ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಮ್ಮಿಂದ ತಲೆ ಎತ್ತಿ ಓಡಾಡದಂತಾಗಿದೆ’: ಬಿಬಿಎಂಪಿ ವಿರುದ್ಧ ಬಿಎಸ್‌ವೈ ಗರಂ

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಬಿ.ಎಸ್‌. ಯಡಿಯೂರಪ್ಪ ತಾಕೀತು
Last Updated 22 ಅಕ್ಟೋಬರ್ 2019, 2:17 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಎಲ್ಲಿ ಹೋದರೂ ಕಸದ ಸಮಸ್ಯೆ ಬಗ್ಗೆಯೇ ಜನ ಮಾತನಾಡುತ್ತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ. ನಿಮ್ಮಿಂದಾಗಿ ತಲೆ ಎತ್ತಿಕೊಂಡು ಓಡಾಡದಂತಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸೋಮವಾರ ನಡೆದ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಿಟಗಾನಹಳ್ಳಿ ಮತ್ತು ಮಂಡೂರು ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿ ಕುರಿತ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಸ್ತಾಪಿಸಿದ ಅವರು ಕೆಂಡಾಮಂಡಲರಾದರು.

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದೇ ಇರುವುದರಿಂದಮಿಟಗಾನಹಳ್ಳಿ ಮತ್ತು ಮಂಡೂರು ಗ್ರಾಮಗಳ ಜನರೂ ತೊಂದರೆಗೆ ಸಿಲುಕಿದ್ದಾರೆ. ತಕ್ಷಣವೇ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಬಿಬಿಎಂಪಿ ಆಯುಕ್ತರಿಗೂ ತಾಕೀತು ಮಾಡಿದರು.

‘ಕಣ್ಣೂರಿನಲ್ಲಿ ಕಸದಿಂದಾಗಿ ಅಂತರ್ಜಲ ಕಲುಷಿತವಾಗುತ್ತಿರುವುದನ್ನು ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಬೋರ್‌ವೆಲ್‌ಗಳು ಮತ್ತು ಇತರ ಜಲಮೂಲಗಳೂ ಕಲುಷಿತವಾಗಿವೆ. ಆದ್ದರಿಂದ ಮೊದಲು ಅಲ್ಲಿನ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದೂ ಸೂಚಿಸಿದರು.

‘ಕಸದಿಂದ ವಿದ್ಯುತ್‌ ಉತ್ಪಾದನೆ ಮಾಡಲು ಯಾವೆಲ್ಲ ಕ್ರಮವನ್ನು ತೆಗೆದುಕೊಳ್ಳಬೇಕೊ ಅದನ್ನು ಮಾಡಿ. ಬೇರೆ ಬೇರೆ ದೇಶಗಳಲ್ಲಿ ಇದೆ ಎಂದು ಸಬೂಬು ಹೇಳುವುದನ್ನು ಬಿಡಿ. ನಮ್ಮಲ್ಲಿ ಅದು ಕಾರ್ಯಗತ ಆಗಲು ಏನು ಮಾಡಬೇಕು ತಿಳಿಸಿ. ವಿದ್ಯುತ್‌ ಉತ್ಪಾದನೆ ಮಾಡಲು ಮಂಡೂರಿನ ಕಸ ಕರಗಿಸಬೇಕು’ ಎಂದು ಯಡಿಯೂರಪ್ಪ ಹೇಳಿದರು.

ಕಸದಿಂದ ವಿದ್ಯುತ್ ಉತ್ಪಾದನೆ ‌ಮಾಡಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ ಉಚಿತ ಕಸ ನೀಡಬೇಕು. ಕಸದ ಸಮಸ್ಯೆಯನ್ನು ಇನ್ನು 15 ದಿನಗಳಲ್ಲಿ ಬಗೆಹರಿಸಬೇಕು. ಆ ಬಳಿಕ ವಾರಕ್ಕೊಮ್ಮೆ ಕಸದ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ಕರೆಯುವುದಾಗಿ ಅಧಿಕಾರಿಗಳಿಗೆ ತಿಳಿಸಿದರು.

ಕೆರೆಗಳು ಕೆಟ್ಟಿವೆ: ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಏಳು ಕೆರೆಗಳು ಕಸದಿಂದಾಗಿ ಕಲುಷಿತಗೊಂಡಿವೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ತೊಂದರೆ ಆಗಿದೆ. ಆದ್ದರಿಂದ ವೈಜ್ಞಾನಿಕ ಕಸ ವಿಲೇವಾರಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಅರವಿಂದ ಲಿಂಬಾವಳಿ ಮನವಿ ಮಾಡಿದರು.

ಸುಮಾರು 111 ಎಕರೆ ವಿಸ್ತೀರ್ಣದ ರಾಂಪುರ ಕೆರೆಯು ಕಲುಷಿತ ನೀರು, ಕೈಗಾರಿಕಾ ಘಟಕಗಳ ವಿಷಕಾರಿ ರಾಸಾಯನಿಕಗಳು ಸೇರಿ ಸಂಪೂರ್ಣ ಮಲಿನಗೊಂಡಿದೆ. ಸುತ್ತಮುತ್ತಲಿನ ಪ್ರದೇಶದ ಕೆಟ್ಟ ವಾಸನೆಯಿಂದ ಕೂಡಿದೆ. ಕೊಳವೆ ಬಾವಿಗಳಲ್ಲಿ ಮಲಿನಯುಕ್ತ ನೀರು ಬರುತ್ತಿದೆ. ಅಲ್ಲಿನ ಜನರಿಗೆ ರೋಗದ ಭೀತಿ ಆವರಿಸಿದೆ ಎಂದು ಗಮನ ಸೆಳೆದರು. ಮರತೂರು ಗ್ರಾಮದ ಸರ್ವೆ ಸಂಖ್ಯೆ 155 ರ ಸುಮಾರು 135 ಎಕರೆ ಪ್ರದೇಶದಲ್ಲಿ ಭೂ ಭಾಗದಿಂದ 80 ಅಡಿ ಆಳಕ್ಕೆ ಹಾಗೂ 80 ಅಡಿ ಎತ್ತರಕ್ಕೆ 15,000 ಟನ್‌ಗೂ ಹೆಚ್ಚು ಘನತ್ಯಾಜ್ಯ ಸುರಿದಿದ್ದು, ಇದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಕಸ ವಿಲೇವಾರಿಗೆ ₹ 500 ಕೋಟಿ

ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ₹ 500 ಕೋಟಿ ಮೀಸಲಿಡುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT