ಬೆಂಗಳೂರು: ‘ಮನುವಾದಿಗಳಿಗಿಂತ ಬ್ರಿಟಿಷರು ಉತ್ತಮರಾಗಿದ್ದರು’ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೇಳಿದರು.
ಪೂನಾ ಒಪ್ಪಂದದ ಕರಾಳ ದಿನದ ನೆನಪಿನ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಭಾನುವಾರ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯ ಹಾಗೂ ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣ’ ಎಂಬ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮನುವಾದಿಗಳಂತೆ ಜಾತಿಯತೆ, ಅಸ್ಪೃಶ್ಯತೆ ಆಚರಣೆ ಮಾಡುತ್ತಿರಲಿಲ್ಲ. ಅವರಲ್ಲಿ ದಲಿತ ಸಮುದಾಯದ ಬಗ್ಗೆ ಕನಿಕರವಿತ್ತು. ಬ್ರಿಟಿಷರು ದಲಿತರೊಂದಿಗೆ ಮಾನವೀಯತೆಯಿಂದ ವರ್ತಿಸುತ್ತಿದ್ದರು. ದಲಿತರ ವಿರುದ್ಧ ಜಾತಿ ಆಧಾರಿತ ತಾರತಮ್ಯ ಮಾಡುತ್ತಿರಲಿಲ್ಲ’ ಎಂದರು.
‘ಡಾ.ಬಿ.ಆರ್. ಅಂಬೇಡ್ಕರ್ ಅವರು ಪೂನಾ ಒಪ್ಪಂದಕ್ಕೆ ಒಲ್ಲದ ಮನಸ್ಸಿನಿಂದ ಸಹಿ ಹಾಕಬೇಕಾಯಿತು. ಪ್ರತ್ಯೇಕ ಮತದಾನದ ವ್ಯವಸ್ಥೆಗೆ ಈ ಒಪ್ಪಂದದಿಂದ ಕಲ್ಲು ಬಿತ್ತು. ಈ ಕಾರಣಕ್ಕೆ ದಲಿತರು ಹಾಗೂ ಹಿಂದುಳಿದವರು ಇಂದಿಗೂ ಅವಮಾನ ಹಾಗೂ ಕಡೆಗಣನೆಗೆ ಒಳಗಾಗುತ್ತಿದ್ದಾರೆ. ಪೂನಾ ಒಪ್ಪಂದದಲ್ಲಿ ಅಂಬೇಡ್ಕರ್ ಏನು ಅಂದುಕೊಂಡಿದ್ದರು ಅದು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.
ಸಮಿತಿ ರಾಜ್ಯ ಸಂಚಾಲಕ ಎಂ.ಸಿ. ನಾರಾಯಣ್, ಸಂಸ್ಕೃತಿ ಚಿಂತಕ ನಾರಾಯಣ ಘಟ್ಟ, ಪ್ರಾಧ್ಯಾಪಕ ರಾಮಕೃಷ್ಣಯ್ಯ ಎಂ., ಸಮಿತಿ ಸಂಸ್ಥಾಪಕ ಪರಶುರಾಮ ನೀಲಾನಾಯಕ, ಸುಧಾರಾಣಿ ಭಾಗವಹಿಸಿದ್ದರು.