ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ವಿಶ್ವವಿದ್ಯಾಲಯಕ್ಕೆ ಜಾಗ: ಜೀವವೈವಿಧ್ಯಕ್ಕೆ ಕಂಟಕ

ಪರಿಸರ ಕಾರ್ಯಕರ್ತರ ಕಳವಳ
Last Updated 12 ಸೆಪ್ಟೆಂಬರ್ 2020, 19:09 IST
ಅಕ್ಷರ ಗಾತ್ರ

ಬೆಂಗಳೂರು: ಯೋಗ ವಿಶ್ವವಿದ್ಯಾಲಯ ಮತ್ತು ಸಿಬಿಎಸ್‌ಇ ದಕ್ಷಿಣ ಕೇಂದ್ರ ಕಚೇರಿ ನಿರ್ಮಾಣವಾದರೆ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಜೀವವೈವಿಧ್ಯಕ್ಕೆ ಹಾನಿಯಾಗಲಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

‘ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ (ಸೆಕ್ಟರ್‌ 1) 100 ಎಕರೆ ಜೈವಿಕ ಉದ್ಯಾನವನ್ನು 2001ರಿಂದ ಅಭಿವೃದ್ಧಿ ಪಡಿಸಲಾಗಿದೆ. ಜೈವಿಕವಾಗಿ ಸಮೃದ್ಧವಾದ ಇಂಥ ಪ್ರದೇಶದಲ್ಲಿ ವಿಶ್ವವಿದ್ಯಾಲಯ ನಿರ್ಮಾಣವಾದರೆ ಪರಿಸರಕ್ಕೆ ಹಾನಿಯಾಗುತ್ತದೆ’ ಎಂದು ಪ್ರೊ.ಟಿ.ಜೆ. ರೇಣುಕಾಪ್ರಸಾದ್‌ ಆತಂಕ ವ್ಯಕ್ತಪಡಿಸಿದರು.

‘ದೇಶದಲ್ಲಿಯೇ ದೊಡ್ಡ ಪ್ರಮಾಣದ ಜೈವಿಕ ವೈವಿಧ್ಯವನ್ನು ಹೊಂದಿರುವ, ಪ್ರಾಕೃತಿಕವಾಗಿ ಹೆಚ್ಚು ಸಂಪದ್ಭರಿತವಾಗಿರುವ ವಿಶ್ವವಿದ್ಯಾಲಯದ ಪ್ರಾಂಗಣವಿದು. ಪರಿಸರ ತಜ್ಞ ಯಲ್ಲಪ್ಪ ರೆಡ್ಡಿಯವರ 25 ವರ್ಷಗಳ ಶ್ರಮದ ಫಲವಾಗಿ ವಿಶ್ವವಿದ್ಯಾಲಯದಲ್ಲಿ ಜೈವಿಕ ಉದ್ಯಾನ ತಲೆ ಎತ್ತಿದೆ. ಈ ಪ್ರದೇಶದಲ್ಲಿ ಮಾನವ ಚಟುವಟಿಕೆ ಹೆಚ್ಚಾದರೆ, ಪರಿಸರಕ್ಕೆ ಹೆಚ್ಚು ಹಾನಿಯಾಗಲಿದೆ’ ಎಂದು ಅವರು ಹೇಳಿದರು.

‘ಎಂತಹ ಅನಾರೋಗ್ಯ ವ್ಯಕ್ತಿಯೂ ಈ ಪ್ರದೇಶದಲ್ಲಿ ಸಂಚರಿಸಿದರೆ ಗುಣಮುಖನಾಗುತ್ತಾನೆ. ನಿರಂತರವಾಗಿ ಇಲ್ಲಿ ವಾಯುವಿಹಾರಕ್ಕೆ ಬರುತ್ತಿದ್ದೇನೆ. ಈ ಪ್ರದೇಶದಲ್ಲಿ ವಿಶ್ವವಿದ್ಯಾಲಯ ಅಥವಾ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು’ ಎಂದು ವಾಯುವಿಹಾರಕ್ಕೆ ಬಂದಿದ್ದ ಪುಟ್ಟಸ್ವಾಮಿ ಹೇಳಿದರು.

‘ಯೋಗ ವಿಶ್ವವಿದ್ಯಾಲಯವನ್ನು ಇಲ್ಲೇ ಸ್ಥಾಪಿಸಿ ಎಂದುಬೆಂಗಳೂರು ವಿಶ್ವವಿದ್ಯಾಲಯ ಕೋರಿಲ್ಲ. ಇದು ಕೇಂದ್ರಸರ್ಕಾರದ ನಿರ್ಧಾರ. ಸರ್ಕಾರದ ಸೂಚನೆಯನ್ನು ನಾವು ಪಾಲಿಸಲೇಬೇಕಾಗುತ್ತದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ ‘ಪ್ರಜಾವಾಣಿ’ಗೆ ಹೇಳಿದರು.

‘3 ಲಕ್ಷ ಸಸಿ ನೆಡುವ ಗುರಿಯೊಂದಿಗೆ ಸಿಬಿಎಸ್‌ಇ ದಕ್ಷಿಣ ವಲಯ ಕೇಂದ್ರ ಸ್ಥಾಪನೆಯಾಗಲಿದೆ. ಯೋಗ ವಿಶ್ವವಿದ್ಯಾಲಯದಿಂದಲೂ ಇಲ್ಲಿನ ಪರಿಸರದ ಮೇಲೆ ಯಾವುದೇ ಹಾನಿಯಾಗುವುದಿಲ್ಲ. 15 ಎಕರೆ ಪ್ರದೇಶ ಪೂರ್ತಿ ಕಟ್ಟಡ ನಿರ್ಮಾಣವಾಗುವುದಿಲ್ಲ. ಹೆಚ್ಚು ಪ್ರದೇಶವನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಅಲ್ಲದೆ, ಪರಿಸರ ಸ್ನೇಹಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ’ ಎಂದರು.

‘ಮುದ್ರಣ ಇಲಾಖೆ, ನ್ಯಾಕ್, ಅಂಬೇಡ್ಕರ್ ಅಧ್ಯಯನ ಕೇಂದ್ರ ಸೇರಿದಂತೆ ಹಲವು ಸಂಸ್ಥೆಗಳು ಕ್ಯಾಂಪಸ್‌ ಆವರಣದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಯೋಗ ವಿಶ್ವವಿದ್ಯಾಲಯ ಮತ್ತು ಸಿಬಿಎಸ್‌ಇ ಕೇಂದ್ರದಿಂದ ನಗರಕ್ಕೆ, ವಿಶ್ವವಿದ್ಯಾಲಯಕ್ಕೆ ಹೆಚ್ಚು ಅನುಕೂಲಗಳೇ ಆಗಲಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT