ಬಜೆಟ್ ನಿರಾಸೆ | ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಸಿಗಲಿಲ್ಲ ಅನುದಾನ

ಶುಕ್ರವಾರ, ಜೂಲೈ 19, 2019
26 °C

ಬಜೆಟ್ ನಿರಾಸೆ | ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಸಿಗಲಿಲ್ಲ ಅನುದಾನ

Published:
Updated:

ಬೆಂಗಳೂರು: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಉಪನಗರ ರೈಲು ಯೋಜನೆಗೆ ಯಾವುದೇ ಅನುದಾನ ಸಿಕ್ಕಿಲ್ಲ. ಸತತ ಎರಡನೇ ಬಾರಿಗೆ ಕೇಂದ್ರ ಬಜೆಟ್‌ ಬೆಂಗಳೂರು ನಿವಾಸಿಗಳಿಗೆ ನಿರಾಸೆ ಉಂಟು ಮಾಡಿದೆ.

ರೈಲ್ವೆ ಇಲಾಖೆಯ ವಿವಿಧ ವಿಭಾಗಗಳು ಮತ್ತು ಯೋಜನೆಗಳಿಗೆ ಅನುಮಾನ ಮಂಜೂರು ಮಾಡಿರುವ ಮಾಹಿತಿ ಹೊತ್ತ ‘ಪಿಂಕ್ ಬುಕ್’ ಬುಧವಾರ ಬಿಡುಗಡೆಯಾಗಿದೆ. ಉಪನಗರ ರೈಲ್ವೆ ಯೋಜನೆಗೆ ಕೇವಲ ₹10 ಕೋಟಿ ನೀಡಿರುವುದಾಗಿ ಪಿಂಕ್ ಬುಕ್ ಉಲ್ಲೇಖಿಸಿದೆ. ಇದು ಕಳೆದ ಫೆಬ್ರುವರಿಯಲ್ಲಿ ಮಂಡನೆಯಾದ ಮಧ್ಯಂತರ ಬಜೆಟ್‌ನಲ್ಲಿ ಮಂಜೂರಾಗಿದ್ದ ಅನುದಾನ. ಇದನ್ನು ಪುನರುಚ್ಚರಿಸಿರುವುದು ಬಿಟ್ಟರೆ ಬೇರೆ ಯಾವುದೇ ಉಲ್ಲೇಖ ಕಂಡುಬಂದಿಲ್ಲ.

ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು (KRIDE- Karnataka Rail Infrastructure Development Corporation) ರಾಜ್ಯದಲ್ಲಿ ರೈಲು ಯೋಜನೆಗಳ ಅನುಷ್ಠಾನದ ಹೊಣೆ ಹೊರುವ ಏಜೆನ್ಸಿಯನ್ನಾಗಿ (SPV- Special Purpose Vehicle) ರೂಪಿಸುವ ಪ್ರಸ್ತಾವಕ್ಕೆ ಚಾಲನೆ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಏಜೆನ್ಸಿ ಕಾರ್ಯಾರಂಭ ಮಾಡಬಹುದು. ಆದರೆ ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ದೊರಕದ ಕಾರಣ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಗಳು ನಡೆಯುವುದು ಅನುಮಾನ.

ಕಳೆದ ತಿಂಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮೂರನೇ ಪ್ರವೇಶ ದ್ವಾರ ಉದ್ಘಾಟಿಸಿ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರದ ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಸಂಬಂಧಿಸಿದ ಸಚಿವರನ್ನು ಭೇಟಿಯಾಗಿ, ಉಪನಗರ ರೈಲ್ವೆ ಯೋಜನೆ ಪ್ರಸ್ತಾವಕ್ಕೆ ಹೊಸ ವೇಗ ತಂದುಕೊಡುವ ಭರವಸೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಬೆಂಗಳೂರಿಗರ ಈ ನಿರೀಕ್ಷೆ ಈಡೇರಲಿಲ್ಲ.


ಮೂರು ವರ್ಷಗಳಿಂದ ಬೆಂಗಳೂರಿನ ಜನರು ಕಾಯುತ್ತಲೇ ಇದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವ್ಯವಸ್ಥಿತ ನಗರ ಸಾರಿಗೆಗಾಗಿ ಹೋರಾಡುತ್ತಿರುವ ಸಂಜೀವ್ ದ್ಯಾಮಣ್ಣನವರ್, ‘ರೈಲ್ವೆ ಇಲಾಖೆ ಕನಿಷ್ಠ ₹100 ಕೋಟಿ ಮಂಜೂರು ಮಾಡಿದ್ದರೆ ಯೋಜನೆ ಅನುಷ್ಠಾನಕ್ಕೆ ಕಳೆದ ವರ್ಷ ಸಿಕ್ಕಿದ್ದ ವೇಗವನ್ನು ಉಳಿಸಿಕೊಳ್ಳಬಹುದಿತ್ತು. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಸಾರಿಗೆ ಸಮಸ್ಯೆ ಉಲ್ಬಣಿಸುತ್ತಿದೆ. ಕೇಂದ್ರ ಸರ್ಕಾರ ಇತ್ತ ಗಮನ ಕೊಡಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

‘ಬೆಂಗಳೂರು–ಮಂಡ್ಯ, ಬೆಂಗಳೂರು–ತುಮಕೂರು, ಯಶವಂತಪುರ–ಯಲಹಂಕ ಮತ್ತು ಯಶವಂತಪುರ–ಹೊಸೂರು ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ರೂಪಿಸಲು ಸಲ್ಲಿಸಿದ್ದ ಪ್ರಸ್ತಾವಕ್ಕೂ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಲ್ಲ.

‘ಕಡಿಮೆ ವೆಚ್ಚದಲ್ಲಿ ಪೂರ್ಣಗೊಳಿಸಬಹುದಾದ ಹಾಗೂ ಹೆಚ್ಚು ಜನರಿಗೆ ಅನುಕೂಲವಾಗುವ ಯೋಜನೆಗಳತ್ತ ರೈಲ್ವೆ ಇಲಾಖೆ ಗಮನಕೊಟ್ಟಿಲ್ಲ. ₹100 ಕೋಟಿ ಮಂಜೂರು ಮಾಡಿದ್ದರೆ, ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅನುಷ್ಠಾನಕ್ಕೆ ತರುವುದರ ಜೊತೆಗೆ ಲೆವೆಲ್ ಕ್ರಾಸಿಂಗ್‌ ತೊಂದರೆಯಿಂದಲೂ ಮುಕ್ತಿ ಸಿಗುತ್ತಿತ್ತು. ಈ ಎರಡೂ ಕ್ರಮಗಳಿಂದ ರೈಲ್ವೆ ಸುರಕ್ಷತೆ ಮತ್ತು ಕಾರ್ಯಕ್ಷಮತೆ ವೃದ್ಧಿಸುತ್ತಿತ್ತು’ ಎಂದು ದ್ಯಾಮಣ್ಣನವರ್ ಅಭಿಪ್ರಾಯಪಟ್ಟರು.

ಮೈಸೂರು ನಿಲ್ದಾಣದ ದಟ್ಟಣೆ ಕಡಿಮೆ ಮಾಡುತ್ತಿದ್ದ ನಾಗನಹಳ್ಳಿ ಉಪನಗರ ಟರ್ಮಿನಲ್ ಪ್ರಸ್ತಾವಕ್ಕೂ ಮಾನ್ಯತೆ ಸಿಕ್ಕಿಲ್ಲ. ಬೈಯ್ಯಪ್ಪನಹಳ್ಳಿಯಲ್ಲಿ ರೈಲು ಬೋಗಿಗಳ ಸ್ವಚ್ಛತೆ ಮತ್ತು ನಿರ್ವಹಣಾ ಟರ್ಮಿನಲ್ ಪ್ರಸ್ತಾವಕ್ಕೆ ಕೇವಲ ₹20 ಕೋಟಿ ಮಂಜೂರಾಗಿದೆ. ಬೈಯ್ಯಪ್ಪನಹಳ್ಳಿ ಟರ್ಮಿನಲ್‌ಗೆ ₹45 ಕೋಟಿ ಬೇಕಿತ್ತು.

‘ಹೊಸ ರೈಲು ಮಾರ್ಗ ಯೋಜನೆಗಳಿಗೆ ಈ ಬಾರಿ ₹480 ಮತ್ತು ಜೋಡಿ ರೈಲು ಮಾರ್ಗಗಳಿಗೆ ₹823 ಕೋಟಿ ಮಂಜೂರಾಗಿದೆ’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯಾ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !