ಶುಕ್ರವಾರ, ಅಕ್ಟೋಬರ್ 30, 2020
27 °C

ಕೊರೊನಾ ಜೊತೆ ಬದುಕೋಣ: ಧೈರ್ಯ–ಎಚ್ಚರಿಕೆಯೇ ರಾಮಬಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೊರೊನಾ ಎಂದರೆ ವಾಸಿಯಾಗದ ಕಾಯಿಲೆಯೋ ಏನೋ ಎಂಬ ಆತಂಕ ಎಲ್ಲರಲ್ಲಿ ಇತ್ತು. ಕೊರೊನಾವನ್ನೂ ಗೆಲ್ಲಬಹುದು ಎಂಬುದನ್ನು ಕಾಲವೇ ತೋರಿಸಿಕೊಟ್ಟಿದೆ. ಸೋಂಕು ತಗುಲದಂತೆ ಎಲ್ಲರೂ ಎಚ್ಚರ ವಹಿಸಬೇಕು. ಆದಾಗ್ಯೂ ಕೋವಿಡ್‌ ದೃಢಪಟ್ಟರೆ ಧೈರ್ಯದಿಂದ ಎದುರಿಸಬೇಕು. ಎಚ್ಚರಿಕೆ ಮತ್ತು ಧೈರ್ಯವೇ ಇದಕ್ಕೆ ರಾಮಬಾಣ’ ಎನ್ನುತ್ತಾರೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಸದಸ್ಯ ಎಂ.ಬಿ. ಕೃಷ್ಣಯ್ಯ. 

ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಅವರು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯು ಅಧ್ಯಕ್ಷರೂ ಹೌದು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಹೆಸರಘಟ್ಟದಲ್ಲಿ ಮನೆ–ಮನೆಗೆ ತೆರಳಿ ಕೊರೊನಾ ಆರೋಗ್ಯ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೊರೊನಾ ಪಾಸಿಟಿವ್‌ ಎಂದು ವರದಿ ಬಂದ ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಅವರು, ಮತ್ತೆ ಎಂದಿನಂತೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

‘ಯಾವುದೇ ಲಕ್ಷಣಗಳಿರದಿದ್ದರೂ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ವೈದ್ಯರು ಹೇಳಿದ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಂಡೆ. ಕಷಾಯ ಮತ್ತಿತರ ಮನೆಮದ್ದು ಮಾಡಿಕೊಂಡೆ. ಈಗ ಸಂಪೂರ್ಣ ಗುಣಮುಖನಾಗಿದ್ದೇನೆ’ ಎಂದು ಅವರು ಹೇಳುತ್ತಾರೆ. 

‘ವೈದ್ಯರು, ಶುಶ್ರೂಷಕರು, ಪೊಲೀಸರು ಸೇರಿದಂತೆ ಕೋವಿಡ್‌–19 ಕರ್ತವ್ಯ ನಿರ್ವಹಿಸಿದ ಎಲ್ಲರೂ ಒಂದು ವಿಚಿತ್ರ ಪರಿಸ್ಥಿತಿಗೆ ಸಿಲುಕಿದ್ದಾರೆ. ಬೇರೆಯವರನ್ನು ಕೊರೊನಾ ಸೋಂಕು ಮುಕ್ತರನ್ನಾಗಿಸಲು ಅಥವಾ ಅವರ ಆರೋಗ್ಯ ತಪಾಸಣೆ ಮಾಡಲು ಹೋದಾಗ ಸೋಂಕು ತಗುಲಿಸಿಕೊಂಡಿದ್ದಾರೆ. ಹೀಗೆ, ಸೋಂಕಿಗೆ ಒಳಗಾದವರನ್ನು ಅದೇ ಜನ ದೂರ ಇಡುವ ಅಥವಾ ಅವರನ್ನು ತಿರಸ್ಕರಿಸುವ ಬೆಳವಣಿಗೆಗಳು ನಡೆಯುತ್ತಿವೆ. ಇದು ತಪ್ಪಬೇಕು’ ಎಂದು ಕೃಷ್ಣಯ್ಯ ಸಲಹೆ ನೀಡುತ್ತಾರೆ.

‘ಕೊರೊನಾ ಸೇನಾನಿಗಳು ನಮಗೋಸ್ಕರ ಸೇವೆ ನೀಡುತ್ತಿದ್ದಾರೆ. ಅವರನ್ನು ಗೌರವಿಸುವ ಜೊತೆಗೆ, ಕೊರೊನಾ ಪರಿಸ್ಥಿತಿಯೊಂದಿಗೇ ಬದುಕುವ ಛಲ ಅಳವಡಿಸಿಕೊಳ್ಳಬೇಕು. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸೂಕ್ತ ಅಂತರ ಕಾಪಾಡಿಕೊಳ್ಳುವುದರಿಂದ ಸೋಂಕು ಹರಡದಂತೆ ತಡೆಗಟ್ಟಬಹುದು’ ಎಂದು ಅವರು ಹೇಳುತ್ತಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು