ಗುರುವಾರ , ಫೆಬ್ರವರಿ 27, 2020
19 °C
ಕಟ್ಟಡದಲ್ಲೇ ವಾಸವಿದ್ದನಿಂದ ಕೃತ್ಯ

ಮಣಪ್ಪುರಂ ಫೈನಾನ್ಸ್‌ ಕಳ್ಳತನಕ್ಕೆ ಯತ್ನ; ಅಲಾರಾಂನಿಂದ ಸಿಕ್ಕಿಬಿದ್ದ ಆರೋಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿರುವ ಮಣಪ್ಪುರಂ ಫೈನಾನ್ಸ್ ಕಂಪನಿ ಕಚೇರಿಯಲ್ಲಿ ಕಳ್ಳತನ ನಡೆಸಲು ಯತ್ನಿಸಿದ್ದ ಆರೋಪಿ ಕಾರ್ತಿಕ್ (21) ಎಂಬಾತ ಕಚೇರಿಯಲ್ಲಿ ಅಳವಡಿಸಿದ್ದ ಅಲಾರಾಂನಿಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಕೆ.ಆರ್.ಪೇಟೆ ತಾಲ್ಲೂಕಿನ ಬೀರುವಳ್ಳಿಯ ಕಾರ್ತಿಕ್‌ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಫೈನಾನ್ಸ್ ಕಂಪನಿ ಕಚೇರಿ ಇರುವ ಕಟ್ಟಡದ ಕೆಳ ಮಹಡಿಯಲ್ಲಿ ಜ್ಯೂಸ್ ಅಂಗಡಿ ಇದ್ದು, ಅಲ್ಲಿಯೇ ಆತ ಕೆಲಸಕ್ಕೆ ಸೇರಿದ್ದ. ಕಟ್ಟಡದ ಟೆರೇಸ್‌ನಲ್ಲಿರುವ ಕೊಠಡಿಯಲ್ಲಿ ಉಳಿದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಫೈನಾನ್ಸ್ ಕಂಪನಿಯ ವಹಿವಾಟನ್ನು ನಿತ್ಯವೂ ನೋಡುತ್ತಿದ್ದ ಆರೋಪಿ, ಹಲವು ದಿನಗಳಿಂದ ಕಾದು ಕುಳಿತು ಸಂಚು ರೂಪಿಸಿ ಕೃತ್ಯ ಎಸಗಲು ಮುಂದಾಗಿದ್ದ’ ಎಂದು ತಿಳಿಸಿದರು.

ಗಸ್ತು ಸಿಬ್ಬಂದಿಗೆ ಸಿಕ್ಕಿಬಿದ್ದ: ‘ಬುಧವಾರ ನಸುಕಿನಲ್ಲಿ ಕಚೇರಿಯ ಶೆಟರ್‌ನ ಬೀಗವನ್ನು ರಾಡ್‌ನಿಂದ ಮುರಿದು ಒಳಗೆ ನುಗ್ಗಿದ್ದ ಆರೋಪಿ, ಭದ್ರತಾ ಕಪಾಟು ತೆರೆಯಲು ಯತ್ನಿಸಿದ್ದ. ಅದೇ ವೇಳೆ ಅಲಾರಾಂ ಆನ್‌ ಆಗಿತ್ತು. ಅದನ್ನು ಬಂದ್ ಮಾಡಿದ್ದ ಆರೋಪಿ, ಕಪಾಟು ತೆರೆಯುವುದನ್ನು ಮುಂದುವರಿಸಿದ್ದ. ಈ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲೂ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದರು.

’ಅಲಾರಾಂ ಆನ್‌ ಆಗಿದ್ದ ಸಂದೇಶ ಕಚೇರಿಯ ವ್ಯವಸ್ಥಾಪಕ ರಾಜಣ್ಣ ಅವರ ಮೊಬೈಲ್‌ಗೆ ಬಂದಿತ್ತು. ಕಳ್ಳತನದ ಸುಳಿವು ಸಿಗುತ್ತಿದ್ದಂತೆ ಅವರೇ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿದ್ದರು. ಅದಾಗಿ ಕೆಲ ನಿಮಿಷಗಳಲ್ಲೇ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಆರೋಪಿ ಕಾರ್ತಿಕ್ ಕಚೇರಿಯೊಳಗೆ ಇದ್ದ. ಚಿನ್ನಾಭರಣ ಹಾಗೂ ನಗದು ದೋಚಿ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳುತ್ತಿದ್ದಾನೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು