‘ಪ್ರಮುಖ ಆರೋಪಿ ಅಪ್ಪು ಮನೆಗಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ. ಹತ್ತು ವರ್ಷಗಳಿಂದ ಮನೆಯ ಬೀಗ ಒಡೆದು ಚಿನ್ನಾಭರಣ, ನಗದು ಕಳ್ಳತನ ಮಾಡುತ್ತಿದ್ದ. ಆಗಸ್ಟ್ 16ರಂದು ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿ ಮನೆಯೊಂದರ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ವಿದೇಶಿ ಕರೆನ್ಸಿ ಕಳ್ಳತನ ಮಾಡಿದ್ದ. ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಅಪ್ಪು ನೀಡಿದ ಮಾಹಿತಿ ಆಧರಿಸಿ ಮತ್ತಿಬ್ಬರನ್ನು ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ.
‘ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಬತ್ತು ಮನೆ ಕಳ್ಳತನ ಪ್ರಕರಣದಲ್ಲಿ ಅಪ್ಪು ಭಾಗಿಯಾಗಿದ್ದಾನೆ. ಕಳ್ಳತನ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಅಪ್ಪು, ಜಾಮೀನ ಮೇಲೆ 13 ದಿನಗಳ ಹಿಂದೆ ಹೊರ ಬಂದಿದ್ದ. ಮದ್ಯ ಹಾಗೂ ಗಾಂಜಾ ಸೇವಿಸುತ್ತಿದ್ದ ಆರೋಪಿ, ಹಣಕ್ಕಾಗಿ ಕಳ್ಳತನ ಮಾಡುತ್ತಿದ್ದ’ ಎಂದು ತಿಳಿಸಿದ್ದಾರೆ.