ಬುಧವಾರ, ಅಕ್ಟೋಬರ್ 27, 2021
21 °C

ಬಹುಮಹಡಿ ಕಟ್ಟಡ ಕುಸಿತ: ಮಹಿಳೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಸ್ತೂರಿನಗರದ ಡಾಕ್ಟರ್ಸ್ ಬಡಾವಣೆಯಲ್ಲಿದ್ದ ‘ಸನ್‌ಶೈನ್’ ಅಪಾರ್ಟ್‌ಮೆಂಟ್‌ ಸಮುಚ್ಚಯ ಕುಸಿದು ಬಿದ್ದಿರುವ ಪ್ರಕರಣದಲ್ಲಿ, ಕಟ್ಟಡದ ಮಾಲೀಕರಾದ ಆಯೇಷಾ ಬೇಗ್‌ ಅವರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಬೆನ್ನಿಗಾನಹಳ್ಳಿ (ವಾರ್ಡ್‌ ನಂ.50) ವ್ಯಾಪ್ತಿಯಲ್ಲಿರುವ ಡಾಕ್ಟರ್ಸ್ ಬಡಾವಣೆಯ 2ನೇ ಅಡ್ಡರಸ್ತೆಯಲ್ಲಿ ಎ.ಎನ್‌. ಬಿಲ್ಡರ್ಸ್‌ ಅಡಿಯಲ್ಲಿ ಕಟ್ಟಡ ನಿರ್ಮಿಸಲಾಗಿತ್ತು. ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡು ಗುರುವಾರ ಮಧ್ಯಾಹ್ನ ಕಟ್ಟಡ ಕುಸಿದು ಬಿದ್ದಿತ್ತು.

‘ಕಟ್ಟಡ ನಿರ್ಮಾಣದ ವೇಳೆ ಯಾವುದೇ ನಿಯಮಗಳನ್ನು ಪಾಲಿಸಿರಲಿಲ್ಲ. ಎ.ಎನ್‌. ಬಿಲ್ಡರ್ಸ್‌ನ ಆಯೇಷಾ ಬೇಗ್, ಮೊಹಮ್ಮದ್ ಆಸೀಫ್ ಹಾಗೂ ಮೊಹಮ್ಮದ್ ಇಯಾಸುದ್ದೀನ್ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ದೂರು ನೀಡಿದ್ದರು. ಮೂವರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಆಯೇಷಾ ಬೇಗ್‌ ಅವರನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಕಟ್ಟಡ ತೆರವು ಕಾರ್ಯಾಚರಣೆ: ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿತ್ತು. ಇದೀಗ, ಕುಸಿದು ಬಿದ್ದಿರುವ ಕಟ್ಟಡದ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ.

‘ಗುರುವಾರ ಮಧ್ಯಾಹ್ನದಿಂದಲೇ ಕಾರ್ಯಾಚರಣೆ ನಡೆಯುತ್ತಿದೆ. ಮಳೆಯಿಂದಾಗಿ ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರ ಪುನಃ ಕಾರ್ಯಾಚರಣೆ ಶುರು ಮಾಡಲಾಗಿದೆ. ಸಂಪೂರ್ಣವಾಗಿ ತೆರವು ಮಾಡಲು ಎರಡು ದಿನ ಬೇಕಾಗಬಹುದು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು