ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾದಲ್ಲಿ ಪಿಎಚ್‌.ಡಿ

ಜಿ.ಪರಮೇಶ್ವರ
Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಓದಿದ್ದು ಕೃಷಿ ವಿಜ್ಞಾನ, ಬಯಸಿದ್ದು ಕೃಷಿ ವಿಜ್ಞಾನಿ ಆಗಬೇಕೆಂದು. ಆದರೆ, ಹಿಡಿದಿದ್ದು ರಾಜಕಾರಣದ ಹಾದಿ. ಮೂರು ದಶಕಗಳ ರಾಜಕೀಯ ಜೀವನದಲ್ಲಿ ಇವರು ನೋವಿಗಿಂತ ನಲಿವು ಉಂಡಿದ್ದೇ ಹೆಚ್ಚು.

–ಇದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ರಾಜಕೀಯ ಜೀವನದ ಕಿರು ಚಿತ್ರಣ.

ಶ್ರೀಮಂತ ದಲಿತ ಕುಟುಂಬದಲ್ಲಿ ಜನಿಸಿದ ಪರಮೇಶ್ವರ, ರಾಜೀವ್‌ ಗಾಂಧಿ ಅವರ ಆಹ್ವಾನದ ಮೇರೆಗೆ ರಾಜಕೀಯ ಪ್ರವೇಶಿಸಿದರು. ರಾಜಕೀಯದಲ್ಲಿ ಆಕ್ರಮಣಕಾರಿ ಪ್ರವೃತ್ತಿ ತೋರದ ಪರಮೇಶ್ವರ ಸಂಯಮ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಪಿಎಚ್‌.ಡಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಆಸ್ಟ್ರೇಲಿಯಾದಲ್ಲಿ ಪಿಎಚ್‌.ಡಿ ಪದವಿ ಪಡೆದರು. ತಂದೆ ಗಂಗಾಧರಯ್ಯ ಪರಿಷತ್‌ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಕುಟುಂಬ ತುಮಕೂರಿನಲ್ಲಿ ಶಿಕ್ಷಣ (ಸಿದ್ಧಾರ್ಥ) ಸಂಸ್ಥೆಗಳನ್ನು ನಡೆಸುತ್ತಿತ್ತು.

1993ರಲ್ಲಿ ಮೊದಲ ಬಾರಿಗೆ ಮಂತ್ರಿ ಆದಾಗ ಅವರಿಗಿನ್ನೂ 42 ವರ್ಷ. ವೀರಪ್ಪ ಮೊಯಿಲಿ ನೇತೃತ್ವದ ಸಂಪುಟದಲ್ಲಿ ಅತ್ಯಂತ ಕಿರಿಯ ಸಚಿವ ಎನಿಸಿಕೊಂಡಿದ್ದರು. ವಿದೇಶದಲ್ಲಿ ಶಿಕ್ಷಣ ಪಡೆದು ಬಂದಿದ್ದ ಪರಮೇಶ್ವರ, ಸೊಗಸಾಗಿ ಇಂಗ್ಲಿಷ್‌ ಮಾತನಾಡುತ್ತಿದ್ದರು. ಕನ್ನಡ ಭಾಷೆಯಲ್ಲಿ ಹಿಡಿತ ಮತ್ತು ನಯ– ನಾಜೂಕು ಇತ್ತು. ಹೀಗಾಗಿ ಪಕ್ಷದಲ್ಲಿ ಎಲ್ಲರ ಗಮನ ಸೆಳೆದರು.

2013ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಪರಮೇಶ್ವರ, ಕೊರಟಗೆರೆ ಕ್ಷೇತ್ರದಲ್ಲಿ ಸೋತಿದ್ದರು. ಮುಖ್ಯಮಂತ್ರಿ ಆಗುವ ಅವಕಾಶದ ಬಾಗಿಲು ಮುಚ್ಚಿ ಹೋಯಿತು. 2014ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಮಂತ್ರಿಮಂಡಲ ಸೇರಲು ಎರಡು ವರ್ಷ ಪರದಾಡಬೇಕಾಯಿತು. ಸಿದ್ದರಾಮಯ್ಯ ವಿರುದ್ಧ ನಿರಂತರವಾಗಿ ಮುಸುಕಿನ ಗುದ್ದಾಟ ನಡೆಸುತ್ತಲೇ ಬಂದಿದ್ದರು. ‘ದಲಿತ ಮುಖ್ಯಮಂತ್ರಿ’ ಕಲ್ಪನೆಯನ್ನು ಜೀವಂತವಾಗಿ ಇಟ್ಟು ಅದೃಷ್ಟಕ್ಕಾಗಿ ಕಾದು ಕುಳಿತರು.ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತು ಹೋಯಿತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಿಂದ ಪರಮೇಶ್ವರ ಅವರ ಭಾಗ್ಯದ ಬಾಗಿಲು ತೆರೆಯಿತು.

*1993–94: ವೀರಪ್ಪ ಮೊಯಿಲಿ ನೇತೃತ್ವದ ಸಂಪುಟದಲ್ಲಿ ರೇಷ್ಮೆ ಸಚಿವ

*1999– 2004: ಎಸ್‌.ಎಂ.ಕೃಷ್ಣ ನೇತೃತ್ವದ ಮಂತ್ರಿ ಮಂಡಲದಲ್ಲಿ ಉನ್ನತ ಶಿಕ್ಷಣ ಸಚಿವ

*2015–2017: ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಗೃಹ ಸಚಿವ ಪಕ್ಷದಲ್ಲಿ ಜವಾಬ್ದಾರಿ

*1989–1992 ಕೆಪಿಸಿಸಿ ಜಂಟಿ ಕಾರ್ಯದರ್ಶಿ

*1992–1997 ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

*1997– 1999 ಕೆಪಿಸಿಸಿ ಉಪಾಧ್ಯಕ್ಷ

*2010ರಿಂದ ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT