ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಫೀಲ್ಡ್‌ ಮೆಟ್ರೊ ರೈಲು ಸಂಚಾರ ವರ್ಷಾಂತ್ಯಕ್ಕೆ

ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸದಲ್ಲಿ ಬಿಎಂಆರ್‌ಸಿಎಲ್
Last Updated 6 ಜೂನ್ 2022, 20:38 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ಸಂಪರ್ಕ ಕಲ್ಪಿಸುವ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಅತಿ ಶೀಘ್ರದಲ್ಲೇ ಈ ಭಾಗದ ಸಂಚಾರ ದಟ್ಟಣೆ ಕಿರಿಕಿರಿಗೆ ಮುಕ್ತಿ ಸಿಗಲಿದೆ. ನಿಗದಿತ ಅವಧಿಯಲ್ಲೇ 2022ರ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಮೆಟ್ರೊ ರೈಲು ಮಾರ್ಗದ 2ನೇ ಹಂತದ ಕಾಮಗಾರಿಗಳಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಐಟಿ ಕಂಪನಿಗಳು ಹೆಚ್ಚಿರುವ ಭಾಗಕ್ಕೆ ಬೆಂಗಳೂರಿನ ಬೇರೆ ಬೇರೆ ಭಾಗಗಳಿಂದ ಜನ ನಿತ್ಯ ಪ್ರಯಾಣ ಮಾಡುತ್ತಿದ್ದಾರೆ.

ಸದ್ಯ ಬೈಯಪ್ಪನಹಳ್ಳಿ ತನಕ ಇರುವ ಮೆಟ್ರೊ ರೈಲಿನಲ್ಲಿ ಹೋಗಿ ಅಲ್ಲಿಂದ ಮುಂದಕ್ಕೆ ಬಿಎಂಟಿಸಿ ಬಸ್, ಸ್ಥಳೀಯ ರೈಲು ಮತ್ತು ಕ್ಯಾಬ್‌ಗಳನ್ನು ಹತ್ತಿ ವೈಟ್‌ಫೀಲ್ಡ್‌ ಕಡೆಗೆ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಬೇರೆಡೆಗಿಂತ ಹೆಚ್ಚಾಗಿದೆ.

ಈ ಸಂಚಾರ ದಟ್ಟಣೆಗೆ ಪರಿಹಾರ ಕಲ್ಪಿಸಲು ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸಲು ಈ ಯೋಜನೆ ಅನುಕೂಲ ಆಗಲಿದೆ. ಬೈಯಪ್ಪನಹಳ್ಳಿಯಿಂದ ಸೀತಾರಾಮಪಾಳ್ಯದ ತನಕ ಒಂದು ಪ್ಯಾಕೇಜ್‌ ಮತ್ತು ಸೀತಾರಾಮಪಾಳ್ಯದಿಂದ ವೈಟ್‌ಫೀಲ್ಡ್ ತನಕ ಮತ್ತೊಂದು ಪ್ಯಾಕೇಜ್‌ ರೂಪಿಸಲಾಗಿದೆ. ಈ ಎರಡೂ ಪ್ಯಾಕೇಜ್‌ಗಳನ್ನು ಐ.ಟಿ.ಡಿ. ಸೆಮಿಂಡಿಯಾ ಜೆ.ವಿ. ಕಂಪನಿ ನಿರ್ವಹಿಸುತ್ತಿದೆ.

ಪೂರ್ವ ನಿಗದಿಯಂತೆ 2020ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಭೂಸ್ವಾಧೀನ ಪ್ರಕ್ರಿಯೆ, ಮರಗಳ ಸ್ಥಳಾಂತರ ಮತ್ತು ಕೋವಿಡ್‌ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಕೋವಿಡ್‌ ಪ್ರಕರಣಗಳು ಕಡಿಮೆಯಾದ ಬಳಿಕ ಎಲ್ಲ ಅಡೆತಡೆಗಳೂ ನಿವಾರಣೆಯಾಗಿ ಕಾಮಗಾರಿ ಚುರುಕು ಪಡೆದುಕೊಂಡಿದೆ.

ಕಾಮಗಾರಿ ಪೂರ್ಣಗೊಂಡರೆ ಕೆಂಗೇರಿಯಿಂದ ವೈಟ್‌ಫೀಲ್ಡ್‌ಗೆ ನಿರಂತರ ಮೆಟ್ರೊ ಸಂಪರ್ಕ ದೊರೆತಂತಾಗಲಿದೆ. ನಗರದ ಅನೇಕ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವಲ್ಲಿ ಈ ಮೆಟ್ರೊ ಮಾರ್ಗ ಮಹತ್ತರ ಪಾತ್ರವಹಿಸಲಿದೆ.

‘ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ತನಕ 15.50 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ 13 ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಎತ್ತರಿಸಿದ ರೈಲು ಮಾರ್ಗದ ಸಿವಿಲ್ ಕಾಮಗಾರಿ ಮುಕ್ತಾಯಗೊಂಡಿದೆ. ಹಳಿಗಳ ಜೋಡಣೆ ಮತ್ತು ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣಗೊಂಡು ವೈಟ್‌ಫೀಲ್ಡ್‌ ತನಕ ರೈಲುಗಳ ಸಂಚಾರ ಆರಂಭವಾದರೆ ಐ.ಟಿ ಕಾರಿಡಾರ್‌ಗೆ ನಗರದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸಿದಂತೆ ಆಗಲಿದೆ. ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗುವ ಸಾಧ್ಯತೆ ಇದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ವಿಮಾನ ನಿಲ್ದಾಣಕ್ಕೆ ನೇರ ಮಾರ್ಗ
ವೈಟ್‌ಫೀಲ್ಡ್‌ಗೆ ಮೆಟ್ರೊ ರೈಲು ಸಂಪರ್ಕ ದೊರೆತರೆ ಮುಂದಿನ ದಿನಗಳಲ್ಲಿ ವೈಟ್‌ಫೀಲ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೇರ ಸಂಪರ್ಕ ದೊರಕಲಿದೆ.

ಕೆ.ಆರ್‌.ಪುರ–ಹೆಬ್ಬಾಳ ಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಕಾಮಗಾರಿ ಭರದಿಂದ ಸಾಗಿದೆ. ಈ ಕಾಮಗಾರಿಯನ್ನು 2025ರ ವೇಳೆಗೆ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.

ಈ ಎರಡು ಯೋಜನೆಗಳು ಪೂರ್ಣಗೊಂಡರೆ ವೈಟ್‌ಫೀಲ್ಡ್‌ ಭಾಗದ ಜನ ನೇರವಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಹುದು. ಅದರಲ್ಲೂ ಐ.ಟಿ ಕಂಪನಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ.

ಸಿಲ್ಕ್ ಬೋರ್ಡ್‌–ಕೆ.ಆರ್‌.ಪುರ ಕಾಮಗಾರಿ ಚುರುಕು
ಇನ್ನೊಂದೆಡೆ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿಯೂ ಚುರುಕಿನಿಂದ ನಡೆಯುತ್ತಿದೆ.

ಹೊರ ವರ್ತುಲ ರಸ್ತೆಯಲ್ಲಿ ಹಾದು ಹೋಗುವ ಮಾರ್ಗದಲ್ಲೂ ಐ.ಟಿ ಕಂಪನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಸಿಲ್ಕ್‌ ಬೋರ್ಡ್‌ನಿಂದ ಕಾಡುಬೀಸನಹಳ್ಳಿ ತನಕದ 10 ಕಿ.ಮೀ. ಉದ್ದದ ಮೊದಲ ಪ್ಯಾಕೇಜ್‌ ಗುತ್ತಿಗೆಯನ್ನು ಆಫ್ಕಾನ್ಸ್‌ ಸಂಸ್ಥೆ ಪಡೆದಿದ್ದರೆ, ಕಾಡುಬೀಸನಹಳ್ಳಿಯಿಂದ ಬೈಯಪ್ಪನಹಳ್ಳಿಯವರೆಗಿನ 9.75 ಕಿ.ಮೀ. ಎರಡನೇ ಪ್ಯಾಕೇಜ್‌ನ ಗುತ್ತಿಗೆಯನ್ನು ಶಂಕರನಾರಾಯಣ ಕನ್‌ಸ್ಟ್ರಕ್ಷನ್‌ ಪಡೆದಿದೆ.

‘ಮುಂದಿನ ದಿನಗಳಲ್ಲಿ ಸರ್ಜಾಪುರ ತನಕವೂ ಮೆಟ್ರೊ ರೈಲು ವಿಸ್ತರಣೆಗೊಳ್ಳಲಿದೆ. ಇವೆಲ್ಲವೂ ಐ.ಟಿ ಕಂಪನಿ ಉದ್ಯೋಗಿಗಳು ಮತ್ತು ಆ ಭಾಗದ ಜನ ವಿಮಾನ ನಿಲ್ದಾಣಕ್ಕೆ ತಲುಪಲು ಅನುಕೂಲ ಆಗಲಿದೆ’ ಎನ್ನುತ್ತಾರೆ ಬಿಎಂಆರ್‌ಸಿಎಲ್ ಅಧಿಕಾರಿಗಳು.

*
ವೈಟ್‌ಫೀಲ್ಡ್‌ ಮಾರ್ಗದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, 2022ರ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಂಡು ರೈಲುಗಳ ಸಂಚಾರ ಆರಂಭವಾಗುವ ವಿಶ್ವಾಸ ಇದೆ.
-ಬಿ.ಎಲ್‌. ಯಶವಂತ್‌ ಚವ್ಹಾಣ್, ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

13 ಮೆಟ್ರೊ ನಿಲ್ದಾಣ

* ಬೆನ್ನಿಗಾನಹಳ್ಳಿ

* ಕೆ.ಆರ್.ಪುರ

* ಮಹದೇವಪುರ

* ಗರುಡಾಚಾರ್‌ಪಾಳ್ಯ

* ಹೂಡಿ ಜಂಕ್ಷನ್

* ಸೀತಾರಾಮಪಾಳ್ಯ

* ಕುಂದಲಹಳ್ಳಿ ‌‌

* ನಲ್ಲೂರುಹಳ್ಳಿ

* ಶ್ರೀಸತ್ಯಸಾಯಿ ಆಸ್ಪತ್ರೆ

* ಪಟ್ಟಂದೂರು ಅಗ್ರಹಾರ

* ಕಾಡುಗೋಡಿ

* ಚನ್ನಸಂದ್ರ

* ವೈಟ್‌ಫೀಲ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT