ಲೋಕಾಯುಕ್ತರಾಗಲು ಬಿ.ಎಸ್. ಪಾಟೀಲ ಅನರ್ಹ: ಕರ್ನಾಟಕ ರಾಷ್ಟ್ರ ಸಮಿತಿ
ಬೆಂಗಳೂರು: ‘ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಲೋಕಾಯುಕ್ತರಾಗಿ ಮುಂದುವರಿಯಲು ಅನರ್ಹರಾಗಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಪಾಧ್ಯಕ್ಷ ಸಿ.ಎಚ್. ಲಿಂಗೇಗೌಡ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2019ರಿಂದ 2022ರ ವರೆಗೆ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಉಪ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 5(2)ರ ಪ್ರಕಾರ, ಒಬ್ಬ ವ್ಯಕ್ತಿ ಒಮ್ಮೆ ಲೋಕಾಯುಕ್ತ ಅಥವಾ ಉಪ ಹುದ್ದೆ ಅಲಂಕರಿಸಿದರೆ ಮತ್ತೆ ಸರ್ಕಾರದ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಮುಂದುವರೆಯಬಾರದು ಎಂಬ ನಿಯಮವಿದೆ. ಆದರೆ, 2022ರ ಜೂನ್ 15ರಂದು ಅಕ್ರಮವಾಗಿ ಮತ್ತೆ ಲೋಕಾಯುಕ್ತರಾಗಿ ನೇಮಕವಾಗಿದ್ದಾರೆ’ ಎಂದು ದೂರಿದರು.
‘ಸರ್ಕಾರ ಮತ್ತು ನೇಮಕಾತಿ ಸಮಿತಿಯಲ್ಲಿರುವ ವಿರೋಧ ಪಕ್ಷದ ನಾಯಕರಿಗೆ ಈ ವಿಚಾರ ತಿಳಿದಿದ್ದರೂ ಈ ಅಕ್ರಮ ನಡೆದಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆ ತನ್ನ ಕೆಲಸಗಳಿಂದ ದೇಶಕ್ಕೆ ಮಾದರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಘನತೆಗೆ ತಕ್ಕ ಕೆಲಸಗಳಾಗುತ್ತಿಲ್ಲ. ಆದ್ದರಿಂದ ಬಿ.ಎಸ್. ಪಾಟೀಲ ಅವರು ತಮ್ಮ ಸ್ಥಾನವನ್ನು ತ್ಯಜಿಸಿ, ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಎತ್ತಿ ಹಿಡಿಯಬೇಕು’ ಎಂದು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.