ಭಾನುವಾರ, ಆಗಸ್ಟ್ 14, 2022
20 °C

ಲಂಚ ಪ್ರಕರಣ| ಡಿಸಿಯೂ ಆರೋಪಿ: ಎಸಿಬಿ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವವರಿಂದ ₹ 5 ಲಕ್ಷ ಲಂಚ ಪಡೆದ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಅವರನ್ನು ಮೂರನೆ ಆರೋಪಿಯನ್ನಾಗಿ ಮಾಡುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಆದೇಶ ನೀಡಲು ₹ 15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹ 5 ಲಕ್ಷ ಪಡೆದ ಆರೋಪದ ಮೇಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ವ್ಯವಸ್ಥಾಪಕ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರು ಎಂಬುವವರನ್ನು ಎಸಿಬಿ ಮೇ 21ರಂದು ಬಂಧಿಸಿತ್ತು.

‘ನನ್ನ ಜಮೀನಿಗೆ ಸಂಬಂಧಿಸಿದ ಪ್ರಕರಣದ ಆದೇಶವನ್ನು ಪ್ರಕಟಿಸುವಂತೆ ಮನವಿ ಮಾಡಲು ಜಿಲ್ಲಾಧಿಕಾರಿಯವರನ್ನು ಭೇಟಿಮಾಡಿದ್ದೆ. ಅವರ ಸೂಚನೆಯಂತೆ ಮಹೇಶ್‌ ಅವರನ್ನು ಭೇಟಿಮಾಡಿದೆ. ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಅಜಂ ‍ಪಾಷಾ ದೂರಿನಲ್ಲಿ ಉಲ್ಲೇಖಿಸಿದ್ದರು. ಜಿಲ್ಲಾಧಿಕಾರಿ ಹಾಗೂ ಮಹೇಶ್‌ ಜತೆಗಿನ ಸಂಭಾಷಣೆಯ ವಿವರವನ್ನು ಮೊಬೈಲ್‌ನಲ್ಲಿ ರೆಕಾರ್ಡಿಂಗ್‌ ಮಾಡಿಕೊಂಡಿದ್ದ ದೂರುದಾರರು ಆ ವಿವರಗಳನ್ನೂ ದೂರಿನೊಂದಿಗೆ ತನಿಖಾ ಸಂಸ್ಥೆಗೆ ನೀಡಿದ್ದರು. ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿಮಾಡಿದ್ದ ಎಸಿಬಿ ಅಧಿಕಾರಿಗಳು, ಬುಧವಾರ ಬೆಳಿಗ್ಗೆಯಿಂದ ರಾತ್ರಿ 9.30ರವರೆಗೂ ವಿಚಾರಣೆ ನಡೆಸಿದ್ದರು.

‘ಲಂಚದ ಹಣ ಪಡೆದಿದ್ದ ನೌಕರರ ಬಳಿ ಅರ್ಜಿದಾರನಿಗೆ ಸಂಬಂಧಿಸಿದ ಯಾವುದೇ ಕೆಲಸ ಬಾಕಿ ಇರಲಿಲ್ಲ. ಆದರೆ, ಕೂಡ್ಲು ಗ್ರಾಮದ ಸರ್ವೆ ನಂಬರ್‌ 190/5ರಲ್ಲಿರುವ 38 ಗುಂಟೆ ಜಮೀನಿನ ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಾಕಿ ಇದೆ. 2022ರ ಮಾರ್ಚ್‌ 30ರಂದೇ ವಿಚಾರಣೆ ಪೂರ್ಣಗೊಳಿಸಿ, ಆದೇಶ ಕಾಯ್ದಿರಿಸಲಾಗಿತ್ತು. ದೂರುದಾರರ ಕೆಲಸ ಜಿಲ್ಲಾಧಿಕಾರಿ ಬಳಿಯೇ ಬಾಕಿ ಇರುವುದಕ್ಕೆ ತನಿಖೆ ವೇಳೆ ಸಾಕ್ಷ್ಯ ಲಭ್ಯವಾಗಿದೆ. ಈ ಕಾರಣದಿಂದ ಅವರನ್ನು ಮೂರನೇ ಆರೋಪಿ
ಯನ್ನಾಗಿ ಮಾಡಬೇಕು’ ಎಂದು ತನಿಖಾ ತಂಡ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು