಹೊಣೆ ಹೊತ್ತಿರುವ ಬಿಬಿಎಂಪಿಯಾಗಲೀ ಒತ್ತುವರಿ ತೆರವುಗೊಳಿಸುವ ಗೋಜಿಗೇ ಹೋಗಿಲ್ಲ. ಮತ್ತಷ್ಟು ಒತ್ತುವರಿಯಾಗುವುದನ್ನು ತಡೆಯುವ ಪ್ರಯತ್ನವೂ ನಡೆದಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

‘ಚಿಕ್ಕಕಲ್ಲಸಂದ್ರ ಕೆರೆ ಒತ್ತುವರಿತೆರವುಗೊಳಿಸಿಯೇ ಸಿದ್ಧ’
‘ನಾನು ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರದಲ್ಲಿರುವ ಚಿಕ್ಕಕಲ್ಲಸಂದ್ರ ಕೆರೆ ಒತ್ತುವರಿಯನ್ನು ತೆರವುಗೊಳಿಸಿಯೇ ಸಿದ್ಧ. ಕೆರೆ ಕಾಲುವೆಗಳು ಯಾವುದೇ ಸ್ಥಿತಿಯಲ್ಲಿದ್ದರೂ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಚಿಕ್ಕಕಲ್ಲಸಂದ್ರ ಕೆರೆ ಒತ್ತುವರಿಯ ತೆರವಿಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ತೆರವು ಕಾರ್ಯ ವಿಳಂಬವಾಗಿದೆ.

ಕೋರ್ಟ್‌ ಮೊರೆ ಹೋದವರನ್ನು ಸಂಪರ್ಕಿಸಿ, ‘ಎಷ್ಟೇ ಕಾನೂನು ಹೋರಾಟ ನಡೆಸಿದರೂ ಪ್ರಯೋಜನವಿಲ್ಲ. ಹಾಗಾಗಿ ದಾವೆ ಹಿಂದಕ್ಕೆ ಪಡೆಯಿರಿ’ ಎಂದು ಮನವೊಲಿಸುವ ಪ್ರಯತ್ನವನ್ನೂ ಮಾಡುತ್ತಿದ್ದೇವೆ. ದೇವೇಗೌಡ ಪೆಟ್ರೋಲ್‌ಬಂಕ್‌ ಬಳಿ ಒತ್ತುವರಿಯಾಗಿದ್ದ ಜಾಗ ತೆರವುಗೊಳಿಸಿ ಅಲ್ಲಿ ಸ್ವಾತಂತ್ರ್ಯಯೋಧರ ಉದ್ಯಾನ ನಿರ್ಮಿಸಲಾಗುತ್ತಿದೆ. ಗೌಡನಪಾಳ್ಯ ಕೆರೆಯ ಒತ್ತುವರಿ ತೆರವಿಗೂ ಕ್ರಮಕೈಗೊಳ್ಳುತ್ತಿದ್ದೇವೆ. ಅಂತೆಯೇ ಚಿಕ್ಕಕಲ್ಲಸಂದ್ರ ಕೆರೆಯ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳುತ್ತೇವೆ.
-ಆರ್.ಅಶೋಕ,ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT